ಪುತ್ತೂರು: ಕೆದಂಬಾಡಿ ಗ್ರಾಮದ ಕೋಡಿಯಾಡ್ಕ ಮಾಡ ಶ್ರೀ ನಾಗಬ್ರಹ್ಮ ದೈವಸ್ಥಾನ- ಶ್ರೀ ಶಿರಾಡಿ ದೈವಸ್ಥಾನ ಹಾಗೂ ಮುಂಡಾಳಗುತ್ತು ಯಜಮಾನರಾದ ಮುಂಡಾಳಗುತ್ತು ಶಾಂತಾರಾಮ ರೈರವರಿಗೆ ಮೇ.3ರಂದು ಬೆಳಿಗ್ಗೆ 11ಕ್ಕೆ ಕೋಡಿಯಾಡ್ಕ ಮಾಡ ದೈವಸ್ಥಾನದಲ್ಲಿ ಜರಗಲಿರುವ ನೇಮೋತ್ಸವ ಸಂದರ್ಭದಲ್ಲಿ ಸನ್ಮಾನ ನಡೆಯಲಿದೆ.
ಮುಂಡಾಳಗುತ್ತು ಶಾಂತಾರಾಮ ರೈ ಯವರು ಕುಂಜಾಡಿ ಜತ್ತಪ್ಪ ರೈ ಮತ್ತು ಮುಂಡಾಳಗುತ್ತು ಲಕ್ಷ್ಮೀ ರೈ ಇವರ ಪ್ರಥಮ ಪುತ್ರನಾಗಿದ್ದು, ಇವರ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಕೆದಂಬಾಡಿ, ಪ್ರೌಢಶಿಕ್ಷಣವನ್ನು ಬೆಳ್ಳಾರೆ ಮತ್ತು ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಇಲ್ಲಿ ಮುಗಿಸಿರುತ್ತಾರೆ. ನಂತರ ಎರಡು ವರ್ಷಗಳ ಕಾಲ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಒಂದು ವರ್ಷದ ಪೋಲಿಸ್ ಟ್ರೈನಿಂಗನ್ನು ಮೈಸೂರು ಪೋಲಿಸ್ ಕಾಲೇಜಿನಲ್ಲಿ, ಬಳಿಕ ಪ್ರೋಬೆಸನರಿ ಟ್ರೈನಿಂಗನ್ನು ಬೆಳಗಾವಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಮುಗಿಸಿರುತ್ತಾರೆ ನಂತರ ಬೆಂಗಳೂರು ಪೋಲಿಸ್ ಇಲಾಖೆಯಲ್ಲಿ ಹನ್ನೆರಡು ವರ್ಷ ಸೇವೆ ಮಾಡಿರುತ್ತಾರೆ ನಂತರ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆಯಾಗಿ ಮಂಗಳೂರಿನಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಮಾಡಿರುತ್ತಾರೆ. ಮಂಗಳೂರು ರೈಲ್ವೆ ಇಲಾಖೆಯಲ್ಲಿ ಸ್ಪೇಷಲ್ ಬ್ರಾಂಚ್ ಇಲಾಖಾ ಟ್ರಾಫಿಕ್ ಪೋಲಿಸರಾಗಿ ಹಾಗೂ ಮಂಗಳೂರು ಮತ್ತು ಶಿವಮೊಗ್ಗ ರೈಲ್ವೇ ಪೋಲಿಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಐದು ವರ್ಷಗಳ ಕಾಲ ಮಂಗಳೂರು ಲೋಕಾಯುಕ್ತದಲ್ಲಿ ಸೇವೆ ಮಾಡಿದ ಹೆಗ್ಗಳಿಕೆ ಇವರಿಗೆ ಸೇರಿದೆ.
ನಂತರ ಎರಡು ವರ್ಷಗಳ ಕಾಲ ಉಡುಪಿಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಬಳಿಕ ಡಿವೈಎಸ್ಪಿಯಾಗಿ ಪೋಲಿಸ್ ತನಿಖಾ ಇಲಾಖೆಯಲ್ಲಿ ಐದು ವರ್ಷಗಳ ಕಾಲ ಸೇವೆ ಮಾಡಿ ವೃತ್ತಿಯಿಂದ 1999 ರಂದು ನಿವೃತ್ತರಾದರು. ಇವರ ಪತ್ನಿ ಮಾಕೂರು ಶುಭಾವತಿ, ಪುತ್ರರಾದ ಮಕ್ಕಳ ತಜ್ಞ ಡಾ.ಯಂ ಜೀತೇಂದ್ರ ರೈ, ಬ್ಯಾಂಕ್ ಆಫ್ ಬರೋಡಾದ ಚೀಫ್ ಎಕ್ಸ್ಕ್ಯೂಟೀವ್ ಆಫೀಸರ್ ಯಂ ರವೀಂದ್ರ ರೈ ಹಾಗೂ ಆಮೇರಿಕಾದ ಹೂಸ್ಟನ್ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಯಂ ಯತೀಂದ್ರ ರೈರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಂತರಾಮ ರೈಯವರು ಮುಂಡಾಳಗುತ್ತಿನ ಯಜಮಾನರಾಗಿ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರು ಪ್ರಸ್ತುತ ಮಂಗಳೂರಿನ ಬಿಜೈ ನಿವಾಸಿಯಾಗಿದ್ದಾರೆ.