*ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣಗೊಂಡಿದೆ: ಡಾ. ಪೀಟರ್ ಪಾವ್ಲ್ ಸಲ್ದಾನ
*ಬೆಳೆಯುವ ಜನರಿಗೆ ಸಮಾಜದ ಕೊಡುಗೆ ಅಪಾರವಾಗಿದೆ: ಐವನ್ ಡಿಸೋಜಾ
*ಜಾತಿಧರ್ಮವನ್ನು ಅರ್ಥೈಸಿಕೊಂಡು ಒಂದಾಗಿ ಬದುಕುವ: ಶ್ರೀ ಶ್ರೀಕೃಷ್ಣ ಗುರೂಜಿ
ವಿಟ್ಲ: ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣಗೊಂಡು ಇಂದು ಲೋಕಾರ್ಪಣೆಗೊಂಡಿದೆ. ಅಭಿವೃದ್ಧಿಯ ಸಂಕೇತವೇ ಈ ಒಂದು ಸಭಾಭವನ ಆಗಿದೆ. ನಮ್ಮೊಳಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ರವರು ಹೇಳಿದರು.
ಅವರು ಮೇ.5ರಂದು ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರುವಾಯಿ ಮುಚ್ಚಿರಪದವು ಫಾತಿಮ ಮಾತೆ ದೇವಾಲಯದ ಫಾತಿಮಾ ಮಾತಾ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರು ಮಾತನಾಡಿ, ಇದೊಂದು ಅತ್ಯಂತ ಸಂತೋಷದ ವಿಷಯ. ಈ ಸಮುದಾಯ ಭವನ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ವರ್ಗದ ಜನರನ್ನು ಒಟ್ಟು ಮಾಡುವ ಭವನವಾಗಿದೆ. ಇತರ ಸಮುದಾಯದಂತೆ ನಮ್ಮ ಸಮುದಾಯ ಜನರು ಬೆಳೆಯುತ್ತಿದ್ದಾರೆ. ಬೆಳೆಯುವ ಜನರಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಅನೇಕ ಏರು ಪೇರುಗಳಿವೆ. ಪೆರುವಾಯಿಯ ಈ ಒಂದು ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವಾಗಿದೆ ಎಂದರು.

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಮಾತನಾಡಿ, ನಾವೆಲ್ಲರೂ ಪುಣ್ಯಾತ್ಮರು. ಧರ್ಮಗ್ರಂಥಗಳು ಸಾರುವುದು ಒಂದೇ ಸಹಬಾಳ್ವೆ. ಒಬ್ಬರನ್ನೊಬ್ಬರು ಅರಿತು ಬಾಳುವ ಕೆಲಸವಾಗಬೇಕು. ಭಾವೈಕ್ಯತೆ ಭಾವನೆ ಎಲ್ಲರಲ್ಲೂ ಮೂಡಬೇಕು. ಇದೊಂದು ವ್ಯತಿರಿಕ್ತವಾದ ಚರ್ಚ್ ಆಗಿದೆ.ಎಲ್ಲಾ ಜಾತಿಧರ್ಮವನ್ನು ಅರ್ಥೈಸಿಕೊಂಡು ಒಂದಾಗಿ ಬದುಕುವ ಎಂದರು.
ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಮುಹಮ್ಮದ್ ಶರೀಫ್ ಮದನಿ, ವಿಟ್ಲ ವಲಯ ವಿಗಾರ್ ವಾರ್ ಐವನ್ ರೊಡ್ರಿಗಸ್, ಕಯ್ಯಾರ್ ಕ್ರಿಸ್ತರಾಜ ದೇವಾಲಯ ಧರ್ಮಗುರು ವಿಶಾಲ್ ಮೊನಿಸ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು,
ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸಮುದಾಯ ಭವನ ಕಟ್ಟಡ ಸಮಿತಿ ಸಂಚಾಲಕ ಚಾರ್ಲ್ಸ್ ಡಿಸೋಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜಾ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸಂತೋಷ್ ಮೊಂತೆರೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.