ಎನ್.ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ಗುಂಡಿನ ದಾಳಿ: ಕೊಲೆಗೆ ಯತ್ನ – ರಾಕೇಶ್ ಮಲ್ಲಿ, ಅನುರಾಧ ರೈ, ನಿತೇಶ್ ಶೆಟ್ಟಿ, ವೈದ್ಯನಾಥನ್ ಮತ್ತಿತರರ ವಿರುದ್ಧ ಕೇಸು ದಾಖಲು

0

ವರದಿ: ಸಂತೋಷ್ ಕುಮಾರ್ ಶಾಂತಿನಗರ


ಪುತ್ತೂರು: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಭೂಗತ ಲೋಕದ ಮಾಜಿ ದೊರೆ ಎನ್.ಮುತ್ತಪ್ಪ ರೈಯವರ ಕಿರಿಯ ಪುತ್ರ ರಿಕ್ಕಿ ರೈ(35ವ) ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದಿದೆ.


ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಿಕ್ಕಿ ರೈ ಎ.18ರಂದು ಮಧ್ಯರಾತ್ರಿ 1 ಗಂಟೆ ವೇಳೆಗೆ ತನ್ನ ಫಾರ್ಚುನರ್ ಕಾರಿನಲ್ಲಿ ಚಾಲಕ ಬಸವರಾಜು ಮತ್ತು ಗನ್‌ಮ್ಯಾನ್ ರಾಜ್‌ಪಾಲ್ ಅವರೊಂದಿಗೆ ತೆರಳುತ್ತಿದ್ದ ವೇಳೆ ರಾಮನಗರ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿರುವ ಮುತ್ತಪ್ಪ ರೈ ನಿಲಯದ ಗೇಟ್ ಬಳಿ ಅವಿತು ಕುಳಿತಿದ್ದ ಆಗಂತುಕ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಎನ್. ಮುತ್ತಪ್ಪ ರೈವರ ಆಪ್ತರಾಗಿದ್ದು ಬಳಿಕ ದೂರವಾಗಿದ್ದ ಇಂಟಕ್ ಮುಖಂಡ ರಾಕೇಶ್ ಮಲ್ಲಿ, ಮುತ್ತಪ್ಪ ರೈಯವರ ಎರಡನೇ ಪತ್ನಿ ಅನುರಾಧ ರೈ, ಬೆಂಗಳೂರಿನ ನಿತೇಶ್ ಎಸ್ಟೇಟ್ ಮಾಲಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಮತ್ತಿತರರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 0096/2025ರನ್ವಯ ಬಿಎನ್‌ಎಸ್ 109, 3(5) ಮತ್ತು ಆರ್ಮ್ಸ್ ಆಕ್ಟ್ 1959ರಡಿ ಕೇಸು ದಾಖಲಾಗಿದೆ.


ಘಟನೆ ನಡೆದಾಗ ರಿಕ್ಕಿ ರೈ ಅವರ ಕಾರು ಚಲಾಯಿಸುತ್ತಿದ್ದ ಬೆಂಗಳೂರು ಗೆದ್ದಳಹಳ್ಳಿಯ ೪ನೇ ಕ್ರಾಸ್‌ನ ಎ.ಕೆ. ಕಾಲೋನಿಯ ನಿವಾಸಿ ಬಸವರಾಜು(೩೩ವ) ನೀಡಿದ ದೂರಿನಂತೆ ಬಿಡದಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಕೇಶವಮೂರ್ತಿ ಪಿ.ವೈ. ಅವರು ಪ್ರಕರಣ ದಾಖಲಿಸಿಕೊಂಡಿದ್ದು ರಾಮನಗರದ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ರಾಮನಗರ ಎಸ್‌ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಎಫ್ ಎಸ್‌ಎಲ್ ಘಟಕದವರು ಹಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ರಿಕ್ಕಿ ರೈ ಅವರ ಮನೆಯಲ್ಲಿರುವವರು ಮತ್ತು ಆಪ್ತರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜತೆಗೆ ರಿಕ್ಕಿ ರೈ ಅವರು ವಿದೇಶಕ್ಕೆ ಹೋಗಿ ಬಂದಿರುವ ಹಾಗೂ ಅವರ ವ್ಯವಹಾರಗಳ ಕುರಿತೂ ಪೊಲೀಸ್ ತಂಡ ಪರಿಶೀಲನೆ ನಡೆಸುತ್ತಿದೆ.‌


ಜೀವ ಬೆದರಿಕೆ ಇರುವುದಾಗಿ ಹೇಳುತ್ತಿದ್ದ ರಿಕ್ಕಿ ರೈ:
ರಿಕ್ಕಿ ರೈಯವರ ಕಾರು ಚಾಲಕರಾಗಿ ನಾಲ್ಕೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜು ಅವರು ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದು ರಿಕ್ಕಿ ರೈ ಅವರು ತನಗೆ ಜೀವ ಬೆದರಿಕೆ ಇರುವುದಾಗಿ ಹಲವು ಬಾರಿ ಹೇಳುತ್ತಿದ್ದರು. ಅಲ್ಲದೆ ಜಾಗರೂಕತೆಯಿಂದ ಇರುವಂತೆ ತಿಳಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿ ಮತ್ತು ಬಿಡದಿಯಲ್ಲಿ ವಾಸವಿರುತ್ತಿದ್ದ ರಿಕ್ಕಿ ರೈ ಅವರು ಎ.18ರಂದು ಸದಾಶಿವ ನಗರದ ಮನೆಯಿಂದ ಎ.18ರಂದು ಸಂಜೆ 6 ಗಂಟೆಗೆ ಹೊರಟು ಬಿಡದಿ ಮನೆಗೆ 7.30ಕ್ಕೆ ತಲುಪಿರುತ್ತೇವೆ. ಎಂದಿನಂತೆ ನಾವು ವಿಶ್ರಾಂತಿ ಪಡೆಯುತ್ತಿದ್ದು ಸುಮಾರು ರಾತ್ರಿ 11 ಗಂಟೆಗೆ ರಿಕ್ಕಿ ರೈ ಅವರು ಬೆಂಗಳೂರಿಗೆ ಹೊರಡಬೇಕೆಂದು ಹೇಳಿದ್ದರು. ರಿಕ್ಕಿ ರೈ ಅವರ ಕಪ್ಪು ಬಣ್ಣದ ಫಾರ್ಚುನರ್ ಕಾರು (ಕೆ.ಎ.-53. ಎಂಸಿ-7128)ನಲ್ಲಿ ರಿಕ್ಕಿ ರೈ ಹಾಗೂ ರಾಜ್‌ಪಾಲ್ ಎಂಬ ಅಂಗರಕ್ಷಕ ಹಾಗೂ ನಾನು ಸೇರಿದಂತೆ 3 ಜನರು ಬಿಡದಿ ಮನೆಯಿಂದ ಹೊರಟೆವು. ಘಟನೆ ನಡೆದ ಸ್ಥಳದಲ್ಲಿ ಟಪ್ ಎಂದು ಬಹಳ ಜೋರಾದ ಶಬ್ದ ಬಂದಿದ್ದು ಸ್ವಲ್ಪ ದೂರ ಕಾರು ನಿಲ್ಲಿಸಿ ಕೆಳಗೆ ಇಳಿದು ಟಯರ್ ಪರೀಕ್ಷಿಸಿಕೊಂಡೆವು. ಎಲ್ಲಾ ಸರಿಯಿದ್ದಲ್ಲಿ ಕಾರಣ ಪುನಃ ಅಲ್ಲಿಂದ ಹೊರಟು ಬಿಡದಿಯ ರೈಲ್ವೆ ಕ್ರಾಸ್‌ವರೆಗೂ ಬಂದಿದ್ದು ರಿಕ್ಕಿ ರೈ ಅವರು ತನ್ನ ಜೇಬಿನಲಿದ್ದ ಪರ್ಸ್ ಮನೆಯಲಿಯೇ ಬಿಟ್ಟು ಬಂದಿರುವುದಾಗಿ ತಿಳಿಸಿದ್ದರು. ಪುನಃ ಬಿಡದಿ ಮನೆಗೆ ವಾಪಸ್ಸು ಹೋದೆವು. ನಂತರ ಸುಮಾರು ಒಂದುವರೆ ಗಂಟೆ ನಂತರ ಅಂದರೆ ಸುಮಾರು ರಾತ್ರಿ 12-50 ಗಂಟೆಗೆ ಬಿಡದಿ ಮನೆಯಿಂದ ಬೆಂಗಳೂರಿಗೆ ಹೊರಟಿದ್ದು ಬಿಡದಿ ಮನೆಯ ಗೇಟ್ ದಾಟಿ ಹೊರ ಬರುತ್ತಿದ್ದಂತೆಯೇ ನಾವು ಮೊದಲು 11 ಗಂಟೆಗೆ ಹೋದಾಗ ಶಬ್ದ ಆದ ಜಾಗದಲ್ಲಿಯೇ ನಾನು ಚಲಾಯಿಸುತ್ತಿದ್ದ ಕಾರಿನ ಮೇಲೆ ನಾನು ಕುಳಿತಿದ್ದ ಕಡೆಯಿಂದಲೇ ಏಕಾಏಕಿ ಗುಂಡು ಹಾರಿಸಿದ್ದು ನಾನು ಪಾರಾದೆನು. ಆದರೆ ರಿಕ್ಕಿ ರೈ ಅವರಿಗೆ ಮೂಗಿನ ಮೇಲೆ ಮತ್ತು ಬಲತೋಳಿನ ಮೇಲೆ ತೀವ್ರ ಗಾಯವಾಗಿದ್ದು ನಾನು ಕೂಡಲೇ ವಾಹನವನ್ನು ನಿಲ್ಲಿಸಿ ಇಳಿದು ಬಂದು ಹಿಂದೆ ಕುಳಿತಿದ್ದ ರಿಕ್ಕಿ ರೈ ಅವರನ್ನು ನಾನು ಮತ್ತು ರಾಜ್‌ಪಾಲ್‌ರವರು ನೋಡಿದಾಗ ಮೂಗು ಒಡೆದು ಹೋಗಿದ್ದು ಮುಖವೆಲ್ಲಾ ರಕ್ತಮಯವಾಗಿತ್ತು. ಕೂಡಲೇ ನಾನು ನನ್ನ ಶರ್ಟ್ ಬಿಚ್ಚಿ ಮುಖದ ಮೇಲೆ ಒತ್ತಿ ಹಿಡಿದು ರಕ್ತ ನಿಲ್ಲಿಸಲು ಪ್ರಯತ್ನಿಸಿದ್ದು ರಕ್ತ ನಿಲ್ಲಿಸಲು ಸಾಧ್ಯವಾಗದೇ ಇದ್ದಾಗ ಕೂಡಲೇ ಅದೇ ಕಾರಿನಲ್ಲಿಯೇ ಶೀಘ್ರವಾಗಿ ಬಿಡದಿಯಲ್ಲಿರುವ ಭರತ್ ಕೆಂಪಣ್ಣ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಕೂಡಲೇ ವೈದ್ಯರು ಪರೀಕ್ಷಿಸಿ ರಕ್ತ ನಿಲ್ಲಿಸುವ ಪ್ರಯತ್ನ ಪಟ್ಟಿದ್ದು ರಿಕ್ಕಿ ರೈ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಅದೇ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು ಎಂದು ದೂರಿನಲ್ಲಿ ಚಾಲಕ ಬಸವರಾಜು ವಿವರಿಸಿದ್ದಾರೆ.


ಮೊಬೈಲ್ ಫೋನ್ ಪತ್ತೆ:
ಗುಂಡಿನ ದಾಳಿ ನಡೆದ ಘಟನಾ ಸ್ಥಳದಲ್ಲಿ ಒಂದು ಮೊಬೈಲ್ ಫೋನ್ ಮತ್ತು ಬುಲೆಟ್ ತುಂಡುಗಳು ಪತ್ತೆಯಾಗಿವೆ.

ಆಪ್ತರಾಗಿದ್ದ ರಾಕೇಶ್ ಮಲ್ಲಿ ಕಂಟಕರಾದರೇ?
ಸಂಶಯದ ಆಧಾರದಲ್ಲಿ ಕೇಸು ದಾಖಲಿಸಿದರೇ?

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಣಂಗಳ ನಿವಾಸಿಯಾಗಿದ್ದ ಎನ್. ಮುತ್ತಪ್ಪ ರೈ ಅವರು ಪುತ್ತೂರಿನಲ್ಲಿದ್ದಾಗ ಮತ್ತು ಭೂಗತ ದೊರೆಯಾಗಿ ವಿದೇಶದಲ್ಲಿದ್ದಾಗ ಹಾಗೂ ಭೂಗತ ಚಟುವಟಿಕೆಯಿಂದ ಹೊರಬಂದು ಉದ್ಯಮಿಯಾಗಿ, ಜಯಕರ್ನಾಟಕ ಸಂಘಟನೆಯ ಸಾರಥಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಗ ಅವರ ಪರಮ ಆಪ್ತರಾಗಿದ್ದವರು ರಾಕೇಶ್ ಮಲ್ಲಿ. ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ರಾಕೇಶ್ ಮಲ್ಲಿ ಅವರು ಮುತ್ತಪ್ಪ ರೈ ಅವರ ಬಲಗೈ ಬಂಟನಾಗಿದ್ದವರು. ಮುತ್ತಪ್ಪ ರೈ ಅವರ ಉತ್ತರಾಧಿಕಾರಿ ಎಂದೇ ಕರೆಸಿಕೊಂಡವರು. ಜತೆಗೆ ಮುತ್ತಪ್ಪ ರೈ ಅವರ ಪುತ್ರರಿಗೂ ಆಪ್ತರಾಗಿದ್ದವರು. ಆದರೆ ಮುತ್ತಪ್ಪ ರೈ ಅವರ ಕೊನೇಯ ಕಾಲದಲ್ಲಿ ಬಿ.ಸಿ.ರೋಡ್ ಸಮೀಪದ ಜಾಗದ ವಿವಾದಕ್ಕೆ ಸಂಬಂಧಿಸಿ ಪರಸ್ಪರ ಮುನಿಸಿಕೊಂಡು ದೂರವಾಗಿದ್ದರು. ಗುರು ಶಿಷ್ಯರಂತಿದ್ದ ಮುತ್ತಪ್ಪ ರೈ ಮತ್ತು ರಾಕೇಶ್ ಮಲ್ಲಿ ಆ ಬಳಿಕ ಹಾವು ಮುಂಗುಸಿಯಂತಾಗಿದ್ದರು. ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ರೈ ಅವರೊಂದಿಗೆ ಆತ್ಮೀಯತೆಯಿಂದಿದ್ದ ರಾಕೇಶ್ ಮಲ್ಲಿ ಅವರು ಇದೀಗ ರಿಕ್ಕಿ ರೈಯವರಿಗೆ ಕಂಟಕರಾದರೇ ಎಂದು ಚರ್ಚೆ ನಡೆಯುತ್ತಿದೆ. ತೀವ್ರ ಗಾಯಗೊಂಡಿದ್ದ ವೇಳೆ ರಿಕ್ಕಿ ರೈ ಅವರು ಸಂಶಯದ ಮೇಲೆ ರಾಕೇಶ್ ಮಲ್ಲಿ, ಅನುರಾಧ ರೈ ಮತ್ತಿತರರ ಹೆಸರು ಹೇಳಿದ್ದಾರೆ. ಇದೇ ಆಧಾರದಲ್ಲಿ ಚಾಲಕ ಬಸವರಾಜು ಅವರು ರಾಕೇಶ್ ಮಲ್ಲಿ, ಅನುರಾಧ ರೈ ಮತ್ತಿತರರ ಹೆಸರು ಉಲ್ಲೇಖಿಸಿದ್ದಾರೆ. ಪೊಲೀಸರು ಈ ದೂರಿನ ಆಧಾರದಲ್ಲಿ ಸಂಶಯದ ಮೇರೆಗೆ ರಾಕೇಶ್ ಮಲ್ಲಿ, ಅನುರಾಧ ರೈ ಮತ್ತಿತರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಎಸ್‌ಪಿ, ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು ಈ ಘಟನೆಯಲ್ಲಿ ನಿಜವಾಗಿಯೂ ರಾಕೇಶ್ ಮಲ್ಲಿ, ಅನುರಾಧ ರೈ ಭಾಗಿಯಾಗಿದ್ದಾರೆಯೇ ಇಲ್ಲವೇ ಎಂಬುದು ಗೊತ್ತಾಗಬೇಕಿದೆ.

ಹಲವು ದಿನಗಳಿಂದ ಸ್ಕೆಚ್?
ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆಸಲು ಹಲವು ದಿನಗಳಿಂದ ಸ್ಕೆಚ್ ರೂಪಿಸಲಾಗಿತ್ತು. ರಿಯಲ್ ಎಸ್ಟೇಟ್ ಉದ್ಯಮ ಮತ್ತು ಎನ್. ಮುತ್ತಪ್ಪ ರೈ ಅವರ ಆಸ್ತಿಯ ವಿಚಾರವಾಗಿ ದ್ವೇಷ ಹೊಂದಿದ್ದವರು ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ. ಎ.18ರಂದು ರಾತ್ರಿ ರಿಕ್ಕಿ ರೈ ಅವರ ಚಲನವಲನ ಗಮನಿಸಿ ಗುಂಡಿನ ದಾಳಿ ನಡೆಸಲಾಗಿದೆ. ಕಾರಿನ ಡೋರ್ ಸೀಳಿ ಬಂದು ಗುಂಡು ರಿಕ್ಕಿ ರೈಗೆ ತಗುಲಿದೆ. ಶಾರ್ಪ್‌ಶೂಟರ್ ಈ ಕೃತ್ಯದಲ್ಲಿ ಭಾಗಿಯಾದ ಶಂಕೆ ಇದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಿಕ್ಕಿ ರೈ ಅವರ ಮೂಗು ಮತ್ತು ತೋಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಹೇಳಿಕೆ
ಬಿಡದಿಯಲ್ಲಿ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಮಾತನಾಡಿ ಮುತ್ತಪ್ಪ ರೈ ಪುತ್ರ ಅನ್ನುವ ಕಾರಣಕ್ಕೆ ಸಾಮಾನ್ಯವಾಗಿ ರಿಕ್ಕಿ ರೈಗೂ ಬೆದರಿಕೆ ಇತ್ತು. ಅವರು ಸೆಕ್ಯುರಿಟಿ ಇಟ್ಕೊಂಡು ಓಡಾಡ್ತಿದ್ರು. ರಿಕ್ಕಿ ರೈ ಮುತ್ತಪ್ಪ ರೈ ಆಸ್ತಿ, ವ್ಯವಹಾರ ನೋಡಿಕೊಂಡು ಹೋಗ್ತಿದ್ರು. ಸದ್ಯ ಕೆಲವೊಬ್ಬರ ಮೇಲೆ ಅನುಮಾನ ಇದೆ ಅಂತ ಕಂಪ್ಲೇಂಟ್ ಆಗಿದೆ. ಡ್ರೈವರ್ ರಾಜು ಅನುಮಾನ ಇರೋ ವ್ಯಕ್ತಿಗಳ ಮೇಲೆ ದೂರು ಕೊಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ರು. ಬೆಂಗಳೂರಿನಿಂದ ಅವರು ನಿನ್ನೆ ಬಿಡಿದಿಗೆ ಬಂದಿದ್ರು. ಇಲ್ಲಿದ್ದಾಗ ಹೆಚ್ಚಾಗಿ ಬಿಡದಿ ಮನೆಗೆ ಬರ್ತಿದ್ರು. ಸದ್ಯ ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಸಿದ್ದೇನೆ. ಮೂಗಿನ ಭಾಗಕ್ಕೆ ಇಂಜೂರಿ ಆಗಿದೆ. ಸದ್ಯ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮುತ್ತಪ್ಪ ರೈ ಎರಡನೇ ಹೆಂಡತಿಗೆ ಸಂಬಂಧಪಟ್ಟಂತೆ ಪ್ರಾಪರ್ಟಿ ಇಶ್ಯೂ ಇತ್ತು. ಹಲವು ಕೇಸ್‌ಗಳು ಇನ್ನೂ ವಿಚಾರಣೆ ಹಂತದಲ್ಲಿದೆ. ತುಂಬಾ ದಿನಗಳಿಂದ ವಾಚ್ ಮಾಡಿ ಪ್ಲ್ಯಾನ್ ಮಾಡಿಕೊಂಡು ಕೊಲೆ ಯತ್ನ ಮಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಾಕಷ್ಟು ವಿವಾದ ಇತ್ತು. ಅವರಿಗೆ ಸಾಕಷ್ಟು ವಿರೋಽಗಳು ಇದ್ರು. ಹಾಗಾಗಿ ಯಾರೋ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.

ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ

ರಿಕ್ಕಿ ರೈ ಸ್ನೇಹಿತ ಫರನ್ ಅಲಿ ವಿಚಾರಣೆ
ರಿಕ್ಕಿ ರೈ ಸ್ನೇಹಿತ ಫರನ್ ಆಲಿಯನ್ನು ಬಿಡದಿ ಸ್ಟೇಷನ್‌ನಲ್ಲಿ ಎಸ್ಪಿ ಶ್ರೀನಿವಾಸ್ ಗೌಡ ವಿಚಾರಣೆ ನಡೆಸಿದ್ದಾರೆ. ರಿಕ್ಕಿ ರೈ ಜೊತೆ ಮಣಿಪಾಲ್ ಆಸ್ಪತ್ರೆಯಲ್ಲಿ ಸ್ನೇಹಿತ ಫರನ್ ಅಲಿ ಇದ್ದರು. ಹೀಗಾಗಿ ಆತನನ್ನು ಕರೆತಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಫರನ್ ಅಲಿಯ ಮೊಬೈಲ್ ಪರಿಶೀಲನೆ ಮಾಡಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ: ವರದಿ ಕೇಳಿದ ಡಾ. ಜಿ. ಪರಮೇಶ್ವರ್
ಐಜಿಪಿ ಲಾಬೂರಾಂ ಭೇಟಿ: 3 ಡಿವೈಎಸ್‌ಪಿಗಳ ತಂಡ ರಚನೆ-ತನಿಖೆ ಚುರುಕು
ರಾಮನಗರದ ಬಿಡದಿ ಫಾರ್ಮ್ ಹೌಸ್ ಬಳಿ ರಿಕ್ಕಿ ರೈ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಜಿಲ್ಲಾ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಮಿಟಿಂಗ್ ನಡೆಸಲಾಗಿದೆ. ಡಿವೈಎಸ್ಪಿ ಹಾಗೂ ಇತರ ಅಽಕಾರಿಗಳ ಜೊತೆ ಮೀಟಿಂಗ್ ನಡೆಸಿದ ಎಸ್‌ಪಿ ರಿಕ್ಕಿ ರೈ ಕೇಸ್ ಆರೋಪಿಗಳ ಪತ್ತೆಗೆ ಪ್ಲ್ಯಾನ್ ರೂಪಿಸಿದ್ದಾರೆ. ಕಾರು ಚಾಲಕ ಬಸವರಾಜ್‌ನನ್ನು ಕೂಡ ವಿಚಾರಣೆ ನಡೆಸಲಾಗಿದೆ. ಬಳಿಕ ಮಾತನಾಡಿದ ಎಸ್‌ಪಿ ಶ್ರೀನಿವಾಸ ಗೌಡ ಅವರು ರಿಕ್ಕಿ ರೈ ಮೇಲೆ ತಡರಾತ್ರಿ ಅಟ್ಯಾಕ್ ಆಗಿದೆ. ಬಿಡದಿಯ ಅವರ ಫಾರಂಹೌಸ್ ಎದುರು ಗುಂಡಿನ ದಾಳಿ ಆಗಿದೆ. ಈ ಸಂಬಂಧ ಬಿಡದಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಗಾಯಾಳುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅವರ ಸ್ಟೇಟ್ ಮೆಂಟ್ ಪಡೆದು ತನಿಖೆ ಮುಂದುವರೆಸುತ್ತೇವೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನ ವಶಕ್ಕೆ ತೆಗೆದುಕೊಂಡು ಪರಿಶೀಲನೆ ಮಾಡುತ್ತಿದ್ದೇವೆ. ಯಾವ ಗನ್‌ನಿಂದ ಫೈರಿಂಗ್ ಆಗಿದೆ ಎಂದು ತನಿಖೆ ಮಾಡುತ್ತಿದ್ದೇವೆ. ರಿಕ್ಕಿ ರೈ ಹೆಚ್ಚಾಗಿ ಹೊರದೇಶದಲ್ಲಿ ಇರುತ್ತಾರೆ. ಯಾವುದೋ ಕೋರ್ಟ್ ಕೇಸ್ ಅಟೆಂಡ್ ಮಾಡಲು ಬಂದಿದ್ದರು. ನಿನ್ನೆ ಬಿಡದಿ ನಿವಾಸಕ್ಕೆ ಬಂದು ವಾಪಸ್ ಹೋಗುವಾಗ ಅಟ್ಯಾಕ್ ಆಗಿದೆ. ರಿಕ್ಕಿ ರೈ ಜೊತೆ ಡ್ರೈವರ್ ಮತ್ತು ಗನ್‌ಮ್ಯಾನ್ ಇದ್ದರು. ಡ್ರೈವರ್ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಸಿವಿಲ್ ಡಿಸ್ಬೂಟ್ ರಿಲೇಟೆಡ್ ಕೆಲವರ ಮೇಲೆ ಅನುಮಾನ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಭೂಗತ ಲೋಕದ ನಂಟಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಸದ್ಯಕ್ಕೆ ಮೂರು ಡಿವೈಎಸ್ಪಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. ಆರೋಪಿ ಪತ್ತೆಗೆ ತನಿಖೆ ಮುಂದುವರೆಸಿದ್ದೇವೆ ಎಂದು ತಿಳಿಸಿದ್ದಾರೆ. ಬಿಡದಿ ಠಾಣೆಗೆ ಕೇಂದ್ರ ವಲಯ ಐಜಿಪಿ ಲಾಬೂರಾಮ್ ಭೇಟಿ ನೀಡಿ ಘಟನೆ ಬಗ್ಗೆ ಎಸ್‌ಪಿ ಶ್ರೀನಿವಾಸ್ ಗೌಡರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಬಳಿಕ ತನಿಖೆ ಇನ್ನಷ್ಟು ಚುರುಕುಗೊಂಡಿದೆ.

ಬಿಡದಿಯಲ್ಲಿ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ದೇರ್ಲ ಹೇಳಿಕೆ
ಬಿಡದಿಯಲ್ಲಿ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ದೇರ್ಲ ಮಾತನಾಡಿ ರಾತ್ರಿ ನನಗೆ ವಿಚಾರ ಗೊತ್ತಾಯ್ತು, ಸೆಕ್ಯುರಿಟಿ ನನಗೆ ಫೋನ್ ಮಾಡಿದ್ರು. ಮುತ್ತಪ್ಪ ರೈ ಕಾಲದಿಂದಲೂ ಅವರ ಕುಟುಂಬದ ಮೇಲೆ ಸಾಕಷ್ಟು ಜನರಿಗೆ ದ್ವೇಷ ಇದೆ. ಆಸ್ತಿ ವಿಚಾರಕ್ಕೂ ಸಂಬಂಧಿಸಿದ ಒಂದಷ್ಟು ಇಶ್ಯೂ ಇತ್ತು. ರಿಕ್ಕಿ ಹೆಚ್ಚಿನ ಸಮಯ ಬಿಡದಿಯಲ್ಲಿ ಕಳೆಯುತ್ತಿದ್ರು. ಬೆಂಗಳೂರಿನ ಸದಾಶಿವನಗರದಲ್ಲೂ ಮನೆ ಇದೆ. ಬಿಡದಿ ಮನೆಯಲ್ಲಿ ಇಂಟೀರಿಯರ್ ಕೆಲಸ ನಡೆಯುತ್ತಿತ್ತು. ಅದನ್ನೂ ನೋಡೊಕೆ ಬಂದಿದ್ರು. ರಾತ್ರಿ ಇಲ್ಲಿಂದ ಹೋಗುವಾಗ ಯಾರೋ ಅಟ್ಯಾಕ್ ಮಾಡಿದ್ದಾರೆ. ಮುತ್ತಪ್ಪ ರೈ ಮೇಲಿನ ದ್ವೇಷ ಮಗನ ಮೇಲೂ ಮುಂದುವರೆದಿರುವ ಸಾಧ್ಯತೆ ಇದೆ. ಯಾರೋ ಟಾರ್ಗೆಟ್ ಮಾಡಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ರಿಕ್ಕಿ ರೈಗೆ ಮುತ್ತಪ್ಪ ರೈರವರು ಇದ್ದಾಗಲೇ ಮೊದಲ ಪತ್ನಿಯಿಂದ ಡೈವೋರ್ಸ್ ಆಗಿತ್ತು. ಎರಡನೇ ಪತ್ನಿ ವಿದೇಶದವರು. ಅವರು ಮಗು ಜೊತೆ ವಿದೇಶದಲ್ಲೇ ಇದ್ದಾರೆ. ರಿಕ್ಕಿ ರೈ ಕೂಡಾ ಹೆಚ್ಚಿನ ಸಮಯ ವಿದೇಶದಲ್ಲೆ ಕಳೆಯುತ್ತಿದ್ರು ಎಂದು ಹೇಳಿದ್ದಾರೆ.

ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ದೇರ್ಲ


ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಮಾತನಾಡಿ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೂಗಿನ ಭಾಗಕ್ಕೆ ಗಾಯವಾಗಿತ್ತು. ಸರ್ಜರಿ ಮಾಡಲಾಗಿದೆ. ಬಲಗೈಗೂ ಬುಲೆಟ್ ಬಿದ್ದಿತ್ತು. ಅದನ್ನು ತೆಗೆಯಲಾಗಿದೆ. ಯಾರು ಈ ಕೆಲಸ ಮಾಡಿದ್ದಾರೋ ಅವ್ರ ವಿರುದ್ಧ ಕ್ರಮ ಆಗಬೇಕು. ಮಾತನಾಡಲು ಆಗ್ತಿಲ್ಲ ರಿಕ್ಕಿಗೆ, ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ರಾಕೇಶ್ ಮಲ್ಲಿ, ಅನುರಾಧಾ ಅವರ ಹೆಸರು ಹೇಳಿದ ರಿಕ್ಕಿ ರೈ
ಮುತ್ತಪ್ಪ ರೈ ಮತ್ತು ರೇಖಾ ರೈ ಅವರ ಪುತ್ರ ರಿಕ್ಕಿ ರೈ ಅವರು ಗುಂಡೇಟಿನ ಬಳಿಕ ನೋವಿನಿಂದ ನರಳುತ್ತಾ ತನ್ನ ಕಾರು ಚಾಲಕ ಬಸವರಾಜು ಅವರೊಂದಿಗೆ ಈ ಘಟನೆಗೆ ಸಂಬಂಽಸಿದಂತೆ ಪ್ರಬಲವಾಗಿ ರಾಕೇಶ್ ಮಲ್ಲಿ, ಅನುರಾಧ ಹಾಗೂ ನಿತೇಶ್ ಎಸ್ಟೇಟ್ ಮಾಲಿಕರುಗಳಾದ ನಿತೇಶ್ ಶೆಟ್ಟಿ ಮತ್ತು ವೈದ್ಯನಾಥನ್ ಹಾಗೂ ಅವರ ಅನುಯಾಯಿಗಳ ಮೇಲೆ ಅನುಮಾನವಿದೆ ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಚಾಲಕ ಬಸವರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಿಕ್ಕಿ ರೈ ಅವರ ತಂದೆ ಮುತ್ತಪ್ಪ ರೈ ಅವರಿಗೆ ಅವರ ಜೀವಿತ ಕಾಲದಲ್ಲಿ ಹಲವಾರು ವಿರೋಧಿಗಳಿದ್ದು ಮುತ್ತಪ್ಪ ರೈಯವರ ಮೇಲೆ ಕೊಲೆ ಯತ್ನ ನಡೆದಿದ್ದು ವಿಫಲರಾಗಿರುತ್ತಾರೆ. ಹಾಗೂ ರಿಕ್ಕಿ ರೈ ಅವರ ತಂದೆ ಮುತ್ತಪ್ಪ ರೈಯವರು ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದು ಅವರ ಕೊನೆಯ ದಿನಗಳಲ್ಲಿಯೂ ರಾಕೇಶ್ ಮಲ್ಲಿ ಮತ್ತು ಅನುರಾಧರವರಿಂದ ಬೆದರಿಕೆಗಳು ಬಂದಿದೆ. ಹಾಗೂ ಮಾನಸಿಕವಾಗಿಯೂ ಕಿರುಕುಳ ನೀಡಿದ್ದರು ಎಂದು ರಿಕ್ಕಿ ರೈರವರು ನನಗೆ ತಿಳಿಸಿದ್ದರು. ಮತ್ತು ಮುತ್ತಪ್ಪ ರೈ ತನ್ನ ಮಕ್ಕಳಿಗೆ ಸದಾ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು. ರಿಕ್ಕಿ ರೈರವರು ಈಗಾಗಲೇ ವಿವಾಹವಾಗಿದ್ದು ಹೆಂಡತಿ ಮತ್ತು ಮಗು ಹೊರದೇಶದಲ್ಲಿದ್ದಾರೆ. ಇವರು ಆಗಾಗ ಹೋಗಿ ಬರುತ್ತಿರುತ್ತಾರೆ. ಮತ್ತು ಬೆಂಗಳೂರಿನಲ್ಲಿ ಹಾಗೂ ಬಿಡದಿಯಲ್ಲಿ ವಾಸವಿರುತ್ತಾರೆ. ರಿಕ್ಕಿ ರೈರವರ ಮೇಲೆ ಗುಂಡಿನ ದಾಳಿ ಮಾಡಿ ಸಂಚು ಹಾಕಿ ರಾಕೇಶ್ ಮಲ್ಲಿ, ಅನುರಾಧ ಹಾಗೂ ನಿತೇಶ್ ಎಸ್ಟೇಟ್ ಮಾಲಕರುಗಳ ಮೇಲೆ ಅನುಮಾನವಿದೆ. ಮತ್ತು ಅವರ ಸಹಚರರ ಮೇಲೆಯೂ ಅನುಮಾನವಿದೆ. ಆದ್ದರಿಂದ ಅವರನ್ನು ಕೂಲಂಕುಶವಾಗಿ ವಿಚಾರಣೆ ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಚಾಲಕ ಬಸವರಾಜು ದೂರಿನಲ್ಲಿ ಒತ್ತಾಯಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here