ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಮೇಘಾಲಯದ ರೈತರ ಭೇಟಿ

0

ಪುತ್ತೂರು: ಮೇಘಾಲಯ ರಾಜ್ಯದ ರೈತರು ಮತ್ತು ವಿಜ್ಞಾನಿಗಳು ಮೇ.7 ರಂದು ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಸಮಗ್ರ ಕೃಷಿಯ ಬಗ್ಗೆ ವಿಚಾರವನ್ನು ತಿಳಿದುಕೊಳ್ಳಲು ಕೃಷಿ ಕ್ಷೇತ್ರದ ಸಂದರ್ಶನ ಮಾಡಿದರು.


ಪುತ್ತೂರಿನ ಗೇರು ಸಂಶೋಧನಾಲಯದ ನಿರ್ದೇಶಕರಾದ ಹಿರಿಯ ಪ್ರಧಾನ ವಿಜ್ಞಾನಿ ಡಾ. ಬಾಲಸುಬ್ರಮಣ್ಯನ್‌, ಹಿರಿಯ ವಿಜ್ಞಾನಿ ಡಾ. ಈರದಾಸಪ್ಪ ಇ., ವಿಜ್ಞಾನಿ ಡಾ. ಎಚ್‌.ಪಿ. ಭಾಗ್ಯ ಹಾಗೂ ಮೇಘಾಲಯ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಅಧಿಕಾರಿಗಳಾದ ದೀಪ್‌ ಜ್ಯೋತಿ ಕೋಚ್‌, ಏಡನ್‌ ಹಾಗೂ ಆಂಡ್ರಿಯನ್  ಜೊತೆಗಿದ್ದರು. 14 ರೈತರನ್ನು ಒಳಗೊಂಡ ಈ ತಂಡ ಮೇಘಾಲಯ ಸರಕಾರದ ಆರ್ಥಿಕ ಸಹಕಾರದಿಂದ ವಿಮಾನ ಮೂಲಕ ಬೆಂಗಳೂರು-ಮಂಗಳೂರಿಗೆ ಬಂದು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮೂರು ದಿನಗಳ ಗೇರು ನರ್ಸರಿ ಅಭಿವೃದ್ಧಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಪ್ರಾತ್ಯಕ್ಷಿಕೆ ಅನುಭವಕ್ಕಾಗಿ ಸಿರಿಕಡಮಜಲು ಕೃಷಿ ಕ್ಷೇತ್ರದ ಸ್ವೇದಬಿಂದು ಗೇರು ತೋಟವನ್ನು ವೀಕ್ಷಿಸಿದರು. ವೈಜ್ಞಾನಿಕ ಗೇರು ಕೃಷಿಕರಾದ ಕಡಮಜಲು ಸುಭಾಸ್‌ ರೈ ಶಿಬಿರಾರ್ಥಿಗಳಿಗೆ ಗೇರು ಕೃಷಿ ಮತ್ತು ಸಮಗ್ರ ಕೃಷಿ ಕುರಿತಾದ ತಮ್ಮ ಅನುಭವವನ್ನು ಹಂಚಿಕೊಂಡರು. ಪರಿಶ್ರಮ, ಪರಿಪೂರ್ಣ ನಿರ್ವಹಣೆ ಕೃಷಿ ಕ್ಷೇತ್ರದ ಮೂಲಮಂತ್ರವಾಗಬೇಕು. ವಿದ್ಯಾವಂತರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಹೊಸ ಹೊಸ ತಂತ್ರಜ್ಞಾನದ ಮೂಲಕ ಕೃಷಿ ಮಾಡಬೇಕು. ಕೃಷಿಯಿಂದ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬಹುದು ಎಂದರು. ಇದೇ ವೇಳೆ ಸಮಗ್ರ ಕೃಷಿ ವೀಕ್ಷಿಸಿದ ಮೇಘಾಲಯದ ರೈತರು ಕಡಮಜಲು ಸುಭಾಸ್‌ ರೈಗೆ ಅಭಿನಂದನೆ ಸಲ್ಲಿಸಿದರು. ಗೇರು, ಅಡಿಕೆ ಮತ್ತು ಕರಿಮೆಣಸು ಮೇಘಾಲಯದಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ ಎಂದು ಇದೇ ವೇಳೆ ಅಧಿಕಾರಿಗಳು ಹೇಳಿದರು.

ʻಮೇಘಾಲಯದ ಸರಕಾರ ವಿಶೇಷವಾಗಿ ರೈತರಿಗೆ ವಿಮಾನ ಟಿಕೆಟ್‌ ನೀಡಿ ಕೃಷಿ ಅಧ್ಯಯನ ಪ್ರವಾಸಕ್ಕೆ ಆರ್ಥಿಕ ಸಹಾಯದೊಂದಿಗೆ ಕಳುಹಿಸಿರುವುದು ರೈತಾಪಿ ವರ್ಗಕ್ಕೆ ಪ್ರೇರಣೆಯಾಗಿದೆʼ ಎಂದು ಕಡಮಜಲು ಸುಭಾಸ್‌ ರೈ ಹೇಳಿದರು.

LEAVE A REPLY

Please enter your comment!
Please enter your name here