ಪುತ್ತೂರು: ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಎ.26ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ ಸಂಚಾರಕ್ಕೆ, ತುರ್ತು ವೈದ್ಯಕೀಯ ಸೇವೆಗೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.25ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಕೆ ಪುತ್ತೂರಾಯ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದಕ್ಕೆ ಸಂಬಂಧಿಸಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣದ ಆರೋಪಿಯನ್ನು ಬಂಧಿಸಿಲ್ಲ ಎಂಬ ಕಾರಣಕ್ಕೆ ಏ.26ರಂದು ಬೆಳಗ್ಗೆ ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ಕೆಲ ಸಂಘಟನೆಯ ಸದಸ್ಯರು ದಿಢೀರ್ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಿಂದ ಬೊಳುವಾರು-ದರ್ಬೆ ಮುಖ್ಯ ರಸ್ತೆಗೆ ಏಕಾಏಕಿ ಬಂದು ರಸ್ತೆಯ ಮಧ್ಯದಲ್ಲಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಅಡ್ಡಿಪಡಿಸಿದ್ದಲ್ಲದೇ ಪೊಲೀಸರಿಗೆ ದಿಕ್ಕಾರ ಘೋಷಣೆ ಕೂಗಿರುತ್ತಾರೆ. ಈ ಸಂದರ್ಭ ಇಲಾಖಾ ಅಧಿಕಾರಿಗಳು ರಸ್ತೆ ತಡೆಯಬೇಡಿ. ಆರೋಪಿಗಳನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಸಹ ಪೊಲೀಸರ ಮಾತನ್ನು ಕೇಳದೆ ಪ್ರತಿಭಟನಾಕಾರರು 1 ಗಂಟೆಗಳ ಕಾಲ ರಸ್ತೆಯನ್ನು ತಡೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಲ್ಲದೆ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರನ್ನು ತಳ್ಳಿಕೊಂಡು ಸಮವಸ್ತ್ರಕ್ಕೆ ಕೈ ಹಾಕಿ ಸೂಕ್ತವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ ಎಂದು ಕೇಸು ದಾಖಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಕಲಂ:189(2),126(2),270 132.285. ಪ್ರಕರಣ ದಾಖಲಾಗಿದೆ. 190 BNS 2023 ಪ್ರಕರಣ ದಾಖಲಾಗಿದೆ.