ʼರಿಯಲ್ ಎಸ್ಟೇಟ್ ಉದ್ಯಮಿಗಾಗಿ ಪುತ್ತೂರಿನ ಯುಜಿಡಿ ಬಲಿʼ – ಪತ್ರಿಕಾಗೋಷ್ಠಿಯಲ್ಲಿ ಹೆಚ್.ಮಹಮ್ಮದ್ ಆಲಿ ಆರೋಪ

0

ಪುತ್ತೂರು:ಪುತ್ತೂರು ನಗರದ ಒಳ ಚರಂಡಿ ಯೋಜನೆಯ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಾದಿರಿಸಲಾದ ಸ್ಥಳದಲ್ಲಿ ಸಂಸ್ಕರಣಾ ಘಟಕಕ್ಕೆ ಅಡ್ಡಿ ಪಡಿಸುವ ಮೂಲಕ ಜಾಗವನ್ನು ಕಬಳಿಸುವ ಪ್ರಯತ್ನ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರಿಂದ ನಡೆಯುತ್ತಿದೆ ಎಂದು ನಗರ ಸಭೆ ಮಾಜಿ ವಿಪಕ್ಷ ನಾಯಕ, ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹೆಚ್.ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.


ನಗರಕ್ಕೆ ಒಳಚರಂಡಿ ಯೋಜನೆಗೆ ಸರ್ವೆ ನಡೆದು ಅದಕ್ಕೆ ಬೇಕಾದ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಕೊರಜ್ಜಿಮಜಲು ಎಂಬಲ್ಲಿ ಸರ್ವೆ ನಂಬರ್ 102/9ರಲ್ಲಿ 5.50 ಎಕರೆ ಜಮೀನನ್ನು ಸಹಾಯಕ ಆಯುಕ್ತರು ಕಾದಿರಿಸಿ ಆದೇಶ ಮಾಡಿರುತ್ತಾರೆ.ಕೇಂದ್ರ ಸರಕಾರದ ಸ್ವಚ್ಚ ಭಾರತ್ ಯೋಜನೆಯಲ್ಲಿ ರಾಜ್ಯ ಸರಕಾರದ ಪಾಲುದಾರಿಕೆಯಲ್ಲಿ ಒಳಚರಂಡಿ ಯೋಜನೆಗೆ ರೂ.19 ಕೋಟಿ ಅನುದಾನವೂ ಮಂಜೂರಾಗಿದೆ. ಈ ಅನುದಾನದಲ್ಲಿ ನಗರದ ಒಂದು ವಲಯಕ್ಕೆ ಸೀಮಿತವಾಗಿ ಒಳಚರಂಡಿ ಯೋಜನೆ ಅನುಷ್ಟಾನ ಮಾಡಲು ಇಲಾಖೆ ಮುಂದಾಗಿದೆ.ಆದರೆ, ಇದಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರಿಂದ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಲಿ ಆರೋಪಿಸಿದರು.


ಒಳಚರಂಡಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕಾದಿರಿಸಲಾಗಿರುವ ನಿವೇಶನದ ಬಳಿಯೇ ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಅವರು ತನ್ನ ಪತ್ನಿ ಹೆಸರಿನಲ್ಲಿ ಖರೀದಿಸಿದ ಜಮೀನಿನಲ್ಲಿ ವಸತಿ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡಲು ಮುಂದಾಗಿದ್ದಾರೆ.ಇಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣವಾದರೆ ಬಡಾವಣೆಯ ನಿವೇಶನವನ್ನು ಯಾರೂ ಖರೀದಿಸಲು ಸಾಧ್ಯವಿಲ್ಲವೆಂದು, ಇದಕ್ಕಾಗಿ ಒಳಚರಂಡಿ ಮಲತ್ಯಾಜ್ಯ ಸಂಸ್ಕರಣಾ ಘಟಕವನ್ನೇ ರದ್ದು ಪಡಿಸುವ ಹುನ್ನಾರ ನಡೆಯುತ್ತಿದ್ದು ಇದಕ್ಕಾಗಿ ನಗರಸಭೆಯಿಂದ ದಾರಿ ದೀಪ ಅಳವಡಿಸಲಾಗಿದ್ದ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಿ ಕಾಂಪೌಂಡ್ ನಿರ್ಮಿಸಿದ್ದಾರೆ.ಇದಕ್ಕೆ ಮೊದಲೇ ದಿಕ್ಸೂಚಿ ಫಲಕವನ್ನು ಕಿತ್ತು ಎಸೆದಿದ್ದಾರೆ.ಇದರ ಬಗ್ಗೆ ಸಾರ್ವಜನಿಕರು ಲಿಖಿತ ದೂರು ನೀಡಿದ್ದರೂ ನಗರ ಸಭೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಎಂದು ಆಲಿ ಆರೋಪಿಸಿದರಲ್ಲದೆ, ನಾನೇ ಪೌರಾಯುಕ್ತರಿಗೆ ಮೌಖಿಕವಾಗಿ ನೀಡಿದ ದೂರಿನಂತೆ ನಗರ ಸಭೆಯ ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಹೋದ ಸಮಯದಲ್ಲಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೊಬೈಲ್ ಕಿತ್ತು ಅದರಲ್ಲಿರುವ ರಸ್ತೆಯ ಫೋಟೋಗಳನ್ನು ಡಿಲೀಟ್ ಮಾಡಿ ಅಽಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಈ ಘಟನೆಗೆ ಸಂಬಂಧಿಸಿ ನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ ಎಂದು ಆಲಿ ತಿಳಿಸಿದರು.


ಹೈಕೋರ್ಟ್‌ನಿಂದ ತಡೆಯಾಜ್ಞೆ:
ಒಳಚರಂಡಿ ಯೋಜನೆಗೆ ಸರಕಾರ ಕಾದಿರಿಸಿದ ನಿವೇಶನದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸದಂತೆ ಸ್ಥಳೀಯ ನಿವಾಸಿ ಬಾಬು ನಾಯ್ಕ ಎಂಬವರು ಹೈಕೋರ್ಟ್ ಮುಖಾಂತರ ತಡೆಯಾಜ್ಞೆ ತಂದಿದ್ದಾರೆ.
ಬಡಾವಣೆಯ ಪ್ರಸ್ತಾವನೆಯನ್ನು ಅನುಮೋದಿಸದಂತೆ ನಗರ ಸಭೆ ಪೌರಾಯುಕ್ತರು ಪೂಡಾಕ್ಕೆ ಲಿಖಿತ ಆಕ್ಷೇಪವನ್ನು ಸಲ್ಲಿಸಿದ್ದಾರೆ.ಆ ಬಳಿಕಪೌರಾಯಕ್ತರು ಸುಮ್ಮನಿರುವುದು ಹಾಗೂ ನಗರ ಸಭಾ ಆಡಳಿತವು, ಮುಚ್ಚಿರುವ ರಸ್ತೆಯನ್ನು ಹಾಗೂ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳದ ಅತಿಕ್ರಮಣವನ್ನು ತೆರವುಗೊಳಿಸದೇ ಇರುವುದು, ಉದ್ಯಮಿಯ ಕಾನೂನು ಬಾಹಿರ ಕೃತ್ಯಕ್ಕೆ ಪರೋಕ್ಷ ಬೆಂಬಲ ನೀಡಿರುವುದು ಎದ್ದು ಕಾಣುತ್ತಿದೆ ಎಂದು ಆಲಿ ಆರೋಪಿಸಿದರು.


ಮಲತ್ಯಾಜ್ಯ ವಿಲೇವಾರಿ ಘಟಕ ಅಗತ್ಯ:
ನಗರದಲ್ಲಿ ಈಗಾಗಲೇ ಸಾಕಷ್ಟು ಆಸ್ಪತ್ರೆಗಳು, ಮದುವೆ ಹಾಲ್‌ಗಳು,ವಾಣಿಜ್ಯ ಮಳಿಗೆಗಳು, ಲೇ ಔಟ್‌ಗಳು ಹಾಗೂ ಅಪಾರ್ಟ್ ಮೆಂಟ್‌ಗಳು ನಿರ್ಮಾಣವಾಗುತ್ತಿದೆ.ಅಲ್ಲದೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೂಡಾ ಮಂಜೂರಾಗಿದೆ.ಇದಕ್ಕಾಗಿ 400 ಬೆಡ್‌ನ ಆಸ್ಪತ್ರೆ ನಿರ್ಮಾಣವಾಗಲಿದ್ದು ಇವೆಲ್ಲದರ ಮಲತ್ಯಾಜ್ಯವನ್ನು ವಿಲೇವಾರಿ ಮಾಡಲು ಒಳಚರಂಡಿ ಯೋಜನೆ ಅವಶ್ಯವಾಗಿರುತ್ತದೆ. ಆದರೆ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯ ಹಿತಕ್ಕಾಗಿ ಒಳಚರಂಡಿ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಖಂಡನೀಯವಾಗಿದೆ.ಇದರ ವಿರುದ್ಧ ಜನತೆ ಜಾಗೃತವಾಗಬೇಕಿದೆ ಎಂದು ಆಲಿ ಹೇಳಿದರು.


ರಿಯಲ್ ಎಸ್ಟೇಟ್ ಉದ್ಯಮ, ಲೇಔಟ್ ನಿರ್ಮಾಣ,ಅಪಾರ್ಟ್‌ಮೆಂಟ್‌ಗಳ ನಿರ್ಮಾಣಗಳು ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿದೆ.ಈ ರೀತಿಯ ಯಾವುದೇ ಉದ್ಯಮಗಳಿಗೆ ನಾನು ವಿರೋಽಯಲ್ಲ.ಆದರೆ ಜನಪರ ಯೋಜನೆಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟುಮಾಡುವ ಕಾನೂನು ಬಾಹಿರ ಲೇ ಔಟ್‌ಗಳು, ಅಪಾರ್ಟ್ ಮೆಂಟ್‌ಗಳ ವಿರುದ್ಧ ನಾನು ಹೋರಾಟ ನಡೆಸಲಿದ್ದೇನೆ ಎಂದು ಹೇಳಿದ ಮಹಮ್ಮದ್ ಆಲಿ,ಮಲತ್ಯಾಜ್ಯ ಘಟಕದ ಜಾಗದ ಅತಿಕ್ರಮಣ ಹಾಗೂ ರಸ್ತೆ ಮುಚ್ಚಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.


ಕಾನೂನು ಹೋರಾಟ:
ರಾಜಕೀಯ ಪ್ರಭಾವಕ್ಕೊಳಗಾಗಿ ಅತಿಕ್ರಮಣವನ್ನು ತೆರವುಗೊಳಿಸದಿದ್ದಲ್ಲಿ ಪುತ್ತೂರು ನಗರ ಯೋಜನಾ ಪ್ರಾಽಕಾರ ಹಾಗೂ ನಗರ ಸಭೆಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.ನಾನು ಯಾವುದೇ ವಿಚಾರದಲ್ಲಿ ಒಂದು ಬಾರಿ ಕೈ ಹಾಕಿದರೆ ರಿವರ್ಸ್ ಗೇರ್ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಆಲಿಯವರು, ಉಜ್ವಲ್ ರವರು ಲೇ ಔಟ್‌ನ್ನು ನಿಯಮ ಪ್ರಕಾರ ಮಾಡಿದರೆ ನನ್ನ ಆಕ್ಷೇಪವಿಲ್ಲ.ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.


ನಗರ ಸಭಾ ಸದಸ್ಯ ರಿಯಾಝ್ ಪರ್ಲಡ್ಕ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಅಲಿಕುಂಞಿ ಕೊರಿಂಗಿಲ,ನಗರ ಕಾಂಗ್ರೆಸ್ ಕಾರ್ಯದರ್ಶಿ ಸೈಮನ್,ಕಾರ್ಯಕರ್ತ ರಾಮಣ್ಣ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ನ ದುಷ್ಟಕೂಟದ ಬೆಂಬಲ
ಆಕ್ಷೇಪಣೆಯ ಮಧ್ಯೆಯೂ ಅದನ್ನು ರದ್ದುಪಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.ಇದಕ್ಕೆ ಪುತ್ತೂರಿನ ರಾಜಕಾರಣಿಗಳು ಬೆಂಬಲ ಕೊಡುವ ಕೆಲಸವಾಗುತ್ತಿದೆ.ಕಾಂಗ್ರೆಸ್‌ನ ದುಷ್ಟಕೂಟಗಳು ಉದ್ಯಮಿಯ ಪರವಾಗಿ ನಿಂತಿದೆ.ದುಷ್ಟಕೂಟಕ್ಕೆ ಸಿದ್ದಾಂತವಿಲ್ಲ.ಅವರು ಮಾಡಿದ್ದೇ ಸಿದ್ದಾಂತ.ಈ ವಿಚಾರದಲ್ಲಿ ಬಿಜೆಪಿಗಿಂತ ಹೆಚ್ಚು ಬೆಂಬಲ ಕೊಡುತ್ತಿರುವುದು ಇದೇ ದುಷ್ಟಕೂಟ.ಕಾಂಗ್ರೆಸ್ ಸೋಲಿಸಲು ಬಿಜೆಪಿಗೆ ಬೆಂಬಲ ಕೊಟ್ಟದ್ದು, ಕಾಂಗ್ರೆಸ್‌ನಲ್ಲಿ ಸತತ ಭಿನ್ನಮತ ಮಾಡಿ ತೊಂದರೆ ಕೊಡುತ್ತಿರುವುದೂ ಇದೇ ದುಷ್ಟಕೂಟವಾಗಿದೆ ಎಂದು, ಯಾರ ಹೆಸರೂ ಹೇಳದೆ ಮಹಮ್ಮದ್ ಆಲಿಯವರು ಆರೋಪ ಮಾಡಿದರು.


ಸತ್ಯಕ್ಕೆ ದೂರವಾದ ಆರೋಪ ಕಾನೂನು ಹೋರಾಟ ಮಾಡುತ್ತೇವೆ
ಯಾವುದೇ ಘಟಕಕ್ಕೆ ಅಡ್ಡಿಪಡಿಸುವ ಕೆಲಸ ನಾವು ಮಾಡಿಲ್ಲ.ಯಾವುದೇ ಜಾಗವನ್ನು ಕಬಳಿಸುವ ಪ್ರಯತ್ನವನ್ನೂ ಮಾಡಿಲ್ಲ.ನಮ್ಮ ವರ್ಗ ಜಾಗದಲ್ಲಿ ನಾವು ಇದ್ದೇವೆ.ನಾವು ಯಾವುದೇ ರಸ್ತೆಯನ್ನು ಅತಿಕ್ರಮಣ ಮಾಡಿಲ್ಲ.ನಾವು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಿದ್ದೇವೆ.ನಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದದು.ಈ ನಿಟ್ಟಿನಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಉದ್ಯಮಿ ಉಜ್ವಲ್ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here