ಕಡಬ: ಎ ಆಂಡ್ ಬಿ ಜುಮಾ ಮಸೀದಿ ಕುಂತೂರು ಇದರ ಆಶ್ರಯದಲ್ಲಿ ಚರಿತ್ರೆ ಪ್ರಸಿದ್ಧವಾದ ಕುಂತೂರು ಬೇಳ್ಪಾಡಿ ಮಖಾಂ ಶರೀಫ್ನಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಎ.15ರಂದು ಆರಂಭಗೊಂಡು ಎ.20ರಂದು ಸಮಾರೋಪಗೊಂಡಿತು.
ಎ.20ರಂದು ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಾಗ್ಮಿ ನವಾಝ್ ಮನ್ನಾನಿ ಕೇರಳ ಮುಖ್ಯ ಪ್ರಭಾಷಣ ನೀಡದರು. ಇಸ್ಲಾಂ ಮಾನವೀಯ ಧರ್ಮ. ಎಲ್ಲಾ ಧರ್ಮೀಯರೊಂದಿಗೆ ಸೌಹಾರ್ದತೆಯಿಂದ ಬೆರೆಯುವುದೇ ಇಸ್ಲಾಂ. ಎಲ್ಲರ ಕಷ್ಟಕ್ಕೆ ನೆರವಾಗುವವರು ಮಾತ್ರ ನೈಜ ಇಸ್ಲಾಂ ಹಿಂಬಾಲಕರು. ಇಸ್ಲಾಮಿನ ಇತಿಹಾಸ ಮತ್ತು ನೀತಿ ನಿಯಮಗಳನ್ನು ಕಲಿತರೆ ಯಾವುದೇ ಅಹಿತಕರ ಘಟನೆಗಳು ಇಲ್ಲದಂತೆ ನೋಡಿಕೊಳ್ಳಬಹುದು ಎಂದು ನವಾಝ್ ಮನ್ನಾನಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂತೂರು ಎ ಆಂಡ್ ಬಿ ಜುಮಾ ಮಸೀದಿ ಅಧ್ಯಕ್ಷರಾದ ಹಸೈನಾರ್ ಹಾಜಿ ಚಾಲ್ಕರೆ ವಹಿಸಿದ್ದರು. ಸ್ಥಳೀಯ ಖತೀಬ್ ಶೈಖುನಾ ಮೊಯ್ದು ಫೈಝಿ ಉಸ್ತಾದ್ ಕಾರ್ಯಕ್ರಮ ಉದ್ಘಾಟನೆಗೈದರು. ಹನೀಫ್ ದಾರಿಮಿ ನೆಕ್ಕಿಲಾಡಿ ಆರಂಭಿಕ ದು:ವಾಗೆ ನೇತೃತ್ವ ನೀಡಿದರು.
ಅತಿಥಿಯಾಗಿದ್ದ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ, ಉಲಮಾಗಳ ಮಾರ್ಗದರ್ಶನದಲ್ಲಿ ಮುಂದೆ ಸಾಗಿದರೆ ನಮಗೆ ಶಾಶ್ವತ ವಿಜಯವಿದೆ. ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಉಲಮಾಗಳ ನಿರ್ದೇಶನದಂತೆ ವಿರೋಧಿಸೋಣ. ವಕ್ಫ್ ಅಲ್ಲಾಹನ ಸ್ವತ್ತು. ಅದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇನ್ನೋರ್ವ ಅತಿಥಿ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ದ.ಕ. ಇದರ ಅಧ್ಯಕ್ಷ ಪೀರ್ ಮೊಹಮ್ಮದ್ ಸಾಹೇಬ್ ಶುಭ ಹಾರೈಸಿದರು. ಕುಂತೂರು ಎಚ್.ಐ.ಮದ್ರಸದ ಸದರ್ ಮುಆಲ್ಲಿಂ ಹಾಶಿಂ ರಹ್ಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಮಾಅತ್ ಉಪಾಧ್ಯಕ್ಷರಾದ ಅಯ್ಯೂಬ್, ಪ್ರಧಾನ ಕಾರ್ಯದರ್ಶಿ ಯಾಕೂಬ್, ಕೋಶಾಧಿಕಾರಿ ಅಬ್ದುಲ್ಲ, ಮುಹಮ್ಮದ್ ಅಸ್ಲಮಿ, ಹಮೀದ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ಹನೀಫ್ ದಾರಿಮಿ ಕೋಚಕಟ್ಟೆ, ನಾಸಿರ್ ಫೈಝಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ರಫ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು. ಅಶೀರ್ ಕುಂತೂರು ಕಾರ್ಯಕ್ರಮ ನಿರೂಪಿಸಿದರು.
ಸರ್ವಧರ್ಮೀಯರಿಂದಲೂ ಪ್ರಾರ್ಥನೆ:
ದ.ಕ.ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿರುವ ಚರಿತ್ರೆ ಪ್ರಸಿದ್ಧವಾಗಿರುವ ಬೇಳ್ಪಾಡಿ ಮಖಾಂ ಶರೀಫ್ನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಪ್ರಯುಕ್ತ ಎ.೧೫ರಿಂದ ೧೯ರ ತನಕ ಪ್ರತಿದಿನ ಹಲವು ವಿದ್ವಾಂಸರು ಪ್ರಭಾಷಣ ನೀಡಿದರು. ಉರೂಸ್ ಸಮಾರಂಭದ ಸಮಾರೋಪ ದಿನವಾದ ಎ.20ರಂದು ಸಾವಿರಾರು ಮಂದಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಸರ್ವಧರ್ಮೀಯರೂ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಮಸೀದಿ ಆಡಳಿತ ಮಂಡಳಿಯವರು ಸೂಕ್ತ ವ್ಯವಸ್ಥೆ ಕಲ್ಪಿಸಿದರು.