ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ತುಂಬಾ ಅಗತ್ಯ-ಡಾಕ್ಟರ್ ಗಂಗಾ
ಪುತ್ತೂರು: ಇಂದಿನ ವಾಸ್ತವಿಕತೆಯಲ್ಲಿ ಎಲ್ಲ ಯುವ ಜನರು ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರವನ್ನು ಆಡಬೇಕಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ವಿದ್ಯಾರ್ಥಿ ಸಮುದಾಯದವರು ಈ ಜವಾಬ್ದಾರಿಯಲ್ಲಿ ಹೆಚ್ಚು ಕ್ರಿಯಾಶೀಲ ಪಾತ್ರ ವಹಿಸಬೇಕಾಗುತ್ತದೆ. ಹೀಗೆ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿ ವಹಿಸುವವರು ಅಗತ್ಯ ತರಬೇತಿಗಳನ್ನು ಪಡೆಯಬೇಕು ಇಲ್ಲದಿದ್ದರೆ ಅನಗತ್ಯ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಕೆ.ಎಂ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಗಂಗಾ ಅವರು ತಿಳಿಸಿದ್ದಾರೆ.

ಅವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇದರ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಪುತ್ತೂರು ಇವರ ಸಹಯೋಗದೊಂದಿಗೆ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಉದ್ಘಾಟಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮೊಹಮ್ಮದ್ ಸಾಹೇಬ್ ಅವರು, ಇವತ್ತಿನ ಯುವ ಜನತೆ ತೀರಾ ಅವಸರ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು ಹೆಚ್ಚು ಹೆಚ್ಚು ಅವಘಡಗಳು, ಅಪಾಯಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಂತಹ ತುರ್ತು ಪರಿಸ್ಥಿತಿ ನಿಭಾವನೆ ತರಬೇತಿ ಕಾರ್ಯಕ್ರಮಗಳು ತುಂಬಾ ಉಪಯುಕ್ತ ಮತ್ತು ಅರ್ಥಪೂರ್ಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ಹೆಡ್ ಮನಮೋಹನ್ ಅವರು ಮಾತನಾಡಿ, ಈ ಕೌಶಲ್ಯಭರಿತವಾದ ತರಬೇತಿಯು ವಿದ್ಯಾರ್ಥಿಗಳನ್ನು ಅಗತ್ಯದಲ್ಲಿರುವವರ ಸೇವೆಗೆ ಪ್ರೇರೇಪಿಸುತ್ತದೆ ಎಂದು ಉತ್ತೇಜನ ನೀಡಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಕಾರ್ಯದರ್ಶಿ ರಾಮಚಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಕೆ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಿಟಿ ನಿಯೋಜಿತ ಅಧ್ಯಕ್ಷ ಉಲ್ಲಾಸ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಘಟಕದ ಸಂಯೋಜಕ ನಂದಕಿಶೋರ್ ಎಸ್ ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಘಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಕೆ.ಎಂ.ಸಿ ಆಸ್ಪತ್ರೆಯ ತಂಡವು ಪ್ರಾಯೋಗಿಕವಾಗಿ ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ( ಸಿಪಿಆರ್) ತರಬೇತಿಯನ್ನು ನೀಡಲಾಯಿತು.