ನೆಲ್ಯಾಡಿ: ಏ.20ರಂದು ನಿಧನರಾದ ನಿವೃತ್ತ ಸೈನಿಕ, ಹಿರಿಯ ಸಾಹಿತಿ,ಕವಿಯೂ ಆಗಿರುವ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿಸರ್ಗಮಾಣಿಕ್ಯ ನಿಲಯದ ನಿವಾಸಿ ಅಗ್ರಾಳ ನಾರಾಯಣ ರೈಯವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಮೇ 2ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮೃತರ ಕುರಿತು ಮಾತನಾಡಿ, 28 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ನಾರಾಯಣ ರೈಯವರು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಸಾಹಿತಿ, ಕವಿಯೂ ಆಗಿದ್ದ ಅವರು ಅಕ್ಷರಾಂಜಲಿ ಜೋಡಣೆಯಲ್ಲಿ ಹೆಚ್ಚು ನಿಪುಣರಾಗಿದ್ದರು. ಸರಳ ವ್ಯಕ್ತಿತ್ವದ ನಾರಾಯಣ ರೈಯವರು ಯುವಕರಿಗೆ ಸ್ಪೂರ್ತಿಯಾಗಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ ನೀಡಿದ್ದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಹಿತ ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದರು. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು.
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೃತ ಅಗ್ರಾಳ ನಾರಾಯಣ ರೈಯವರ ಪತ್ನಿ ಸುಲೋಚನ ರೈ ಕೆ.ವಿ., ಪುತ್ರ ಪ್ರಸನ್ನ ರೈ, ಸೊಸೆ ಸೌಮ್ಯ ರೈ, ಪುತ್ರಿಯರಾದ ಪೂರ್ಣಿಮಾ ರೈ, ಪ್ರತಿಮಾ ರೈ, ಅಳಿಯ ವಿಶ್ವನಾಥ ರೈ ಕುಕ್ಕುಂಜೋಡು, ಅನ್ನಪೂರ್ಣ ಪ್ರಸಾದ್ ಹಾಗೂ ಕುಟುಂಬಸ್ಥರು, ಮೊಮ್ಮಕ್ಕಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.