ಪುತ್ತೂರು: ನವೋದಯ ಗ್ರಾಮ ವಿಕಾಸ ಟ್ರಸ್ಟ್ ಹಾಗೂ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸುವ ಆರ್ಯಾಪು, ಕೆಮ್ಮಿಂಜೆ, ಕುರಿಯ ಗ್ರಾಮದ 100 ಮಹಿಳಾ ಸ್ವ-ಸಹಾಯ ಸಂಘದ 1130 ಸದಸ್ಯರಿಗೆ ಆರನೇ ವರ್ಷದ ಸಮವಸ್ತ್ರ ವಿತರಣೆ ಕಾರ್ಯಕ್ರಮ ಎ.23 ರಂದು ಆರ್ಯಾಪು ಸಹಕಾರ ಸಂಘದ ಸಭಾಂಗಣದಲ್ಲಿ ಜರಗಿತು.
ಮಹಿಳೆಯರ ಬೆಳವಣಿಗೆಯಲ್ಲಿ ಸ್ವ-ಸಹಾಯ ಸಂಘಗಳು ದಾರಿದೀಪವಾಗಿದೆ-ಶಕುಂತಳಾ ಶೆಟ್ಟಿ:
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಎಂಟು ಜಿಲ್ಲೆಗಳಲ್ಲಿ ನವೋದಯ ಮಾತ್ರವಲ್ಲ ಇತರ ಹಲವು ಮಹಿಳೆಯರ ಸ್ವ-ಸಹಾಯ ಸಂಘಗಳು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಹಿಂದಿನ ಕಾಲದಲ್ಲಿ ಮಹಿಳೆಯರು ಸಮಾಜದ ಮುಂಚೂಣಿಗೆ ಬಾರದವರು ಇಂದು ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿರುತ್ತಾರೆ. ಮಹಿಳೆಯರ ಬೆಳವಣಿಗೆಯ ಹಿಂದೆ ಸ್ವ-ಸಹಾಯ ಸಂಘಗಳು ದಾರಿದೀಪವಾಗಿ ಗೋಚರಿಸುತ್ತಿದೆ. ಮಹಿಳೆಯರ ಅಭ್ಯುದಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಮುಖ್ಯಮಂತ್ರಿಗಳು ಸ್ವ-ಸಹಾಯ ಸಂಘಗಳಿಗೆ ವಿಶೇಷ ಘೋಷಣೆ ಮಾಡಬೇಕು-ಶಶಿಕುಮಾರ್ ರೈ ಬಾಲ್ಯೊಟ್ಟು:
ದ.ಕ ಜಿಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ೨೦೦೦ನೇ ಇಸವಿಯಲ್ಲಿ ನವೋದಯ ಸ್ವ-ಸಹಾಯ ಸಂಘ ಆರಂಭವಾಗಿದ್ದು ಇದೀಗ ಈ ಸಂಘಕ್ಕೆ ರಜತ ಸಂಭ್ರಮವಾಗಿದೆ. ಈ ರಜತ ಸಂಭ್ರಮವನ್ನು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಮುಂದಿನ ದಿನಗಳಲ್ಲಿ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ೧೫೦೦ ಮಂದಿ ವಿಶೇಷ ಅತಿಥಿ ಗಣ್ಯರು ಸೇರುವ ದೊಡ್ಡದಾದ ಸಭಾ ವೇದಿಕೆ. ಎಂಟು ಜಿಲ್ಲೆಗಳಿಂದ ಸುಮಾರು ೧.೫೦ ಲಕ್ಷ ಮಂದಿ ನವೋದಯ ಸ್ವ-ಸಹಾಯ ಸಂಘದ ಸದಸ್ಯರು ಒಂದೇ ತರಹದ ಸಮವಸ್ತ್ರದೊಂದಿಗೆ ಅಂದು ಕಂಗೊಳಿಸಲಿದ್ದು ಈ ಕಾರ್ಯಕ್ರಮ ಗಿನ್ನೆಸ್ ದಾಖಲೆ ಎನಿಸಲಿದೆ. ಈ ಭಾರೀ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯರವರು ವೀಕ್ಷಿಸಿ, ಶ್ಲಾಘಿಸಿ ಸ್ವ-ಸಹಾಯ ಸಂಘಗಳಿಗೆ ವಿಶೇಷ ಘೋಷಣೆ ಮಾಡಬೇಕು ಎನ್ನುವುದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ರವರ ಕಲ್ಪನೆಯಾಗಿದೆ ಎಂದರು.
ಸ್ವ-ಸಹಾಯ ಸಂಘಗಳಿಂದ ಆರ್ಥಿಕವಾಗಿ ಮಹಿಳೆಯರು ಸಬಲೀಕರಣ-ಮಹಮದ್ ಆಲಿ
ಅಧ್ಯಕ್ಷತೆ ವಹಿಸಿದ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಹಮದ್ ಆಲಿರವರು ಸ್ವಾಗತಿಸಿ, ಮಾತನಾಡಿ, ಸ್ವ-ಸಹಾಯ ಸಂಘಗಳ ನಿರ್ಮಾಣವಾದ ಬಳಿಕ ಆರ್ಥಿಕವಾಗಿ ಮಹಿಳೆಯರು ಸಬಲೀಕರಣರಾಗಿದ್ದಾರೆ ಜೊತೆಗೆ ಸ್ವಾವಲಂಭಿ ಜೀವನಕ್ಕೆ ಪ್ರೇರಣೆಯಾಗಿದೆ. ಹಿಂದೆ ಗಂಡಸರನ್ನು ಒಟ್ಟು ಸೇರಿಸಲು ಸ್ವ-ಸಹಾಯ ಸಂಘವನ್ನು ಕಟ್ಟಲಾಗಿತ್ತು ಆದರೆ ಇಂದು ಆ ಸಂಘಗಳು ಕಾಣುತ್ತಿಲ್ಲ. ಸರಕಾರವೂ ಕೂಡ ಎಲ್ಲವನ್ನು ಸರಕಾರ ಮಾಡಲು ಅಸಾಧ್ಯವಾಗಿದ್ದ ಸಂದರ್ಭದಲ್ಲಿ ಪಾರ್ಕ್ ನಿರ್ವಹಣೆ, ತೆರಿಗೆ ಸಂಗ್ರಹ ಕೆಲಸವನ್ನು ಈ ಸ್ವ-ಸಹಾಯ ಸಂಘಗಳಿಗೆ ವಹಿಸಿಕೊಡಲಾಗಿತ್ತು ಮಾತ್ರವಲ್ಲ ಅದು ಅಚ್ಚುಕಟ್ಟಾಗಿ ನಡೆಯುತ್ತಿತ್ತು.ಸ್ವ-ಸಹಾಯ ಸಂಘಗಳು ಸಾಲವನ್ನು ಮರುಪಾವತಿ ಮಾಡುವಲ್ಲಿ ಕೂಡ ಎತ್ತಿದ ಕೈ ಎನಿಸಿದ್ದಾರೆ ಎಂದರು.
ವೈಷ್ಣವಿ ಪ್ರಾರ್ಥಿಸಿದರು. ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಬಿ.ಗಣೇಶ್ ರೈ ಬಳ್ಳಮಜಲು ಕುರಿಯ, ಶೀನಪ್ಪ ಮರಿಕೆ ಆರ್ಯಾಪು, ಇಸ್ಮಾಯಿಲ್ ಮಲಾರು, ತೆರೆಜಾ ಸಿಕ್ವೇರಾ ಕೆಮ್ಮಿಂಜೆ, ನಿರ್ದೇಶಕಿ ಚಂದ್ರಕಲಾ ಓಟೆತ್ತಿಮಾರು, ರಂಜಿತ್ ಬಂಗೇರ, ಸಂಶುದ್ಧೀನ್ ನೀರ್ಕಜೆ ಆರ್ಯಾಪು, ಸತೀಶ್ ನಾೖಕ್ ಪರ್ಲಡ್ಕ, ತಿಮ್ಮಪ್ಪ ಜಂಗಮುಗೇರು ಸಂಪ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್ ಹಾಗೂ ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಶುಭಾಷಿನಿ, ವಿನಯಕುಮಾರ್, ಅರ್ಜುನ್ ಭಾಸ್ಕರ್, ಪ್ರಶಾಂತಿ, ಡಿಸಿ ಬ್ಯಾಂಕ್ ದರ್ಬೆ ಶಾಖೆಯ ಪ್ರಬಂಧಕ ಕೇಶವ್, ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮೇಲ್ವಿಚಾರಕ ಶರತ್ ಕುಮಾರ್, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಪೂರ್ಣಿಮಾ ರೈ, ಪ್ರೇರಕರಾದ ಬೆಟ್ಟಂಪಾಡಿ ವಲಯದ ತುಳಸಿ, ಪಾಣಾಜೆ ವಲಯದ ಸುಮಿತ್ರ, ಆರ್ಯಾಪು ವಲಯದ ಮೋಹಿನಿ, ನವೋದಯ ಸಂಘದ ಸದಸ್ಯರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನವೋದಯ ಸ್ವ-ಸಹಾಯ ಗುಂಪು ಪುತ್ತೂರು ತಾಲೂಕು ಇದರ ಮೇಲ್ವಿಚಾರಕ ಚಂದ್ರಶೇಖರ ಆಚಾರ್ಯ ವಂದಿಸಿದರು. ಸೊಸೈಟಿ ಸಿಬ್ಬಂದಿ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.
100 ಮಹಿಳಾ ಸ್ವ-ಸಹಾಯ ಸಂಘದ 1130 ಸದಸ್ಯರಿಗೆ ಸಮವಸ್ತ್ರ ವಿತರಣೆ
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯಡಿಯಲ್ಲಿನ ಆರ್ಯಾಪು, ಕುರಿಯ ಹಾಗೂ ಕೆಮ್ಮಿಂಜೆ ಗ್ರಾಮದ 100 ಮಹಿಳಾ ಸ್ವ-ಸಹಾಯ ಸಂಘದ 1130 ಮಹಿಳಾ ಸದಸ್ಯರಿಗೆ ಈ ಸಂದರ್ಭದಲ್ಲಿ ಅತಿಥಿ ಗಣ್ಯರಾದ ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹಾಗೂ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಮವಸ್ತ್ರವನ್ನು ವಿತರಿಸಿದರು.
ಮೇ10:ಭಾರೀ ಸಮಾವೇಶ..
1999ರಲ್ಲಿ ಕಾರ್ಕಳದ ಸೂರಲ್ ಎಂಬಲ್ಲಿ ನವೋದಯ ಸ್ವ-ಸಹಾಯ ಸಂಘಗಳ ಆರಂಭಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರು ನಾಂದಿ ಹಾಡಿದ್ದರು. ಇದೀಗ ಈ ನವೋದಯ ಸ್ವ-ಸಹಾಯ ಸಂಘಗಳು ಎಂಟು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ. ಮೇ 10ರಂದು ಈ ಸಂಘಗಳ ರಜತ ಸಂಭ್ರಮವನ್ನು ಮಂಗಳೂರಿನ ಆಡ್ಯಾರ್ ಗಾರ್ಡನ್ನಲ್ಲಿ ಎಲ್ಲಾ ತರಹದ ವ್ಯವಸ್ಥೆಯೊಂದಿಗೆ ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮದಲ್ಲಿ 1500 ಮಂದಿ ಅತಿಥಿಗಳು ಅಲ್ಲದೆ ಸುಮಾರು 1.50 ಲಕ್ಷ ಮಹಿಳಾ ಸದಸ್ಯರು ಭಾಗವಹಿಸಲಿದ್ದಾರೆ. ಪುತ್ತೂರಿನಲ್ಲಿ 1130 ಸದಸ್ಯರಿದ್ದು ಈ ಸಮಾವೇಶದಲ್ಲಿ 800 ಮಂದಿ ಭಾಗವಹಿಸಲಿದ್ದಾರೆ.