ಪುತ್ತೂರು:ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತನ್ನ ತಾಯಿಯ ಸಾವಿಗೆ ಕಾರಣವಾದ ಆರೋಪಿಗೆ ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕಾೖಮಣ ಗ್ರಾಮದ ಅಂಕಜಾಲು ನವಗ್ರಾಮ ಕಾಲನಿ ನಿವಾಸಿ ನಾವೂರ ಎಂಬವರ ಮಗ ಗೋಪಾಲ ಯಾನೆ ಗೋಪ ಶಿಕ್ಷೆ ವಿಧಿಸಲ್ಪಟ್ಟ ಆರೋಪಿ.ಈತ 15-02-2019ರಂದು ರಾತ್ರಿ 11 ಘಂಟೆಗೆ ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಾಯಿ ಚೀಂಕುರುರವರೊಂದಿಗೆ ಜಗಳವಾಡಿ ಎಲೆ ಅಡಿಕೆ ಹುಡಿಮಾಡುವ ಕಲ್ಲಿನಿಂದ ಹೊಡೆದ ಪರಿಣಾಮ ಆ ಕಲ್ಲು ಚೀಂಕುರು ಅವರ ಹೊಟ್ಟೆಗೆ ಬಿದ್ದು ತೀವ್ರ ನೋವು ಉಂಟಾಗಿತ್ತು.ಬಳಿಕ,ತೀವ್ರ ನೋವಾಗುತ್ತಿದೆ ಎಂದು ಚೀಂಕುರುರವರು ಹೇಳಿದ್ದರಿಂದ,ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಪತಿ ನಾವೂರ ಅವರು ಹೇಳಿದ್ದರೂ ಸಹ ಆರೋಪಿಯು ತನ್ನ ತಾಯಿಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗದೇ ನಿರ್ಲಕ್ಷತನ ತೋರಿದ್ದರಿಂದ,ಆಕೆಯ ಹೊಟ್ಟೆಯ ಒಳಗಾಯ ಉಲ್ಬಣಿಸಿ ಚೀಂಕುರುರವರು 19-02-2019ರಂದು ಮೃತಪಟ್ಟಿದ್ದರು.ಘಟನೆಗೆ ಸಂಬಂಧಿಸಿ ಆರೋಪಿತನ ವಿರುದ್ದ ಐಪಿಸಿ ಕಲಂ 304(2)ರಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿರುವ ಈರಯ್ಯ ಡಿ.ಎನ್.ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದು ಸುಳ್ಯ ವೃತ್ತದ ಆಗಿನ ನಿರೀಕ್ಷಕರಾಗಿದ್ದ ಸತೀಶ್ ಕುಮಾರ್ ಆರ್.ರವರು ತನಿಖೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ,ಪ್ರತಿ ವಿವಾದವನ್ನು ಆಲಿಸಿ ವೈದ್ಯಕೀಯ ಸಾಕ್ಷ್ಯವನ್ನು ಪರಿಗಣಿಸಿ, ಆರೋಪಿತ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮಂಗಳೂರು(ಪೀಠಾಸೀನ ಪುತ್ತೂರು)ನ್ಯಾಯಾಧಿಶರಾದ ಸರಿತಾ ಡಿ ಇವರು ಆರೋಪಿನಿಗೆ 5 ವರ್ಷ ಶಿಕ್ಷೆ ಮತ್ತು ರೂ.5೦೦೦ ದಂಡ ವಿಧಿಸಿದ್ದಾರೆ.ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸುವಂತೆ ಆದೇಶಿಸಿ ಏ.29ರಂದು ತೀರ್ಪು ನೀಡಿರುತ್ತಾರೆ.ಅಭಿಯೋಜನೆಯ ಪರವಾಗಿ ಶ್ರೀಮತಿ ಜಯಂತಿ ಕೆ.ಭಟ್ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.