ಪರಸ್ಪರರನ್ನು ಗೌರವಿಸಿ, ಒಳಿತನ್ನು ಆಶಿಸುವುದೇ ಕ್ರೈಸ್ತ ಧರ್ಮವಾಗಿದೆ-ಬಿಷಪ್ ಪೀಟರ್ ಸಲ್ದಾನ್ಹಾ
ಪುತ್ತೂರು: ಭೂಮಿಯಲ್ಲಿ ಜೀವಿಸುವ ನಾವು ಸಹೋದರ, ಸಹೋದರಿಯರಂತೆ ಬಾಳಬೇಕು, ನಮ್ಮಲ್ಲಿ ಮನುಷ್ಯತ್ವದ ಗುಣ ಬೆಳೆಸುವಂತಾಗಬೇಕು, ನಾವು ಪರಸ್ಪರರನ್ನು ಗೌರವಿಸಿ, ಅವರ ಒಳಿತನ್ನು ಆಶಿಸುವುದೇ ಕ್ರೈಸ್ತ ಧರ್ಮದ ಉದ್ಧೇಶವಾಗಿದೆ ಎಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ(ಬಿಷಪ್)ರಾದ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಹೇಳಿದರು.
ಬನ್ನೂರು ಸಂತ ಅಂತೋನಿ ಧರ್ಮಕೇಂದ್ರಕ್ಕೆ ಇದೀಗ ರಜತ ಸಂಭ್ರಮವಾಗಿದ್ದು ಎ.29 ರಂದು ರಜತ ಸಂಭ್ರಮದ ಪ್ರಯುಕ್ತ ಅವರು ದಿವ್ಯ ಬಲಿಪೂಜೆ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರ ಹೃದಯ ಬೆಸೆಯುವುದು ನಾವು ಪೂಜಿಸುವ ಪವಿತ್ರ ಸ್ಥಳದಲ್ಲಿ. ಈ ಪವಿತ್ರ ಸ್ಥಳದಲ್ಲಿ ಪಾವಿತ್ರ್ಯತೆ ಸಾರುವ ಸಂಬಂಧಗಳ ವೃದ್ಧಿ, ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸುವ ಧಾರ್ಮಿಕ ಶಿಕ್ಷಣದ ಮೌಲ್ಯಗಳ ತುಂಬಿಸುವಿಕೆ, ಆದರ್ಶ ಕುಟುಂಬಗಳನ್ನು ಹೊಂದುವಲ್ಲಿ ಅದು ಸಹಕಾರಿಯಾಗುತ್ತದೆ ಎಂದ ಅವರು ಬನ್ನೂರು ಚರ್ಚ್ನಲ್ಲಿನ ಭಕ್ತರು ಹೃದಯವಂತರಾಗಿದ್ದರಿಂದ ಇಲ್ಲಿನ ಧರ್ಮಕೇಂದ್ರದ ಸಾನಿಧ್ಯ ಬೆಳೆದು ರಜತ ಸಂಭ್ರಮವನ್ನು ಆಚರಿಸುತ್ತಿದೆ ಮಾತ್ರವಲ್ಲ ಈ ಧಾರ್ಮಿಕ ಕ್ಷೇತ್ರ ಅನೇಕ ಭಕ್ತರನ್ನು ಸಾನಿಧ್ಯದತ್ತ ಸೆಳೆಯುತ್ತಿದೆ. ನಮ್ಮ ಹೃದಯದಲ್ಲಿ, ಮನಸ್ಸಿನಲ್ಲಿ ಒಳ್ಳೆಯತನದ, ಪ್ರೀತಿಯ, ಕ್ಷಮೆಯ, ಉಪಕಾರ ಮನೋಭಾವದ, ವಿಶ್ವಾಸದ ಮೌಲ್ಯಗಳನ್ನು ಹೊಂದುವಂತಾಗಬೇಕು. ನಾವು ಮತ್ತೊಬ್ಬರನ್ನು ತೆಗಳುವ ಬದಲು ಜನರ ಹೃದಯವನ್ನು ಬೆಸೆಯುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.

ಭಕ್ತರ ಸೇವಾ ಬದ್ಧತೆ, ಪ್ರೀತಿಯಿಂದ ಸಾನಿಧ್ಯ ಕಂಗೊಳಿಸುತ್ತಿದೆ-ವಂ|ಝೇವಿಯರ್ ದುರೈರಾಜ್:
ಮುಖ್ಯ ಅತಿಥಿ, ಭಾರತದ ಫ್ರಾನ್ಸಿಸ್ಕನ್ಸ್ ಸಭೆಯ ಪ್ರೊವಿನ್ಶಿಯಲ್ ವಂ|ಝೇವಿಯರ್ ದುರೈರಾಜ್ರವರು ಮಾತನಾಡಿ, ದೇವರ ಆಶೀರ್ವಾದದಿಂದ ಸಂತ ಅಂತೋನಿ ಧರ್ಮಕೇಂದ್ರ ಬೆಳೆದಿದೆ. ಧರ್ಮಕ್ಷೇತ್ರದಲ್ಲಿ ಸೇವೆ ಮಾಡುವುದು ನಮ್ಮ ಭಾಗ್ಯವಾಗಿದೆ. ಇಲ್ಲಿನ ಭಕ್ತರ ಸೇವಾ ಬದ್ಧತೆ ಹಾಗೂ ಪ್ರೀತಿಯಿಂದ ಸಾನಿಧ್ಯ ಕಂಗೊಳಿಸುತ್ತಿದ್ದು ಇಲ್ಲಿನ ಸಾನಿಧ್ಯದಿಂದ ಎಲ್ಲರಿಗೂ ಶಾಂತಿ ಸಿಗಲಿ ಎಂದು ಹೇಳಿ ಫ್ರಾನ್ಸಿಸ್ಕನ್ ಸಭೆಯ ವತಿಯಿಂದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾರವರಿಗೆ ಶಾಲು ಹೊದಿಸಿ, ಕಾಣಿಕೆ ನೀಡಿ ಗೌರವಿಸಿದರು.
ದೂರದೃಷ್ಟಿ, ತ್ಯಾಗದ ಫಲವೇ ರಜತ ಸಂಭ್ರಮದ ಆಚರಣೆಯಾಗಿದೆ-ಮಧು ಎಸ್.ಮನೋಹರ್:
ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ಮಾತನಾಡಿ, ಇಲ್ಲಿನ ಕ್ಷೇತ್ರವು ಇಪ್ಪತೈದು ವರ್ಷಗಳ ಜಯಂತಿ ಆಚರಿಸುತ್ತಿಲ್ಲ, ಪರಸ್ಪರ ನಂಬಿಕೆ, ಪ್ರಾರ್ಥನೆ, ಸಮಾಜಮುಖಿ ಸೇವೆ, ಬಾಂಧವ್ಯದ ಸಂಭ್ರಮವನ್ನು ಆಚರಿಸುತ್ತಿದೆ. ದೂರದೃಷ್ಟಿ ಹಾಗೂ ತ್ಯಾಗದ ಫಲವೇ ರಜತ ಸಂಭ್ರಮದ ಆಚರಣೆಯಾಗಿದೆ. ಜೀವನದಲ್ಲಿ ಶಾಂತಿಯ, ಪ್ರೀತಿಯ, ಸಹಾಯಹಸ್ತವು ಹೊಸ ಕಿರಣಗಳಾಗಬೇಕಾಗಿದೆ. ದೇವರ ಸೇವೆಯೊಂದಿಗೆ ಶ್ರೇಷ್ಟ ಮೌಲ್ಯಗಳನ್ನು ಪ್ರತಿಪಾದಿಸುವ ಕೇಂದ್ರವಾಗಿ ಇಲ್ಲಿನ ಕ್ಷೇತ್ರವು ಬೆಳೆದಿದೆ ಎಂದರು.
ಒಳ್ಳೆಯ ಮನಸ್ಸು, ಹೃದಯವಿದ್ದಾಗ ಪವಾಡಗಳು ಸಂಭವಿಸುತ್ತದೆ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಪುತ್ತೂರು ವಲಯದ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಕೇವಲ ೩೬ ವರ್ಷ ಬಾಳಿ ಬದುಕಿದ ಸಂತ ಅಂತೋನಿಯವರಿಗೆ ಕ್ರೈಸ್ತ ಧರ್ಮಸಭೆಯಲ್ಲಿ ಅಸಂಖ್ಯಾತ ಭಕ್ತರಿದ್ದಾರೆ. ನಿಜವಾಗಿಯೂ ಸಂತ ಅಂತೋನಿಯವರು ಪವಾಡ ಪುರುಷರಾಗಿದ್ದಾರೆ. ನಮ್ಮಲ್ಲಿ ಒಳ್ಳೆಯ ಮನಸ್ಸು, ಹೃದಯವಿದ್ದಾಗ ಪವಾಡಗಳು ಸಂಭವಿಸುತ್ತದೆ. ನಮ್ಮ ಕುಟುಂಬಗಳು ಪ್ರೀತಿ, ವಿಶ್ವಾಸದ ಕುಟುಂಬವನ್ನಾಗಿಸುವುದೇ ಪವಾಡವಾಗಿದ್ದು ಆ ಮೂಲಕ ಒಳ್ಳೆಯ ಭವಿಷ್ಯದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಇಲ್ಲಿನ ಕ್ರೈಸ್ತ ಬಾಂಧವರನ್ನು ಮರೆಯಲು ಸಾಧ್ಯವಿಲ್ಲ-ವಂ|ಆಲ್ಫೋನ್ಸ್ ಮೊರಾಸ್:
ಬನ್ನೂರು ಸಂತ ಅಂತೋನಿ ಧರ್ಮಕ್ಷೇತ್ರದ ಮೊದಲ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್ ಮಾತನಾಡಿ, ನಾನು ಈ ಧರ್ಮಕೇಂದ್ರದ ಧರ್ಮಗುರುವಾಗಿ ಆಗಮಿಸದ ಮೇಲೆ ಹಲವು ಏಳು-ಬೀಳುಗಳನ್ನು ಕಂಡು ಧರ್ಮಕೇಂದ್ರವು ಬೆಳೆದಿದೆ. ಈ ಧರ್ಮಕೇಂದ್ರವು ಬೆಳೆಯುವಲ್ಲಿ ಇಲ್ಲಿನ ಬಾಂಧವರು ಉತ್ತಮ ರೀತಿಯಲ್ಲಿ ಸಹಕರಿಸಿದ್ದು ಇಲ್ಲಿನ ಕ್ರೈಸ್ತ ಬಾಂಧವರನ್ನು ಮರೆಯಲು ಸಾಧ್ಯವಿಲ್ಲ. ಇದೀಗ ಈ ಧರ್ಮಕೇಂದ್ರವು ಬೆಳ್ಳಿ ಹಬ್ಬದ ಸಂಭ್ರಮವನ್ನು ಕಾಣುತ್ತಿದ್ದು ಚರ್ಚ್ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಯೇಸುಕ್ರಿಸ್ತರು ಶಾಂತಿ, ಕ್ಷಮೆಯನ್ನು ಸಾರಿದವರು. ಆದ್ರೆ ನಾವು ಮಾಡುವುದೇನು?.-ಶ್ರೀಮತಿ ಗೌರಿ:
ಸ್ಥಳೀಯ ನಗರಸಭೆ ಸದಸ್ಯೆ ಶ್ರೀಮತಿ ಗೌರಿ ಮಾತನಾಡಿ, ಧರ್ಮ ಧರ್ಮಗಳ ನಡುವೆ ಗಲಾಟೆ, ಪೈಪೋಟಿ ನಡುವೆ ಕಾಶ್ಮೀರದಂತಹ ಘಟನೆ ಇಲ್ಲಿ ಆಗಬಹುದಾ ಅನ್ನುವುದು ಪ್ರಶ್ನೆಯಾಗಿದೆ. ಎಲ್ಲಾ ಧರ್ಮಗಳು ಸಾರುವುದು ಶಾಂತಿಯನ್ನೇ. ದೇವರು ಒಬ್ಬನೇ ಆದರೆ ನಾಮ ಹಲವು. ಆ ಧರ್ಮ ಮೇಲು, ಈ ಧರ್ಮ ಮೇಲು ಹೇಳಿಕೊಂಡು ಬದುಕಿದ್ರೆ ಯುದ್ಧ ಖಂಡಿತಾ ನಡೀಬಹುದು. ಯೇಸುಕ್ರಿಸ್ತರು ಶಾಂತಿ ಮತ್ತು ಕ್ಷಮೆಯನ್ನು ಸಾರಿದವರು. ಆದ್ರೆ ನಾವು ಮಾಡುವುದೇನು?. ಎಂದ ಅವರು ಹೃದಯದ ಸಂಬಂಧಗಳು ಒಬ್ಬರಿಗೊಬ್ಬರಲ್ಲಿ ಇದ್ದಾಗ ದೇಶ, ಧರ್ಮ ಉಳಿಯಲು ಸಾಧ್ಯ. ಕ್ರಿಶ್ಚಿಯನ್ ಸಮುದಾಯವು ಸಮಾಜಕ್ಕೆ ಸೇವೆಯನ್ನು ಪ್ರೀತಿಯಿಂದ ಮಾಡುವವರು ಎಂದು ಹೇಳಿದರು.
ಚರ್ಚ್ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳಿಗೆ ಸನ್ಮಾನ:
ಬನ್ನೂರು ಚರ್ಚ್ ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಹಾಗೂ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಇತರ ಧರ್ಮಕೇಂದ್ರಗಳಿಗೆ ಧಾರ್ಮಿಕ ಸೇವೆ ಸಲ್ಲಿಸಲು ವರ್ಗಾವಣೆ ಹೊಂದಿದ ಧರ್ಮಗುರುಗಳಾದ ಚರ್ಚ್ ಪ್ರಥಮ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್(4.5 ವರ್ಷ), ವಂ|ಆರೋಕ್ಯಸ್ವಾಮಿ(2 ವರ್ಷ), ವಂ|ಆಗಸ್ತಿನ್ ಪಿಂಟೊ(1 ವರ್ಷ), ವಂ|ನಿಕೋಲಸ್ ಡಿ’ಸೋಜ(6 ವರ್ಷ), ವಂ|ಪ್ರಶಾಂತ್ ಫೆರ್ನಾಂಡೀಸ್(6 ವರ್ಷ) ಹಾಗೂ ಸಹಾಯಕ ಧರ್ಮಗುರುಗಳಾದ ವಂ|ಫ್ರಾನ್ಸಿಸ್ ರೊಸಾರಿಯೋ, ವಂ|ಕ್ರಿಸ್ಟಿರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚರ್ಚ್ ವ್ಯಾಪ್ತಿಯ ಧರ್ಮಗುರುಗಳಿಗೆ ಸನ್ಮಾನ:
ಬನ್ನೂರು ಚರ್ಚ್ ರವರಾಗಿದ್ದು ಇತರ ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳಾದ ವಂ|ಜ್ಯುಲಿಯಾನ್ ಪಿಂಟೊ, ವಂ|ಆಂಟನಿ ಲಸ್ರಾದೋ, ವಂ|ರಿಚರ್ಡ್ ಮಸ್ಕರೇನ್ಹಸ್, ವಂ|ಚಾಲ್ಸ್೯ ಲಸ್ರಾದೋ, ವಂ|ಪಾವ್ಲ್ ಸಿಕ್ವೇರಾ, ವಂ|ಗಿಲ್ಬರ್ಟ್ ಲೋಬೊ, ವಂ|ಬೆಂಜಮಿನ್ ಪಿಂಟೊ, ವಂ|ವಾಲ್ಟರ್ ಮಿನೇಜಸ್, ವಂ|ಗಿಲ್ಬರ್ಟ್ ಮಸ್ಕರೇನ್ಹಸ್, ವಂ|ಫೆಲಿಕ್ಸ್ ಲೋಬೊ, ವಂ|ಜೇಸನ್ ಪಾಯಿಸ್, ವಂ|ಪ್ರಕಾಶ್ ಲ್ಯಾನ್ಸಿ ರೆಬೆಲ್ಲೋ, ವಂ|ರೋಶನ್ ಲೋಬೊ, ವಂ|ರೋಸ್ಟನ್ ಫೆರ್ನಾಂಡೀಸ್ ರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚರ್ಚ್ ವ್ಯಾಪ್ತಿಯ ಧರ್ಮಭಗಿನಿಯರಿಗೆ ಸನ್ಮಾನ:
ಬನ್ನೂರು ಚರ್ಚ್ ರವರಾಗಿದ್ದು ಇತರ ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಭಗಿನಿಯರಾದ ಸಿಸ್ಟರ್ ಮಾರಿಯೆಟ್ ಲೋಬೊ, ಸಿ|ರೆನ್ನಿ ಲಸ್ರಾದೋ, ಸಿ|ಸಿಸಿಲಿಯಾ ಲಸ್ರಾದೋ, ಸಿ|ಫಿಲೋಮಿನಾ ಲೋಬೊ, ಸಿ|ಲೀನಾ ಪಿಂಟೊ, ಸಿ|ಲೂಸಿ ಪಾಯಿಸ್, ಸಿ|ಅಪೋಲಿನ್ ಪಾಯಿಸ್, ಸಿ|ಲೋರಾ ಪಾಯಿಸ್, ಸಿ|ಫ್ಲೊಸ್ಸಿ ಮಿನೇಜಸ್, ಸಿ|ಲೀನಾ ಮಸ್ಕರೇನ್ಹಸ್, ಸಿ|ಮೋನಿಕಾ ಪೀಟರ್ ಮಸ್ಕರೇನ್ಹಸ್, ಸಿ|ರೀಟಾ ಶಾಂತಿ ರೆಬೆಲ್ಲೋ, ಸಿ|ಕ್ಲಾರಾ ಜ್ಯೋತಿ ರೆಬೆಲ್ಲೋರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಜತ ಸಂಭ್ರಮಕ್ಕೆ ಸಹಕರಿಸಿದ ಧರ್ಮಗುರುಗಳಿಗೆ ಸನ್ಮಾನ:
ಚರ್ಚ್ ರಜತ ಸಂಭ್ರಮ ಹಾಗೂ ಚರ್ಚ್ ನವೀಕರಣದ ಸಮಯದಲ್ಲಿ ಇತರೆ ಚರ್ಚ್ನ ಕ್ರೈಸ್ತ ಬಾಂಧವರಿಂದ ನೆರವು ಸಿಗಲು ಸಹಕರಿಸಿದ ಪ್ರಧಾನ ಧರ್ಮಗುರುಗಳಾದ ಮಾಯಿದೆ ದೇವುಸ್ ಚರ್ಚ್ನ ವಂ|ಲಾರೆನ್ಸ್ ಮಸ್ಕರೇನ್ಹಸ್, ಬೆಂಗಳೂರು ಸೈಂಟ್ ಆಂಟನೀಸ್ ಫ್ರಾಯರಿ ಚರ್ಚ್ನ ವಂ|ಝೇವಿಯರ್ ದುರೈರಾಜ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನ ವಂ|ಜೆ.ಬಿ ಮೊರಾಸ್, ಸುಳ್ಯ ಸೈಂಟ್ ಬ್ರಿಜಿಡ್ ಚರ್ಚ್ ಧರ್ಮಗುರು, ಉರ್ವಾ ಚರ್ಚ್ ಧರ್ಮಗುರುಗಳನ್ನು ಜೊತೆಗೆ ಆಯಾ ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
ಸೇವೆ ಸಲ್ಲಿಸಿದ ಉಪಾಧ್ಯಕ್ಷ, ಕಾರ್ಯದರ್ಶಿಗಳಿಗೆ ಸನ್ಮಾನ:
ಬನ್ನೂರು ಚರ್ಚ್ ನ ಆರಂಭದಿಂದ ಇಲ್ಲಿಯವರೆಗೆ 25 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಪೀಟರ್ ಡಿ’ಸೋಜ, ಲಾರೆನ್ಸ್ ಗೊನ್ಸಾಲ್ವಿಸ್, ಜೆರಿ ಪಾಯಿಸ್, ಇನಾಸ್ ಗೊನ್ಸಾಲ್ವಿಸ್, ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿಗಳಾದ ವಿಲ್ಮಾ ಗೊನ್ಸಾಲ್ವಿಸ್, ನತಾಲಿಯಾ ಪಾಯಿಸ್, ನೋಯೆಲ್ ಸೆರಾವೋ, ಸಿರಿಲ್ ವಾಸ್, ಜೋಯ್ಸ್ ಡಿ’ಸೋಜರವರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನ:
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಫ್ರಾನ್ಸಿಸ್ಕನ್ ಸಭೆಯ ಪ್ರೊವಿನ್ಶಿಯಲ್ ವಂ|ಝೇವಿಯರ್ ದುರೈರಾಜ್, ಚರ್ಚ್ ನವೀಕರಣ ಹಾಗೂ ರಜತ ಸಂಭ್ರಮದ ಯಶಸ್ಸಿಗೆ ಕಾರಣಕರ್ತರಾದ ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಾ ದಾನಿಗಳಿಗೆ ಗೌರವ:
ಚರ್ಚ್ ನವೀಕರಣ ಸಂದರ್ಭದಲ್ಲಿ ರೂ.ಒಂದು ಲಕ್ಷಕ್ಕಿಂತ ಹೆಚ್ಚು ಧನಸಹಾಯ ನೀಡಿದ ಮಹಾ ದಾನಿಗಳಾದ ಬನ್ನೂರು ಚರ್ಚ್ನ ವಿಲ್ಮಾ ಗೊನ್ಸಾಲ್ವಿಸ್, ಫ್ರೆಡ್ರಿಕ್ ಮಸ್ಕರೇನ್ಹಸ್, ಹೆನ್ರಿ ಡಿ’ಸೋಜ, ಲ್ಯಾನ್ಸಿ ಡಿ’ಸೋಜ, ಪೀಟರ್ ಡಿ’ಸೋಜ, ಚಾರ್ಲ್ಸ್ ಗೊನ್ಸಾಲ್ವಿಸ್, ತೋಮಸ್ ಫೆರ್ನಾಂಡೀಸ್, ಎಲಿಜಾ ಮಿನೇಜಸ್, ಲಿಲ್ಲಿ ಡಿಲೀಮ ಪುತ್ತೂರು, ಪಾವ್ಲ್ ಮಸ್ಕರೇನ್ಹಸ್ ಪರ್ಲಡ್ಕ, ಫ್ರಾನ್ಸಿಸ್ ವೈ ಬೆಂಗಳೂರು ಮತ್ತು ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್ನ ಮಾಲಕ ಗಿಲ್ಬರ್ಟ್ ಡಿ’ಸೋಜ, ಇಂಜಿನಿಯರಿಂಗ್ ವರ್ಕ್ ಸಹಕರಿಸಿದ ಇಂಜಿನಿಯರ್ ಅವಿಲ್ ಸೆರಾವೋರವರುಗಳನ್ನು ಹಾಗೂ ರೂ.50 ಸಾವಿರಕ್ಕೂ ಮಿಕ್ಕಿ, ರೂ.25 ಸಾವಿರಕ್ಕೂ ಮಿಕ್ಕಿ ಸಹಾಯಧನ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಆರಂಭದಲ್ಲಿ ಸ್ವಾಗತ ನೃತ್ಯದ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ವರದಿ ಮಂಡಿಸಿದರು. ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್ ವಂದಿಸಿದರು. ನಿವೃತ್ತ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ಹಾಗೂ ಮಾರಿಯೆಟ್ ಶರ್ಲಿ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ನೆರವೇರಿತು. ರಜತ ಸಂಭ್ರಮಕ್ಕೆ ಆಗಮಿಸಿದ ಭಕ್ತರಿಗೆ ಭೋಜನವನ್ನು ಏರ್ಪಡಿಸಲಾಗಿತ್ತು.
ಕ್ರೈಸ್ತ ಸಮುದಾಯದಲ್ಲಿ ಸೇವೆ ರಕ್ತಗತವಾಗಿ ಬಂದಿದೆ..
ಭಕ್ತರು ತಮ್ಮ ಕಷ್ಟಗಳನ್ನು ನಿವಾರಿಸಲು ದೇವಾಲಯಕ್ಕೆ ಹೋಗಿ ಪ್ರಾರ್ಥಿಸುವುದು ಸಹಜ. ದೇವರಿಗೆ ಸಣ್ಣ ಕಾಣಿಕೆ ಕೊಟ್ಟು ದೊಡ್ಡ ಬೇಡಿಕೆಯನ್ನು ಇಡುವುದು ಭಕ್ತರ ಗುಣ. ದೇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ನಮ್ಮನ್ನು ಹೆತ್ತು ಸಾಕಿ ಸಲಹುವ ತಂದೆ-ತಾಯಿಯೇ ನಮ್ಮ ಕಣ್ಣಿಗೆ ಕಾಣುವ ದೇವರಾಗಿದ್ದಾರೆ. ಜೀವಂತವಿರುವ ಸಮಯದಲ್ಲಿ ತಂದೆ-ತಾಯಿಯನ್ನು ಹೊಗಳಬೇಕೇ ವಿನಹ ಅವರು ಮರಣಿಸಿದ ನಂತರ ಅಲ್ಲ. ಸೇವೆ ಎನ್ನುವುದು ಕ್ರೈಸ್ತ ಸಮುದಾಯದಲ್ಲಿ ರಕ್ತಗತವಾಗಿ ಬಂದಿದೆ ಎನ್ನುವುದಕ್ಕೆ ಅವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆಯೇ ಸಾಕ್ಷಿಯಾಗಿದೆ. ಹಣದಲ್ಲಿ, ಐಶ್ಚರ್ಯದಲ್ಲಿ ಪ್ರೀತಿಯನ್ನು ಸಂಪಾದಿಸಲು ಸಾಧ್ಯವಿಲ್ಲ, ವಿಶ್ವಾಸವನ್ನು ಗಳಿಸಿದಾಗ ಮಾತ್ರ ಪ್ರೀತಿಯನ್ನು ಸಂಪಾದಿಸಲು ಸಾಧ್ಯವಾಗುತ್ತದೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ಬಿಷಪ್ರವರಿಗೆ ಸ್ವಾಗತ..
ಆರಂಭದಲ್ಲಿ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನರವರನ್ನು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, 31 ಆಯೋಗಗಳ ಸಂಚಾಲಕ ಜೆರಿ ಪಾಯಿಸ್ ಹಾಗೂ ಭಕ್ತಾಧಿಗಳ ಪರವಾಗಿ ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಬಳಿಕ ಬಿಷಪ್ ಪೀಟರ್ ಸಲ್ದಾನ್ಹಾ ಹಾಗೂ ಅತಿಥಿ ಗಣ್ಯರನ್ನು ಬ್ಯಾಂಡ್ ವಾದ್ಯದ ಮೂಲಕ ಮೆರವಣಿಗೆಯಲ್ಲಿ ಚರ್ಚ್ಗೆ ಕರೆ ತರಲಾಯಿತು. ಚರ್ಚ್ ಪ್ರವೇಶಿಸಿದ ಬಿಷಪ್ ಪೀಟರ್ ಸಲ್ದಾನ್ಹಾರವರು ಮಂಡಿಯೂರಿ ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸಿದರು.
ದಿವ್ಯ ಬಲಿಪೂಜೆ..
ಚರ್ಚ್ ರಜತ ಸಂಭ್ರಮದ ಪ್ರಯುಕ್ತ ಧರ್ಮಾಧ್ಯಕ್ಷ ಅತಿ.ವಂ.ಡಾ|ಪೀಟರ್ ಸಲ್ದಾನ್ಹಾರವರು ಸಂಭ್ರಮದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಫ್ರಾನ್ಸಿಸ್ಕನ್ಸ್ ಸಭೆಯ ಪ್ರೊವಿನ್ಶಿಯಲ್ ವಂ|ಝೇವಿಯರ್ ದುರೈರಾಜ್, ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಬನ್ನೂರು ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರೊಂದಿಗೆ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಗುರುಗಳು, ಫ್ರಾನ್ಸಿಸ್ಕನ್ ಸಭೆಯ ಧರ್ಮಗುರುಗಳ ಸಹಿತ 40ಕ್ಕೂ ಮಿಕ್ಕಿ ಧರ್ಮಗುರುಗಳು, ಧರ್ಮಭಗಿನಿಯರು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, 21 ಆಯೋಗಗಳ ಸಂಚಾಲಕ ಜೆರಿ ಪಾಯಿಸ್, ಚರ್ಚ್ ಪಾಲನಾ ಸಮಿತಿ ಸದಸ್ಯರು, ವೇದಿ ಸೇವಕರು, ಗಾಯನ ಮಂಡಳಿ, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಭಕ್ತಾಧಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.
ಸ್ಮರಣ ಸಂಚಿಕೆ ಬಿಡುಗಡೆ..
ಚರ್ಚ್ ರಜತ ಸಂಭ್ರಮದ ಪ್ರಯುಕ್ತ ಕಳೆದ ಇಪ್ಪತ್ತೈದು ವರ್ಷಗಳ ಆಗು-ಹೋಗುಗಳ ಬಗ್ಗೆ ಹಮ್ಮಿಕೊಳ್ಳಲಾಗಿರುವ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಧರ್ಮಾಧ್ಯಕ್ಷರಾದ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.