ಪುತ್ತೂರು: ಇಲ್ಲಿನ ಸರಕಾರಿ ಆಸ್ಪತ್ರೆಯ ಉತ್ತಮ ಸೇವಾ ವೈದ್ಯಾಧಿಕಾರಿಯಾಗಿರುವ ಡಾ. ಆಶಾ ಜ್ಯೋತಿ ವಿರುದ್ಧ ಮಾಡುವ ಅನಗತ್ಯ ಆರೋಪಗಳಿಂದ ವೈದ್ಯರ ಮನಸ್ಸಿಗೆ ಘಾಸಿಯಾಗಿಸುವ ಸಂಗತಿ ಮುಂದೆ ನಡೆಯದಿರಲಿ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಿಕಟಪೂರ್ವ ಸದಸ್ಯ ರಫೀಕ್ ದರ್ಬೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
7 ವರ್ಷದಿಂದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಆಶಾ ಜ್ಯೋತಿಯವರು ಪುತ್ತೂರು ಸರಕಾರಿ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಅಂದಿನ ಮತ್ತು ಇಂದಿನ ಶಾಸಕರ ವಿಶ್ವಾಸ ಪಡೆದು ಸರಕಾರಿ ಆಸ್ಪತ್ರೆಯನ್ನು ಉತ್ತುಂಗಕ್ಕೇರಿಸುತ್ತಿದ್ದಾರೆ. ಬಡವರ ಬಗ್ಗೆ ಅತೀ ಕಾಳಜಿ ವಹಿಸಿದವರಾಗಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲಾ ಸಮುದಾಯಕ್ಕೂ ಉತ್ತಮ ಸೇವೆ ಸಿಗುತ್ತಿದೆ. ಆಸ್ಪತ್ರೆಯ ಮಹಿಳಾ ವಾರ್ಡಲ್ಲಿರುವ ಕೆಲವು ನಿಬಂಧನೆಗಳು ಅಲ್ಲಿನ ಗೋಡೆಯಲ್ಲಿ ಬಿತ್ತಿ ಪತ್ರದ ಮೂಲಕ ಬರೆದಿರುವುದನ್ನು ಪಾಲಿಸದೆ ವೈದ್ಯರನ್ನು ದಾದಿಯರನ್ನು ಅವಾಚ್ಯವಾಗಿ ನಿಂದಿಸಿರುವುದು ಅಕ್ಷಮ್ಯ ಅಪರಾದವಾಗಿದೆ. ಆಸ್ಪತ್ರೆ ಮತ್ತು ವೈದ್ಯರ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ವೈದ್ಯರುಗಳು ಬೇರೆಡೆಗೆ ವರ್ಗಾವಣೆ ಪಡೆದು ಹೋದಲ್ಲಿ ಇಲ್ಲಿನ ಸರಕಾರಿ ಆಸ್ಪತ್ರೆ ವೈದ್ಯರಿಲ್ಲದೆ ಬಿಕೋ ಎನ್ನಬಹುದು. ಸಂಜೀವ ಮಠಂದೂರು ಶಾಸಕರಾದ ಅವಧಿಯಲ್ಲಿ 17 ವೈದ್ಯರು ಕೆಲಸ ನಿರ್ವಹಿಸುತ್ತಿದ್ದರು, ಈಗ ಅದು ಕಡಿಮೆ ಸಂಖ್ಯೆಗೇರುತ್ತಿದ್ದು ಮುಂದೆ ಇನ್ನಷ್ಟು ಕಡಿಮೆ ಆದಲ್ಲಿ ಸಾರ್ವಜನಿಕರಿಗೆ ಸೇವೆಗೆ ಕಷ್ಟದಾಯಕ ಆಗಬಹುದು. ಆಸ್ಪತ್ರೆಯ ವೈದ್ಯರು ತಮ್ಮ ಜೀವದ ಹಂಗು ತೊರೆದು ರೋಗಿಗಳ ಪ್ರಾಣ ಉಳಿಸುವ ಮತ್ತು ಆರೋಗ್ಯ ಕಾಪಾಡುವ ಕೆಲಸ ಮುತುವರ್ಜಿಯಿಂದ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ. ವೈದ್ಯರ ವಿರುದ್ಧದ ಈ ನಡೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರತೀ ದಿನ ಜನ ಜಂಗುಳಿಯಿಂದ ಇರುವ ಪುತ್ತೂರು ಸರಕಾರಿ ಆಸ್ಪತ್ರೆಗೆ ಪ್ರತೀ ದಿನ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಕಗೊಳಿಸುವ ಮೂಲಕ ವೈದ್ಯರ ಸೇವೆಗೆ ಅಡ್ದಿಯಾಗದಂತೆ ನಡೆದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಸರಕಾರ ಕಂಡುಕೊಳ್ಳಲಿ ಎಂಬ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.