ಎ.29-30: ಚಿಕ್ಕಪುತ್ತೂರು ವೀರಭದ್ರ ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಪೂಜಾ ಕಾರ್ಯಕ್ರಮ

0

ಪುತ್ತೂರು; ಮಡಿವಾಳ ಸಮಾಜದ ಶ್ರದ್ಧಾಕೇಂದ್ರವಾದ ಚಿಕ್ಕಪುತ್ತೂರಿನ ವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಪೂಜಾ ಕಾರ್ಯಕ್ರಮ ಎ.29-30ರಂದು ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಮೂಡಬಿದಿರೆಯ ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಆಶೀರ್ವಾದಗಳೊಂದಿಗೆ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ಅವರ ನೇತೃತ್ವದಲ್ಲಿ ವೈದಿಕ,ತಾಂತ್ರಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.


ಎ. 29ರಂದು ಬೆಳಿಗ್ಗೆ 9.30ಕ್ಕೆ ಮಹಾಲಿಂಗೇಶ್ವರ ದೇವಳದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಉಗ್ರಾಣ ತುಂಬಿಸುವ ಕಾರ್ಯ ನಡೆಯಲಿದೆ. ಸಂಜೆ 4ಕ್ಕೆ ತಂತ್ರಿಗಳ ಆಗಮನ ಅವರನ್ನು ಪೂರ್ಣಕುಂಭ ಸ್ವಾಗತ ಮಾಡಲಾಗುವುದು. ಸಂಜೆ 4.30ರಿಂದ ಸಭಾಕಾರ್ಯಕ್ರಮ ಪುತ್ತೂರು ಮಡಿವಾಳ ಸಂಘದ ಅಧ್ಯಕ್ಷ ಪಿ.ಎನ್.ಸುಭಾಷ್ ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಾ.ಎಂ.ಕೆ.ಪ್ರಸಾದ್, ಮಾಜಿ ಶಾಸಕ ಸಂಜೀವ ಮಠಂದೂರು, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಸನ್ನಕುಮಾರ್ ಮಾರ್ತ ಮತ್ತಿತರರು ಭಾಗಿಯಾಗಲಿದ್ದಾರೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಎ.30ರಂದು ಬೆಳಿಗ್ಗೆ 6ರಿಂದ ಮಹಾಗಣಪತಿ ಹೋಮ, 8 ಗಂಟೆಯ ವೃಷಭ ಲಗ್ನದಲ್ಲಿ ದೇವರ ಪ್ರತಿಷ್ಠೆ, ಆದಿಮಾಯೆ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 3.30ರಿಂದ ಸಭಾ ಕಾರ್ಯಕ್ರಮ ವೀರಭದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಇಂದುಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಅಶೋಕ್‌ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಮುಳಿಯ ಕೇಶವ ಪ್ರಸಾದ್, ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಡಾ.ಸುರೇಶ್ ಪುತ್ತೂರಾಯ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ೬ರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.


ಪತ್ರಿಕಾಗೋಷ್ಟಿಯಲ್ಲಿ ವೀರಭದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಇಂದುಶೇಖರ್, ಮಡಿವಾಳ ಸಂಘದ ಅಧ್ಯಕ್ಷ ಪಿ.ಎನ್.ಸುಭಾಷ್ ಚಂದ್ರ, ಉಪ್ಪಿನಂಗಡಿ ಮಡಿವಾಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಡಿವಾಳ ಹಾಗೂ ಚಿಂತನ್ ಚೊಕ್ಕಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here