ಪುತ್ತೂರು:ಬಡ ಹಾಗೂ ಹಿಂದುಳಿದ ಮುಸ್ಲಿಮರಿಗಾಗಿ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿ ಮಾಡಿದೆ.ಆದರೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು,ವಕ್ಫ್ ತಿದ್ದುಪಡಿ ಮಸೂದೆ ರಾಜ್ಯದಲ್ಲಿ ಜಾರಿಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಅವರು ಮುಸಲ್ಮಾನರನ್ನು ತುಷ್ಟೀಕರಣ ಮಾಡುವ ಭರದಲ್ಲಿ ಈ ರೀತಿಯ ಹೇಳಿಕೆಯ ವೀಡಿಯೋವನ್ನು ಹರಿಯ ಬಿಟ್ಟಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಜಿ.ಶೇಟ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕರ್ನಾಟಕದ ಯಾವುದೇ ಶಾಸಕರು ಈ ರೀತಿ ಹೇಳಿಕೆ ನೀಡಿಲ್ಲ.ಆದರೆ ಪುತ್ತೂರಿನ ಶಾಸಕರು, ಹಿಂದೂಗಳ ಹಿತ ಕಾಯಲು ಸದಾ ಸಿದ್ದಾ. ಅದಕ್ಕಾಗಿ ಕೇಸರಿ ಶಾಲನ್ನು ಹಾಕಿಕೊಂಡಿರುವುದಾಗಿ ಹೇಳಿಕೆ ನೀಡಿದ್ದರೂ ಈಗ ಅವರ ನಕಲಿ ಹಿಂದುತ್ವದ ಮುಖವಾಡ ಕಳಚಿ ಬಿದ್ದಿದೆ ಎಂದರು.ಮುಸ್ಲಿಂ ತುಷ್ಟೀಕರಣಕ್ಕಾಗಿ, ಹಿಂದೂಗಳಿಗೆ ಮಾರಕವಾಗಿ ಪರಿಣಮಿಸಿದ್ದ ಹಳೇಯ ವಕ್ ಕಾನೂನನ್ನೇ ಸಮರ್ಥಿಸಿಕೊಂಡಿರುವ ಶಾಸಕರಿಗೆ ಸಾಂವಿಧಾನಿಕವಾಗಿ ವಕ್ಫ್ ತಿದ್ದುಪಡಿ ಕಾಯಿದೆ ಪ್ರಕ್ರಿಯೆ ನಡೆದಿರುವುದು ತಿಳಿದಿಲ್ಲವೇ ಎಂದು ಅರುಣ್ ಜಿ.ಶೇಟ್ ಪ್ರಶ್ನಿಸಿದರು.
ವಕ್ ತಿದ್ದುಪಡಿ ಕಾಯಿದೆಯು ಸಂಸತ್ತಿನಲ್ಲಿ ಹಾಗೂ ಜಂಟಿ ಸದನ ಸಮಿತಿಯಲ್ಲಿ ಚರ್ಚೆಯಾಗಿ ಬಹುಮತದಿಂದ ಸಾಂವಿಧಾನಿಕ ವಿಧಾನದಲ್ಲೇ ಅಂಗೀಕಾರಗೊಂಡಿದೆ.ಅದು ರಾಷ್ಟ್ರಪತಿಯವರಿಂದಲೂ ಅಂಕಿತಗೊಂಡು ಪೂರ್ಣ ಪ್ರಮಾಣದ ಕಾಯಿದೆಯಾಗಿ ರೂಪುಗೊಂಡಿದೆ. ಆದರೂ ಈ ಕಾಯಿದೆಯ ಮೇಲೆ ಕೋರ್ಟ್‌ಗೆ ಹೋಗುವ ಅವಕಾಶವಿದೆ ಮತ್ತು ಸಾಂವಿಧಾನಿಕವಾಗಿ ಈ ವಿಚಾರವು ಇದೀಗ ಸುಪ್ರೀಂಕೋರ್ಟ್‌ನ ಅಂಗಳದಲ್ಲಿದೆ ಎಂದರು.
ಕಾಂಗ್ರೆಸ್ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ:
ಯಾವತ್ತೂ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ಹಿಂಬಾಗಿಲಿನ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಬಡ ಹಾಗೂ ಹಿಂದುಳಿದಿರುವ ಮುಸಲ್ಮಾನರ ಏಳಿಗೆಗಾಗಿ ಮಾಡಿರುವ ವಕ್ಫ್ ತಿದ್ದುಪಡಿ ಕಾಯಿದೆಯಿಂದಾಗಿ ಕಾಂಗ್ರೆಸ್‌ನವರು ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಸುಳ್ಳು ಹರಡಿಸಿ ಮುಸ್ಲಿಮರ ತಲೆ ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಮುಸ್ಲಿಮರು ವಿದ್ಯಾವಂತರಾದರೆ ಅವರ ಮತ ಕಾಂಗ್ರೆಸ್‌ಗೆ ಸಿಗುವುದಿಲ್ಲ ಎಂಬ ಭಯದಿಂದ ಕಾಂಗ್ರೆಸ್ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂದರು.
ಹಳೇ ವಕ್ಫ್ ಕಾನೂನಿನಿಂದ ಎಷ್ಟು ಬಡ ಮುಸ್ಲಿಮರಿಗೆ ಪ್ರಯೋಜನವಾಗಿದೆ? ಕೊರೋನಾ ಕಾಲದಲ್ಲಿ ಎಷ್ಟು ಬಡ ಮುಸ್ಲಿಮರಿಗೆ ವಕ್ಪ್‌ನಿಂದ ಕಿಟ್ ನೀಡಿದ್ದಾರೆ ಎಂದು ತೋರಿಸಿಕೊಡಲಿ ಎಂದ ಅವರು,ವಕ್ಫ್ ತಿದ್ದುಪಡಿಯಿಂದ ಬಡ, ಹಿಂದುಳಿದ ಮುಸ್ಲಿಮರಿಗೆ ಲಾಭ.ವಕ್ಫ್ ನಿಂದ ಬಡ ಮುಸ್ಲಿಂ ಜನಾಂಗಕ್ಕೆ ನೇರ ಲಾಭ ದೊರೆಯುವ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರಕಾರ ದಿಟ್ಟತನದ ಹೆಜ್ಜೆಯಿಟ್ಟು ಕಾಯ್ದೆಗೆ ತಿದ್ದುಪಡಿ ಮಾಡಿದೆ.ವಕ್ಫ್ ತಿದ್ದುಪಡಿಯ ಬಗ್ಗೆ ಬಡ ಹಾಗೂ ಹಿಂದುಳಿದ ಮುಸ್ಲಿಂಮರು ಸಂತೋಷ ಪಟ್ಟಿದ್ದಾರೆ.ಸರತಿ ಸಾಲಿನಲ್ಲಿ ನಿಂತು ಮೋದಿಗೆ ಧನ್ಯವಾದ ತಿಳಿಸಿದ್ದಾರೆ.ಆದರೂ ಒಂದಿಬ್ಬರ ಲಾಭಕ್ಕಾಗಿ ತುಷ್ಟೀಕರಣದ ಮೂಲಕ ಬಡ ಮುಸ್ಲಿಮರ ಮುಗ್ದತೆಯನ್ನು ಓಟ್ ಬ್ಯಾಂಕ್‌ಗಾಗಿ ಬ್ಲ್ಯಾಕ್‌ಮೇಲ್ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದೆ.ಇದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆಯಾಗಿದೆ ಎಂದು ಆರೋಪಿಸಿದರು.
ಮುಸ್ಲಿಂ ಜನಾಂಗದ ಬಡ ಹಾಗೂ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹಳೆಯ ಕಾನೂನನ್ನು ತಿದ್ದುಪಡಿ ಮಾಡಿ ಹೊಸ ಉಮೀದ್ ಎಂಬುದಾಗಿ ಜಾರಿಗೆ ತಂದು ವಂಚಿತ ಮುಸಲ್ಮಾನರ ಬಾಳಿನಲ್ಲಿ ಆಶಾಕಿರಣವನ್ನು ಮೂಡಿಸಿದೆ.ಹೊಸ ವಕ್ಫ್ ಕಾಯಿದೆಗೆ ವಿರೋಧ ಮಾಡುವವರು ಅದಲ್ಲಿರುವ ಅಸಂವಿಧಾನಿಕ ವಿಚಾರಗಳನ್ನು ತೋರಿಸಿಕೊಡಲಿ.ವಕ್ಫ್ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಬೇಕಾದರೆ ಹೊಸ ಕಾನೂನಿನ ತಿದ್ದುಪಡಿಯನ್ನು ಓದಿನೋಡಬೇಕು. ಹೊಸ ಕಾನೂನನ್ನು ಓದಿದವರು ಪ್ರತಿಭಟನೆಗೆ ಹೋಗಲು ಸಾಧ್ಯವಿಲ್ಲ.ತಿದ್ದುಪಡಿಯ ಪರವಾಗಿ ನಿಲ್ಲಲಿದ್ದಾರೆ.ಯಾರಿಗೂ ಅನ್ಯಾಯವಾಗದಂತೆ ವಕ್ಫ್ ಕಾನೂನು ತಿದ್ದುಪಡಿ ಮಾಡಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಮಹೇಶ್ ರೈ ಕೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.