*ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ ಡಿವೈಎಸ್ಪಿ
*ಸಂಜೆ 6 ಗಂಟೆಯ ಒಳಗಾಗಿ ಬಂಧಿಸಲು ಮತ್ತೆ ಗಡುವು ನೀಡಿದ ಪ್ರತಿಭಟನಕಾರರು-ಬಂಧಿಸದಿದ್ದರೆ ಮತ್ತೆ ಪ್ರತಿಭಟನೆ
*ಶಾಸಕ ಅಶೋಕ್ ರೈ ಸ್ಥಳಕ್ಕೆ ಭೇಟಿ-ಪೊಲೀಸರ ವಿರುದ್ಧ ಗರಂ, ಸಂಜೆ 6 ಗಂಟೆಯ ಒಳಗೆ ಬಂಧಿಸಲು ಸೂಚನೆ
ಪುತ್ತೂರು: ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಮೇಲಿನ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಹಿಡಿದ ಪೊಲೀಸರು ಬಂಧಿಸಿದೇ ಹಾಗೆಯೇ ಬಿಟ್ಟಿರುವ ಆರೋಪಿಯನ್ನು ಮತ್ತೆ ಬಂಧಿಸಲು ಬೆಳಿಗ್ಗೆ 8 ಗಂಟೆಯ ತನಕ ಪೊಲೀಸರಿಗೆ ಕಾಲಾವಕಾಶ ನೀಡಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿ ಪುತ್ತೂರಿನ ವೈದ್ಯರುಗಳು, ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್ಸ್ ಫಾರಂ, ಆಯುಷ್ ಫೆಡರೇಶನ್, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸೇರಿದಂತೆ ನೂರಾರು ಮಂದಿ ಮಹಿಳಾ ಠಾಣೆಯ ಎದುರು ಜಮಾಯಿಸಿ, ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಆರೋಪಿಯ ಬಂಧನಕ್ಕೆ ನೀಡಿದ ಕಾಲಾವಕಾಶ ಮುಗಿದಿದ್ದರೂ ಬಂಧಿಸದೇ ಇರುವ ನಡೆಯ ಬಗ್ಗೆ ಮಹಿಳಾ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು, ಆರೋಪಿಯನ್ನು ಬಂಧಿಸಬೇಕು. ಇಲ್ಲಿದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ತಿಳಿಸಿದರು. ಪೊಲೀಸ್ ಅಧಿಕಾರಿಗಳಿಂದ ಸೂಕ್ತ ಉತ್ತರ ದೊರೆಯದ ಹಿನ್ನೆಯಲ್ಲಿ ಠಾಣೆಯ ಮುಂಭಾಗದಲ್ಲಿರುವ ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಂಚಾರಿ ಠಾಣಾ ಎಸ್.ಐ ಉದಯ ರವಿ ಹಾಗೂ ನಗರ ಠಾಣಾ ಎಸ್ಐ ಆಂಜನೇಯ ರೆಡ್ಡಿಯವರು ರಸ್ತೆ ತಡೆದ ಪ್ರತಿಭಟನಕಾರರನ್ನು ಮನವೊಳಿಸಿ ತೆರಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಾವು ಠಾಣೆಯ ಒಳಗೆ ಹೋಗಿ ಡಿವೈಎಸ್ಪಿಯವರ ಜೊತೆ ಮಾತನಾಡಿದ್ದೇವೆ. ಅವರು ಸರಿಯಾಗಿ ಸ್ಪಂಧಿಸಿಲ್ಲ. ಇನ್ನು ಅವರು ಸ್ಥಳಕ್ಕೆ ಬರಬೇಕು. ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತರು. ಪೊಲೀಸರ ನಡೆಯ ವಿರುದ್ಧ ಪ್ರತಿಭಟನಕಾರರು ದಿಕ್ಕಾರ ಕೂಗಿದರು. ಜಿಲ್ಲೆಯಲ್ಲಿ ಎಲ್ಲಾ ವೈದ್ಯರ ಮೇಲೆ ಇದೇ ರೀತಿ ಹಲ್ಲೆಗಳು ನಡೆದಿದ್ದರೂ ನಾವು ಸುಮ್ಮನಿದ್ದೇವು. ಇನ್ನು ಸಾಧ್ಯವಿಲ್ಲ. ಇಲ್ಲಿ ಕೆಲವು ಹೊಂದಾಣಿಕೆ ಪೊಲೀಸರಿದ್ದು ಅವರನ್ನು ಇಲ್ಲಿಂದ ಕಳುಹಿಸಬೇಕು. ಅವರಿಂದ ತೊಂದರೆ ಆಗುತ್ತದೆ. ಪೊಲೀಸ್ ಇಲಾಖೆಯಿಂದ ತಪ್ಪು ಮಾಡಿದ್ದು ಡಿವೈಎಸ್ಪಿಯವರು ಸ್ಥಳಕ್ಕೆ ಬಂದು ಸ್ಪಷ್ಟಣೆ ನೀಡಲಿ ಎಂದು ಪ್ರತಿಭಟನಕಾರರು ತಿಳಿಸಿದಾಗ ಅವರು ಠಾಣೆಯ ಒಳಗಿದ್ದಾರೆ ಅಲ್ಲಿ ಹೋಗಿ ಮಾತನಾಡುವ ಎಂದು ಎಸ್.ಐ ಆಂಜನೇಯ ರೆಡ್ಡಿ ವಿನಂತಿಸಿದರು. ನಾವು ಅಲ್ಲಿಗೆ ಬರುವುದಿಲ್ಲ. ಡಿವೈಎಸ್ಪಿಯವರೇ ಇಲ್ಲಿಗೆ ಬರಬೇಕು ಎಂದು ಒಳಗಡೆಯಿರುವ ಡಿವೈಎಸ್ಪಿಯವರಿಗೆ ಹೊರಗೆ ಬರಲು ಏನು ಎಂದು ಪ್ರಶ್ನಿಸಿದ ಪ್ರತಿಭಟನಕಾರರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ರಸ್ತೆಯಲ್ಲಿ ಕುಳಿತವರನ್ನು ಪೊಲೀಸರು ಕೈಯಲ್ಲಿ ಹಿಡಿದು ಎಳೆಯಲು ಯತ್ನಿಸಿದಾಗ ಪ್ರತಿಭಟನಕಾರರು ಅವಕಾಶ ಕೊಡದೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ದ ದಿಕ್ಕಾರ ಕೂಗಿದರು. ಕೊನೆಗೂ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ ಅರುಣ್ ನಾಗೇ ಗೌಡ ಹಲ್ಲೆಗೊಳಗಾದವರು ಸರಿಯಾಗಿ ದೂರು ನೀಡಿಲ್ಲ. ಹೀಗಾಗಿ ನಮಗೆ ಸೆಕ್ಷನ್ ಹಾಕಲು ಆಗುವುದಿಲ್ಲ ಎಂದು ತಿಳಿಸಿದಾಗ ಪ್ರತಿಭಟನಕಾರರು ಅವರನ್ನು ತರಾಟೆಗೆತ್ತಿಕೊಂಡರು. ಸಾಧ್ಯವಾದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ಡಿವೈಎಸ್ಪಿಯವರು ಭರವಸೆ ನೀಡಿದರು. ಸಂಜೆ 6 ಗಂಟೆಯ ಒಳಗಾಗಿ ಆರೋಪಿಯನ್ನು ಬಂಧಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಶಾಸಕ ಅಶೋಕ್ ರೈ ಸ್ಥಳಕ್ಕೆ ಭೇಟಿ-ಪೊಲೀಸರ ವಿರುದ್ಧ ಗರಂ, ಸಂಜೆ 6 ಗಂಟೆಯ ಒಳಗೆ ಬಂಧಿಸಲು ಸೂಚನೆ
ಪ್ರತಿಭಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು. ಡಾಕ್ಟರ್ಸ್ ಫಾರಂನ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಹಾಗೂ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಗಣೇಶ್ ಪ್ರಸಾದ್ ಮುದ್ರಜೆ ಘಟನೆಯ ಬಗ್ಗೆ ಶಾಸಕರಿಗೆ ವಿವರಿಸಿದರು. ಆರೋಪಿಯನ್ನು ಬಿಟ್ಟಿರುವುದಕ್ಕೆ ಪೊಲೀಸರ ವಿರುದ್ದ ಗರಂ ಆದ ಶಾಸಕರು ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದ್ದರೂ ಆರೋಪಿಯನ್ನು ಠಾಣೆಯಿಂದ ಬಿಟ್ಟಿರುವುದು ಸರಿಯಲ್ಲ. ಆರೋಪಿಯ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಂಡು ಸಂಜೆ 6 ಗಂಟೆಯ ಒಳಗಾಗಿ ಆರೋಪಿಯನ್ನು ಬಂಧಿಸುವಂತೆ ಡಿವೈಎಸ್ಪಿಯವರಿಗೆ ಸೂಚಿಸಿದರು. ಈ ಹಿಂದೆಯೂ ಇದೇ ರೀತಿ ಆಗಿದ್ದು ಸಂಜೆ ನಾವು ಬಂದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಠಾಣೆ ಕರೆತಂದು ಕಳುಹಿಸುವುದು ಹೆಚ್ಚಾಗಿದೆ. ಪೊಲೀಸರಿಗೆ ಯಾರ ಒತ್ತಡಗಳಿಲ್ಲ. ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಒತ್ತಡಗಳಿದ್ದರೆ ತಿಳಿಸಿ. ಅನ್ಯಾಯವಾದವರಿಗೆ ನ್ಯಾಯ ಒದಗಿಸಬೇಕು ಎಂದು ಸೂಚಿಸಿದ ಶಾಸಕರು ವೈದ್ಯರಿಗೆ ನ್ಯಾಯಕೊಡುವ ಕೆಲಸ ಮಾಡುವುದಾಗಿ ತಿಳಿಸಿದರು. ಇಲ್ಲಿ ಪೊಲೀಸರಿಗೆ ಮೇಲಿನಿಂದ ಒತ್ತಡವಿದೆ ಎಂದು ಹೇಳುತ್ತಾರೆ ಯಾರ ಒತ್ತಡವಿದೆ ಎಂದು ಹೇಳಲಿ ಎಂದು ಪ್ರತಿಭಟನಕಾರರು ತಿಳಿಸಿದರು. ಪೊಲೀಸರು ಪ್ರಕರಣ ದಾಖಲಿಸುವಾಗ ಕೆಲವು ಸೆಕ್ಷನ್ ಬಿಟ್ಟಿದ್ದು ಅದನ್ನು ಹಾಕುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದು ಅದನ್ನು ಸೇರಿಸಲು ಸೂಚನೆ ನೀಡುವುದಾಗಿ ಶಾಸಕರು ತಿಳಿಸಿದರು.

ತಾಯಿ ಅನಾರೋಗ್ಯದಿಂದ ಇರುವಾಗ ಆರೋಪಿಯನ್ನು ಪೊಲೀಸರು ಸುಮ್ಮನೆ ಬಿಡುತ್ತಾರಾ. ಆದರೆ ಇಲ್ಲಿ ಕೇವಲ ಮಗು ಇತ್ತು ಎಂಬ ಕಾರಣಕ್ಕೆ ಆರೋಪಿಯನ್ನು ಬಿಟ್ಟಿರುವುದು ಸರಿಯಾ ಎಂದು ಶಾಸಕರು ಹಾಗೂ ಪೊಲೀಸರಲ್ಲಿ ಮಹಿಳೆಯೋರ್ವರು ಪ್ರಶ್ನಿಸಿದರು. ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳನ್ನು ರಾತ್ರಿ 2ಗಂಟೆಯ ತನಕ ಠಾಣೆಯಲ್ಲಿರಿಸಿದ್ದಾರೆ. ಆದರೆ ಹಲ್ಲೆ ನಡೆಸಿದ ಆರೋಪಿಯನ್ನು ಬಿಟ್ಟಿದ್ದಾರೆ. ಈಗಿನ ಇನ್ಸ್ಪೆಕ್ಟರ್ ಬಂದ ಬಳಿಕ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನೀವು ಆಸ್ಪತ್ರೆಯ ಸುರಕ್ಷಾ ಸಮಿತಿಯಲ್ಲಿದ್ದೀರಿ ಏನು ಕ್ರಮಕೈಗೊಂಡಿದ್ದೀರಿ ಎಂದಾಗ ಅದನ್ನು ತಿಳಿದೇ ಬಂದಿರುವುದಾಗಿ ಎಂದು ತಿಳಿಸಿದ ಶಾಸಕರು ವೈದ್ಯರಿಗೆ ಆಗಿರುವ ತೊಂದರೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್ಸ್ ಫಾರಂ, ಆಯುಷ್ ಫೆಡರೇಶನ್ನ ಪದಾಧಿಕಾರಿಗಳು, ವೈದ್ಯರುಗಳು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಮುಖಂಡರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.