ಪುತ್ತೂರು: 75 ವರ್ಷಗಳ ಹಿಂದೆ ಅರಂಭಗೊಂಡಿರುವ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಪಠ್ಯದ ಜೊತೆ ಆಂಗ್ಲ ಮಾಧ್ಯವನ್ನೂ ಆರಂಭ ಮಾಡಲಿದ್ದೇವೆ ಎಂದು ದ್ವಾರಕಾ ಪ್ರತಿಷ್ಠಾನ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆ ಪಟ್ಟೆ ಇದರ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಪಟ್ಟೆ ನರಸಿಂಹ ಭಟ್ ಮತ್ತು ಬಾಲಕೃಷ್ಣ ಭಟ್ ಎಂಬವರ ನೇತೃತ್ವದಲ್ಲಿ ಪ್ರಾರಂಭ ಆಗಿರುವ ಶ್ರೀಕೃಷ್ಣ ವಿದ್ಯಾಸಂಸ್ಥೆಯು ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದೀಗ ದ್ವಾರಕಾ ಪ್ರತಿಷ್ಠಾನವು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳನ್ನು ನಡೆಸಲು ಮುಂದಾಗಿದ್ದು ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ. ಕೇವಲ ಡಿಗ್ರಿ ಸರ್ಟಿಫಿಕೇಟ್ ಪಡೆಯುವುದು ಶಿಕ್ಷಣವಲ್ಲ. ಶಿಕ್ಷಣ ಸಮಾಜಕ್ಕೆ ಆಸ್ತಿಯಾಗಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಕೊಡಬೇಕೆನ್ನುವ ಕನಸಿನೊಂದಿಗೆ ಈಗಿನ ಹೊಸ ಆಡಳಿತದೊಂದಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡಲಿದ್ದೇವೆ. ಮುಂದಿನ ದಿನಗಳಲ್ಲಿ ಹಲವು ಯೋಜನೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಈ ವರ್ಷವೇ 1 ರಿಂದ 10ನೇ ತರಗತಿಯಲ್ಲಿ ಕನ್ನಡ ಪಠ್ಯದ ಜೊತೆ ಆಂಗ್ಲಮಾಧ್ಯಮವನ್ನು ಆರಂಭ ಮಾಡಲಿದ್ದೇವೆ ಎಂದವರು ಹೇಳಿದರು. ಈ ಹಿಂದೆ 274 ವಿದ್ಯಾರ್ಥಿಗಳಿದ್ದು, ಇದೀಗ ಈ ಶೈಕ್ಷಣಿಕ ವರ್ಷದಲ್ಲಿ 50 ರಿಂದ 100 ವಿದ್ಯಾರ್ಥಿಗಳು ಹೆಚ್ಚು ಸೇರ್ಪಡೆಗೊಂಡಿದ್ದಾರೆ. 75 ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ. ಜೊತೆಗೆ ಮುಂದಿನ ದಿನ ಪಿಯುಸಿಯನ್ನೂ ಪುನರಾಂಭಿಸಲಿದ್ದೇವೆ ಎಂದು ಗೋಪಾಲಕೃಷ್ಣ ಭಟ್ ಹೇಳಿದರು.
ಶ್ರೀ ಕೃಷ್ಣ ವಿದ್ಯಾಸಂಸ್ಥೆ ಪಟ್ಟೆ ಇದರ ಸಂಚಾಲಕ ವಿಘ್ನೇಶ್ ಹಿರಣ್ಯ ಅವರು ಮಾತನಾಡಿ ಸುಸಂಸ್ಕೃತ ಸಮಾಜದ ಜವಾಬ್ದಾರಿಯುತ ವಿದ್ಯಾರ್ಥಿಗಳನ್ನು ಅಲ್ಲಿ ಬೆಳೆಸಬೇಕೆಂಬ ಮುಖ್ಯ ಉದ್ದೇಶದಿಂದ ದ್ವಾರಕಾ ಪ್ರತಿಷ್ಠಾನವು ಈ ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡಿದೆ. ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ ಮೌಲ್ಯವರ್ಧನ ಶಿಕ್ಷಣ ಮತ್ತು ಸಾಂಪ್ರಾದಾಯಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕಬೇಕೆನ್ನುವುದು ನಮ್ಮ ಮಹದಾಸೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಳಿಗೆ ಗುರುಕುಲ ಮಾದರಿಯ ಶಿಕ್ಷಣ, ಕೃಷಿಗೆ ಸಂಬಂಧಿಸಿದ ಚಟುವಟಿಕೆ ಸಹಿತ ವಿದ್ಯಾರ್ಥಿಗಳ ಜೀವನ ಶೈಲಿಯ ಬದಲಾವಣೆಯೇ ಶಿಕ್ಷಣ ನೀಡಲಿದ್ದೇವೆ ಎಂದರು.
ದ್ವಾರಕಾ ಪ್ರತಿಷ್ಠಾನ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿರುವ ಅಮೃತಕೃಷ್ಣ ಅವರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ. ಇದರ ಕಾರ್ಪೋರೇಶನ್ ವಿಭಾಗದ ಮುಖ್ಯಸ್ಥ ದುರ್ಗಾಗಣೇಶ್ ಉಪಸ್ಥಿತರಿದ್ದರು.