ಯಾದವರ ಸಮಾಜ ಧೈರ್ಯ, ಆತ್ಮೀಯತೆಯ ಸಮಾಜ – ಕಿಶೋರ್ ಕುಮಾರ್
ಯಾದವರು ಅತೀ ಹತ್ತಿರದಿಂದ ಆಶೀರ್ವಾದ ಮಾಡಿದವರು – ಅಶೋಕ್ ರೈ
ಪಾಣಾಜೆ: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಹಾಗೂ ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಪಾಣಾಜೆ ರಣಮಂಗಲ ಸಭಾಭವನದಲ್ಲಿ ಏ.20 ರಂದು ನಡೆದ ಜಿಲ್ಲಾ ಯಾದವ ಸಮ್ಮೇಳನದ ಸಮಾರೋಪ ಸಮಾರಂಭ ಏ.20 ರಂದು ಸಂಜೆ ನಡೆಯಿತು.

ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿಯ ಅಧ್ಯಕ್ಷ ಎ.ಕೆ. ಮಣಿಯಾಣಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘8 ವರ್ಷಗಳ ಹಿಂದೆ ಸುಳ್ಯದಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸಿದ್ದೆವು. ಕಾರಣಾಂತರಗಳಿಂದ ಬಳಿಕದ ವರ್ಷಗಳಲ್ಲಿ ಆಯೋಜಿಸಲು ಸಾಧ್ಯವಾಗಿಲ್ಲ. ಈ ವರ್ಷ ಹೇಗಾದರೂ ಮಾಡಬೇಕೆಂಬ ಛಲದಿಂದ ಶ್ರಮಿಸಿದ ಪರಿಣಾಮ ಈ ಕಾರ್ಯಕ್ರಮ ನಡೆದಿದೆ. ಒಂದೇ ದಿನದಲ್ಲಿ ಈ ಕಾರ್ಯಕ್ರಮದ ಪೂರ್ವಭಾವಿ ನಿರ್ಣಯ ಕೈಗೊಂಡು ರೂಪುರೇಷಗಳು ಸಿದ್ಧಗೊಂಡಿದ್ದವು. ಪ್ರತೀ ತಾಲೂಕಿನ ಸಮಿತಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಈ ಸಮ್ಮೇಳನ ಯಶಸ್ವಿಯಾಗಿದೆ. ಆರ್ಲಪದವು ಪ್ರಾದೇಶಿಕ ಸಮಿತಿ ಮತ್ತು ಪುತ್ತೂರು ತಾಲೂಕು ಸಮಿತಿಯ ಸಮರ್ಥ ನಿರ್ವಹಣೆಯಿಂದಾಗಿ ಈ ಸಮ್ಮೇಳನ ಅಭೂತಪೂರ್ವವಾಗಿ, ಗೊಂದಲವಿಲ್ಲದೇ, ಎಲ್ಲಾ ಸವಾಲುಗಳನ್ನು ಹಿಂದಿಕ್ಕಿ ನಡೆದಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ‘ಎಲ್ಲಾ ಜಾತಿಯವರಿಗೆ ಸಂಘಟನೆ ಇದೆ. ಪ್ರತೀ ಜಾತಿಯಲ್ಲೂ ಬಡವರು ತೊಂದರೆಗೊಳಗಾದವರು ಇದ್ದೇ ಇರುತ್ತಾರೆ. ಅವರಿಗೆ ನೆರವು ನೀಡಲು ಅಥವಾ ಸಮಾಜದ ಶಕ್ತಿಯನ್ನು ತೋರಿಸಿಕೊಡಲು ಸಂಘಟನೆ ಅಗತ್ಯವಿದೆ. ಮಕ್ಕಳನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಂಘಟನೆ ಬೇಕಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಸ್ಪಂದಿಸುತ್ತೇನೆ. ಸರಕಾರದಿಂದ ಸದ್ಯ ಸಭಾಭವನಕ್ಕೆ ಮಂಜೂರಾತಿ ಇಲ್ಲ. ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳಿಗೆ ಸ್ಪಂದನೆ ಕೊಡುವ ಕೆಲಸ ಮಾಡುತ್ತೇನೆ. ನಿಮ್ಮ ಬೆನ್ನ ಹಿಂದೆ ನಿಂತು ಕೆಲಸ ಮಾಡುತ್ತೇನೆ. ಚುನಾವಣೆಯ ಸಂದರ್ಭ ನನಗೆ ಅತೀ ಹತ್ತಿರದಿಂದ ಆಶೀರ್ವಾದ ಮಾಡಿದ ಸಮಾಜದಲ್ಲಿ ನಿಮ್ಮ ಸಮಾಜವೂ ಒಂದು ಎಂದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ‘ ಪ್ರಕೃತಿ ಪೂಜೆಗಿಂತ, ಗೋಮಾತೆಯ ಪೂಜೆಗಿಂತ ಮಿಗಿಲಾದುದು ಯಾವುದಿಲ್ಲ ಎಂದು ತಿಳಿಸಿಕೊಟ್ಟವರು ಶ್ರೀಕೃಷ್ಣ ದೇವರು. ಧರ್ಮಕ್ಕೆ ಮಾತ್ರ ಜಯ ಎಂದು ತೋರಿಸಿಕೊಟ್ಟ ಕೃಷ್ಣನ ಕುಲದಲ್ಲಿ ಹುಟ್ಟಿದ ಯಾದವ ಸಮುದಾಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಯಾದವರಲ್ಲಿ ದಿಟ್ಟತನ ಮತ್ತು ದೈರ್ಯ ಇದೆ. ಕಲ್ಮಶವಿಲ್ಲದ ಆತ್ಮೀಯ ಸ್ವಭಾವ ಯಾದವರದ್ದು. ಅಂತಹ ಯಾದವ ಸಮುದಾಯದಿಂದ ಸಂಘಟನೆಯ ದೃಷ್ಟಿಯಲ್ಲಿ ಉತ್ತಮ ಕಾರ್ಯ ನಡೆದಿದೆ. ಯಾದವ ಕುಲದ ಮುಖಾಂತರ ಹಿಂದೂ ಸಮಾಜಕ್ಕೆ ಮಾರ್ಗದರ್ಶನವಾಗಬೇಕಾಗಿದೆ’ ಎಂದರು. ರಾಜಕೀಯ ಬದಿಗಿಟ್ಟು ಸಮಾಜದ ಉನ್ನತಿಗಾಗಿ ನಾವೆಲ್ಲಾ ಶ್ರಮಿಸೋಣ’ ಎಂದರು.
ಮುಖ್ಯ ಅತಿಥಿಗಳಾಗಿ ಅಖಿಲ ಕೇಂದ್ರ ಯಾದವ ಸಭಾ ಕಾಸರಗೋಡು ಇದರ ಅಧ್ಯಕ್ಷ ನಾರಾಯಣ ಎಂ. ರವರು ಮಾತನಾಡಿ ‘ಈ ಸಮ್ಮೇಳನ ಯಶಸ್ವಿಗೊಳಿಸಿದ ಯಾದವ ಸಮುದಾಯವನ್ನು ಕಂಡು ಅತೀವ ಸಂತೋಷವಾಗಿದೆ. ಶ್ರೀಕೃಷ್ಣ ದೇವರ ಸಂದೇಶದಂತೆ ಬದುಕೋಣ’ ಎಂದರು.
ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ದೇವಸ್ಯ, ಯಾದವ ಸಭಾ ಕೇಂದ್ರ ಸಮಿತಿ ಸಲಹಾ ಸಮಿತಿಯ ಅಧ್ಯಕ್ಷ ಸುಧಾಮ ಅಲೆಟ್ಟಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಸದಾನಂದ ಕಾವೂರು, ಕೋಶಾಧಿಕಾರಿ ಚಂದ್ರಶೇಖರ ಬಿ., ಯಾದವ ಸಭಾ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಆಸರೆ, ಮಂಗಳೂರು ತಾಲೂಕು ಅಧ್ಯಕ್ಷ ಶ್ರೀಕೃಷ್ಣ ಬಿ. ಪಡೀಲ್, ಬಂಟ್ವಾಳ ತಾಲೂಕು ಅಧ್ಯಕ್ಷ ಅಶೋಕ್ ಅಮೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಟಿ., ಉಳ್ಳಾಲ ತಾಲೂಕು ಅಧ್ಯಕ್ಷ ಕೆ. ಸಂಜೀವ ಮಣಿಯಾಣಿ ಉಪಸ್ಥಿತರಿದ್ದರು.
ಜಿಲ್ಲಾ ಯಾದವ ಕ್ರೀಡಾಕೂಟವನ್ನು ಸಂಘಟಿಸಿದ ಕೃಷ್ಣಪ್ರಸಾದ್ ಬೆಟ್ಟಂಪಾಡಿ, ಪವನ್ ಯಾದವ್, ಕರುಣಾಕರ ಮಣಿಯಾಣಿರವರನ್ನು ಶಾಸಕರು ಗೌರವಿಸಿದರು. ಯಾದವ ಸಮ್ಮೇಳನ’ ಲೋಗೋ ವಿನ್ಯಾಸಗೊಳಿಸಿದ ಪ್ರೇಮ್‌ರಾಜ್ ಆರ್ಲಪದವು, ಪೋಸ್ಟರ್ ವಿನ್ಯಾಸಗೊಳಿಸಿದ ರಂಜಿತ್ ತಲೆಪ್ಪಾಡಿ, ನಿರ್ವಹಣೆಯಲ್ಲಿ ಸಹಕರಿಸಿದ ಶಿವಪ್ರಸಾದ್ ತಲೆಪ್ಪಾಡಿ, ಸಹಕರಿಸಿದ ಚಂದ್ರ ಎ.ಬಿ. ಮತ್ತು ಅವರ ತಂಡವನ್ನು, ಸಂತೋಷ್ ರೈ ಕೋಟೆ, ಹರಿಪ್ರಸಾದ್ ಆರ್ಲಪದವು, ಪ್ರಕಾಶ್ ಕುಲಾಲ್, ಪ್ರದೀಪ್ ಬಾಜುಗುಳಿಯವರನ್ನು ಅಭಿನಂದಿಸಲಾಯಿತು. ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮತ್ತು ತಂಡದವರು ಒಟ್ಟು ಕಾರ್ಯಕ್ರಮವನ್ನು ಸಂಘಟಿಸಿದರು. ಜಿಲ್ಲಾ ಯಾದವ ಕ್ರೀಡಾಕೂಟದ ಬಹುಮಾನ ವಿತರಣೆ ಇದೇ ವೇಳೆ ನಡೆಯಿತು. ಕರುಣಾಕರ ಮಣಿಯಾಣಿ ಬಹುಮಾನಿತರ ವಿವರ ವಾಚಿಸಿದರು. ಪವನ್ ಯಾದವ್ ಸ್ವಾಗತಿಸಿ, ಯಾದವ ಸಭಾ ತಾಲೂಕು ಸಮಿತಿ ಜೊತೆ ಕಾರ್ಯದರ್ಶಿ ದಿನೇಶ್ ಯಾದವ್ ವಂದಿಸಿದರು. ರಂಜಿತ್ ಒಡ್ಯ ಕಾರ್ಯಕ್ರಮ ನಿರೂಪಿಸಿದರು.