ವಿಟ್ಲ: ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟ ಎ.25 ರಿಂದ ಎ.28ರ ವರೆಗೆ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಮಾಣಿ ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿರವರು ಹೇಳಿದರು.
ಅವರು ಎ.21ರಂದು ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಪರ್ಧೆಯ ಮಾಹಿತಿ ನೀಡಿದರು.
ಭಾರತೀಯ ಡಾಡ್ಜ್ ಬಾಲ್ ಒಕ್ಕೂಟವು ಕರ್ನಾಟಕ ರಾಜ್ಯ ಡಾಡ್ಜ್ ಬಾಲ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಡಾಡ್ಜ್ ಬಾಲ್ ಸಂಸ್ಥೆ ಮತ್ತು ಮಾಣಿ ಬಾಲವಿಕಾಸ ವಸತಿ ಶಾಲೆಯ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಿದೆ. ಇದೇ ಮೊದಲಬಾರಿಗೆ ರಾಜ್ಯ ,ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಡ್ಜ್ ಬಾಲ್ ಕ್ರೀಡಾಕೂಟ ಆಯೋಜಿಸಲಾಗಿದ್ದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಮಾಣಿಯಲ್ಲಿ ನಡೆಸಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು ವಿಶೇಷ ಆಕರ್ಷಣೆಯಾಗಿ ಆಹಾರೋತ್ಸವ( ಫುಡ್ ಫೆಸ್ಟ್) ಆಯೋಜಿಸಲಾಗಿದೆ. ಕ್ರೀಡಾಕೂಟದ ಯಶಸ್ಸಿಗಾಗಿ ಊರಿನವರನ್ನು ಸೇರಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕ್ರೀಡಾಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ದಿವಂಗತ ಉದಯ ಚೌಟ ಹೆಸರಿನ ಒಳಾಂಗಣ ಕ್ರೀಡಾಂಗಣಕ್ಕೆ ಇಡಲಾಗಿದ್ದು, ಇಲ್ಲಿ ಎಲ್ಲಾ ಕ್ರೀಡಾಕೂಟಗಳು ನಡೆಯಲಿದೆ.
ಸಂಘಟನಾ ಕಾರ್ಯದರ್ಶಿ ವಿಜೇತ್ ಕುಮಾರ್ ರವರು ಮಾತನಾಡಿ ಪುರುಷರು ಮತ್ತು ಮಹಿಳೆಯರ ತಂಡಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೂರು, ರಾಷ್ಟ್ರಮಟ್ಟದ 42 ಮತ್ತು ರಾಜ್ಯಮಟ್ಟದ 38 ತಂಡಗಳ ಸಹಿತ ಎರಡೂವರೆ ಸಾವಿರಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಡಾಡ್ಜ್ ಬಾಲ್ ಕ್ರೀಡೆಗೆ ಸಂಬಂಧಿಸಿದಂತೆ ವಿಚಾರ ವಿನಿಮಯ,ಸಂವಾದ, ಗೋಷ್ಠಿಗಳನ್ನೂ ಸಂಘಟಿಸಲಾಗಿದೆ ಎಂದರು. ಕ್ರೀಡಾಕೂಟವನ್ನು ಎ.26ರಂದು ಸಾಯಂಕಾಲ ಸ್ಪೀಕರ್ ಯು. ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಜೆ. ಪ್ರಹ್ಲಾದ್ ಶೆಟ್ಟಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜೇಶ್ ನಾಯ್ಕ್, ಅಶೋಕ್ ಕುಮಾರ್ ರೈ, ಸಹಿತ ಜಿಲ್ಲೆಯ ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾಕೂಟದ ಸಂಯೋಜಕ ಎ.ಎಸ್. ಸಚಿನ್, ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಜೆ. ಪ್ರಹ್ಲಾದ ಶೆಟ್ಟಿ , ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಪ್ರಿಯಾ, ಮೊದಲಾದವರು ಉಪಸ್ಥಿತರಿದ್ದರು.