ಪುತ್ತೂರು: ನಯಾ ಪೈಸೆ ಯಾರಿಂದಲೂ ಪಡೆಯಬಾರದು, ಲಂಚದ ಹಣವನ್ನು ಮುಟ್ಟಬೇಡಿ ಎಂದು ಸಂಬಂಧಿಸಿದ ಎಲ್ಲರಿಗೂ ಈಗಾಗಲೇ ಸೂಚನೆ ನೀಡಿದ್ದೇನೆ. ಇಲ್ಲಿ ನಡೆಯುತ್ತಿರುವುದು 11ನೇ ಅಕ್ರಮ ಸಕ್ರಮ ಬೈಠಕ್, ಕೆಲವು ಕಡೆಗಳಲ್ಲಿ ಬ್ರೋಕರ್‌ಗಳ ಮೂಲಕ ಹಣ ಸಂದಾಯವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಣ ಪಡೆದುಕೊಂಡದ್ದು ಸಾಭೀತಾದರೆ ಅಂಥವರು ಯಾರೇ ಆದರೂ ಅವರನ್ನು ಜೈಲಿಗೆ ಕಳುಹಿಸಿಯೇ ಸಿದ್ದ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಎಚ್ಚರಿಕೆ ನೀಡಿದ್ದಾರೆ.
ಅವರು ಕೆಯ್ಯೂರು ಗ್ರಾಮದ ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ 11ನೇ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ನಾನಾಗಲಿ, ಸಮಿತಿಯವರಾಗಲಿ ಯಾರಿಂದಲೂ ನಯಾ ಪೈಸೆ ಕೇಳಿಲ್ಲ, ಕೇಳುವುದೂ ಇಲ್ಲ. ಬಡವರ ರಕ್ತ ಹೀರುವ ಕೆಲಸವನ್ನು ಯಾರೂ ಮಾಡಬಾರದು. ಜಾಗ ನಿಮ್ಮದೇ ಆಗಿರುವಾಗ ನೀವು ಯಾಕೆ ಕದ್ದುಮುಚ್ಚಿ ಹಣ ಕೊಡುತ್ತೀರಿ? ಹಣ ಕೊಟ್ಟರೆ ತಾನೆ ಅವರು ಪಡೆದುಕೊಳ್ಳುವುದು? ಯಾರೇ ಆಗಲಿ ಡಿಮ್ಯಾಂಡ್ ಮಾಡಿದರೆ ನನಗೆ ಮಾಹಿತಿ ನೀಡಿ ಎಂದು ಅನೇಕ ಬಾರಿ ಸಾರ್ವಜನಿಕರಿಗೆ ಮನವಿ ಮಾಡಿದ್ದೇನೆ, ಆದರೂ ಕೆಲವರು ಕದ್ದುಮುಚ್ಚಿ ಕೊಡುತ್ತಿದ್ದಾರೆ ಎಂಬ ಮಾಹಿತಿ ನನ್ನಲ್ಲಿದೆ. ದಯವಿಟ್ಟು ಈ ದುಷ್ಟ, ನೀಚ ಕೆಲಸವನ್ನು ಯಾರೂ ಮಾಡದಿರಿ ಎಂದು ಶಾಸಕರು ಮನವಿ ಮಾಡಿದರು.
ಅಭಿವೃದ್ದಿ ಮಾಡುತ್ತಿದ್ದೇನೆ, ಕ್ಷೇತ್ರದ ಜನರ ಸಹಕಾರ ಇರಲಿ
ನಾನು ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ನಾಲ್ಕು ಗೋಡೆಗಳ ನಡುವೆ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕ್ ಈಗ ಗ್ರಾಮಸ್ಥರ ಮನೆ ಬಾಗಿಲಿನಲ್ಲಿ ನಡೆಯುತ್ತಿದೆ. ಪಾರದರ್ಶಕವಾಗಿ ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರ ಕಡತವನ್ನು ವಿಲೇವಾರಿ ಮಾಡುತ್ತಿದ್ದೇನೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ತಂದಿದ್ದೇನೆ. ಕುಡಿಯುವ ನೀರಿಗೆ 1೦1೦ ಕೋಟಿ ತಂದಿದ್ದೇನೆ, ಕೆಎಂಎಫ್ ಗೆ ಜಾಗ ಕೊಟ್ಟಿದ್ದೇನೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳವನ್ನು ಅಭಿವೃದ್ದಿ ಮಾಡುತ್ತೇನೆ. ಪುತ್ತೂರನ್ನು ಟೂರಿಸಂ ಕೇಂದ್ರವನ್ನಾಗಿ ಮಾಡಲಿದ್ದೇನೆ. ತಾಲೂಕು ಬೃಹತ್ ಕ್ರೀಡಾಂಗಣ ಪುತ್ತೂರಿನಲ್ಲಿ ನಿರ್ಮಾಣವಾಗಲಿದೆ, ಆರ್‌ಟಿಒ ಕಚೇರಿ ಪುತ್ತೂರಿನಲ್ಲಿ ನಿರ್ಮಾಣವಾಗಲಿದೆ. ಕೊಯಿಲದಲ್ಲಿರುವ ಪಶು ವೈಧ್ಯಕೀಯ ಕಾಲೇಜಿಗೆ ಅನುದಾನ ತಂದಿದ್ದೇನೆ, ರಸ್ತೆಗಳ ಅಭಿವೃದ್ದಿಯಾಗಿದೆ . ಜನತೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ತರುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮುಂದೆ ನಿಮ್ಮೆಲ್ಲರ ಸಹಕಾರ ಇದ್ದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಬಿಜೆಪಿಯವರು ಮನವಿ ಮಾಡುತ್ತಿದ್ದಾರೆ
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳು, ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಬಂದು ತಮ್ಮ ಅಕ್ರಮ ಸಕ್ರಮವನ್ನು ಮಾಡಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಯಾರೂ ಮನವಿ ಮಾಡುವ ಅಗತ್ಯವಿಲ್ಲ ಕಾನೂನಾತ್ಮಕವಾಗಿ ಸರಿ ಇದ್ದಲ್ಲಿ ಖಂಡಿತವಾಗಿಯೂ ಮಾಡಿಕೊಡುವ ಭರವಸೆ ನೀಡಿದ್ದೇನೆ. ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರ ಅಕ್ರಮ ಸಕ್ರಮವನ್ನು ಮಾಜಿ ಶಾಸಕರು ಮಾಡಿಕೊಟ್ಟಿಲ್ಲ ಯಾಕೆ ಎಂಬುದು ಬಿಜೆಪಿ ಕಾರ್ಯಕರ್ತರು ಬಾಯಿ ಬಿಡುತ್ತಿಲ್ಲ, ನನಗೂ ಅದರ ಬಗ್ಗೆ ಮಾಹಿತಿ ಇಲ್ಲ ಎಂದ ಶಾಸಕರು ಅಧಿಕಾರದಲ್ಲಿದ್ದಾಗ ತಮ್ಮ ಜೊತೆ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಮಾಜಿ ಶಾಸಕರು ಕಡೆಗಣಿಸಿದ್ದು, ದೇವರು ಮೆಚ್ಚದ ಕೆಲಸವಾಗಿದೆ. ನಾನು ಈ ಬಾರಿ ಅವರೆಲ್ಲರ ಕಡತವನ್ನು ವಿಲೇವಾರಿ ಮಾಡುತ್ತೇನೆ ಎಂದು ಹೇಳಿದ ಶಾಸಕರು ನಾನು ಮಾಡಿದ ಕೆಲಸವನ್ನು ಮೆಚ್ಚಿ ಮುಂದಿನ ಚುನಾವಣೆಯಲ್ಲಿ ವೋಟು ಹಾಕುತ್ತಾರೆ ಎಂಬ ಭರವಸೆ ಇದೆ. ವೋಟು ಹಾಕದೇ ಇದ್ದಲ್ಲಿ ದೇವರು ಮೆಚ್ಚಲಾರ ಎಂದು ಮಾರ್ಮಿಕವಾಗಿ ಹೇಳಿದರು.
ಪುತ್ತೂರು ಜಿಲ್ಲೆಯಾಗಬೇಕಾದರೆ ಅಶೋಕ್ ರೈ ಬೇಕು
ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲೆಯಾಗಬೇಕಾದರೆ ಅದು ಅಶೋಕ್ ರೈ ಇದ್ದರೆ ಮಾತ್ರ ಸಾಧ್ಯ. ಈಗಾಗಲೇ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಯವ ಶಾಸಕರೂ ಮಾಡದ ಸಾಧನೆಯನ್ನು ಮಾಡುತ್ತಿದ್ದಾರೆ. ಮೆಡಿಕಲ್ ಕಾಲೇಜು ತರುವುದು ಸುಲಭದ ಕೆಲಸವಲ್ಲ. ಅದನ್ನು ತಂದು ದೊಡ್ಡ ಕೆಲಸ ಮಾಡಿದ್ದಾರೆ. ಅಕ್ರಮ ಸಕ್ರಮ ಪುತ್ತೂರು ಬಿಟ್ಟರೆ ಬೇರೆಲ್ಲೂ ಈ ಮಟ್ಟದಲ್ಲಿ ನಡೆದಿಲ್ಲ, ಇವರಂತ ಶಾಸಕರು ಸಿಕ್ಕಿರುವುದು ಜನತೆಯ ಪುಣ್ಯವಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ್ ಹೆಗ್ಡೆ ತಿಳಿಸಿದರು.
ಮನೆಯಲ್ಲಿ ಶುಭ ಕಾರ್ಯ ಇದ್ದರೂ ಜನರ ಬಳಿಗೆ ಬಂದಿದ್ದಾರೆ: ಬಡಗನ್ನೂರು
ಶಾಸಕರ ಮನೆಯಲ್ಲಿ ಮದುವೆಯ ಸಂಭ್ರಮ ಇದ್ದರೂ ಅದರಲ್ಲಿ ಭಾಗವಹಿಸದೇ ಇವತ್ತು ಕೆಯ್ಯೂರಿನಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿಗೆ ಕೆಯ್ಯೂರಿಗೆ ಬಂದಿದ್ದಾರೆ. ಇದು ಶಾಸಕರ ಕಾರ್ಯವೈಖರಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು. ಇದುವರೆಗೆ ನಡೆದ ಬೈಠಕ್‌ನಲ್ಲಿ ಸಾವಿರಾರು ಎಕ್ರೆ ಭೂಮಿಯನ್ನು ಫಲಾನುಭವಿಗೆ ಹಂಚುವ ಕೆಲಸವಾಗಿದೆ. ಮನೆ ಅಡಿಸ್ಥಳಕ್ಕೆ ಹಕ್ಕು ಪತ್ರನವನ್ನು ಕೊಡುವ ಕೆಲಸವಾಗಿದೆ. ಇದೆಲ್ಲವೂ ಅವರಿಗೆ ಬಡವರ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಮುಂದೆ ಪ್ರತೀ ಮಂಗಳವಾರ ಅಕ್ರಮ ಸಕ್ರಮ ಬೈಠಕ್ ನಡೆಯಲಿದ್ದು ಗ್ರಾಮಸ್ಥರ ಪ್ರತೀ ಕಡತವೂ ವಿಲೇವಾರಿಯಾಗಲಿದೆ ಎಂದು ಹೇಳಿದರು.
ಕಾಂತಪ್ಪ ಪೂಜಾರಿಗೆ ನ್ಯಾಯ ಕೊಡಿಸಿದೆ
ಬಡಗನ್ನೂರು ಗ್ರಾಮದ ಮೈಂದನಡ್ಕ ನಿವಾಸಿ ದೃಷ್ಟಿ ಹೀನರಾದ ಹಿರಿಯ ವ್ಯಕ್ತಿ ಕಾಂತಪ್ಪ ಪೂಜಾರಿಯವರು ತನ್ನ ಮನೆಯ ಅಡಿಸ್ಥಳದ ಹಕ್ಕು ಪತ್ರಕ್ಕಾಗಿ 35 ವರ್ಷಗಳಿಂದ ಕಚೇರಿ ಅಲೆದಾಡುತ್ತಿದ್ದಾರೆ. ಅವರನ್ನು ಕರೆಸಿ ಅವರಿಗೆ ಹಕ್ಕು ಪತ್ರವನ್ನು ನೀಡುವ ಕೆಲಸವನ್ನು ಮಾಡಿದ್ದೇನೆ. ಕಾಂತಪ್ಪ ಪೂಜಾರಿ ಯಾರಿಗೂ ಹಣ ಕೊಡದಂತೆ ಸೂಚಿಸಿದ್ದೆ. ಭ್ರಷ್ಟಾಚಾರವಿಲ್ಲದೆ ಕ್ಷೇತ್ರದ ಹಿರಿಯ ಜೀವವೊಂದಕ್ಕೆ ನ್ಯಾಯ ಕೊಡಿಸಿದ ತೃಪ್ತಿ ನನ್ನಲ್ಲಿದೆ ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ 60 ಅಕ್ರಮ ಸಕ್ರಮ ಕಡತ ಮತ್ತು 20 94ಸಿ ಹಕ್ಕುಪತ್ರವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಗ್ರಾಮಕರಣಿಕ ಕಾವಡಿ ಸ್ವಾಗತಿಸಿದರು. ಶಾಸಕ ಕಚೇರಿ ಸಿಬ್ಬಂದಿ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.