ರಾಮಕುಂಜ: ಕಡಬ ತಾಲೂಕು ಕೊೖಲ ಗ್ರಾಮದ ನೀಲಮೆ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಮಂಗಳವಾರ ಬೆಳಿಗ್ಗೆ ಸ್ಥಳಿಯರೋರ್ವರ ಗಮನಕ್ಕೆ ಬಂದಿದೆ.
ಬೆಳಿಗ್ಗೆ ನೀಲಮೆ ಹೊನ್ನಪ್ಪ ಗೌಡ ಎಂಬುವರು ದಿನ ನಿತ್ಯ ಪೂಜಾ ಸಾಮಾಗ್ರಿಯನ್ನು ದೇವಸ್ಥಾನದಲ್ಲಿಡಲು ತೆರಳಿದ ಸಂದರ್ಭ ದೇವಸ್ಥಾನದ ಹೊರಗಡೆ ಸಿಮೆಂಟ್ ಹಾಕಿ ಭದ್ರಪಡಿಸಿ ಅಳವಡಿಸಲಾಗಿದ್ದ ಕಾಣಿಕೆ ಡಬ್ಬಿಯ ಮುಚ್ಚಲ ಮುರಿದು ಕಳವು ಮಾಡಲಾಗಿದೆ. ಡಬ್ಬದಲ್ಲಿದ್ದ ವಸ್ತುರೂಪದ ಬೆಳ್ಳಿಯ ಹರಕೆಗಳು, ಕಾಣಿಕೆ ಹಣ ಕದ್ದೊಯ್ದಿದ್ದಾರೆ. ದೇವಸ್ಥಾನದ ಪಕ್ಕದ ನೈವೈದ್ಯ ತಯಾರಿಕಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿದರೂ ಕೊಠಡಿಯಲ್ಲಿ ದಾಸ್ತಾನು ಇರಿಸಲಾಗಿದ್ದ ಪೂಜಾ ಪರಿಕರಗಳನ್ನು ಕದ್ದೊಯ್ಯಲಿಲ್ಲ. ಈ ಬಗ್ಗೆ ದೇವಸ್ಥಾನದ ಆಡಳಿತ ಪ್ರಮುಖರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಸುತ್ತಮುತ್ತ ಕೊೖಲ ಜಾನುವಾರು ಸಂವರ್ದನಾ ಮತ್ತು ತರಬೇತಿ ಕೇಂದ್ರದ ಜಾಗವಿದ್ದು ಸರಿಯಾದ ರಕ್ಷಣಾ ಬೇಲಿಯಿಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಪುಂಡಾ ಪೋಕುರಿಗಳ ಅಟ್ಟಹಾಸ ಮೀತಿ ಮೀರುತ್ತಿದೆ. ತಡ ರಾತ್ರಿಯಾದರೂ ಯುವಕರ ಪಡೆ ನೀಲಮೆ ಸುತ್ತಮುತ್ತ ಪರಿಸರದಲ್ಲಿ ಸುತ್ತಾಡುತ್ತಿರುತ್ತದೆ. ಇಂತವರಿಂದಲೇ ಕಳ್ಳತನ ಕೃತ್ಯ ನಡೆದಿರಬಹುದು. ಇದಕ್ಕೆಲ್ಲಾ ಕಡಿವಾಣ ಹಾಕಲು ಪೊಲೀಸರು ಈ ಭಾಗದಲ್ಲಿ ಗಸ್ತು ತಿರುಗಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.