ಪುತ್ತೂರು: ಕಿಲ್ಲೆ ಮೈದಾನ ರಸ್ತೆ ಬಳಿಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮತ್ತು ವೇ ಮೂ ಬನ್ನಂಜೆ ರಾಮದಾಸ್ ಭಟ್ ಅವರ ಪೌರೋಹಿತ್ಯದಲ್ಲಿ ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ಮೆ.11ರಂದು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
12ನೇ ಶತಮಾನದಲ್ಲಿ ಬೀರುಮಲೆ ಬೆಟ್ಟದಿಂದ ಆರಂಂಭಿಸಿ ಪುತ್ತೂರು ಸಾಮ್ರಾಜ್ಯವನ್ನು ಆಳಿದ ಬಂಗ ವಂಶದ ಅರಸರು ತೆರಿಗೆ ಸಂಗ್ರಹ, ನ್ಯಾಯದಾನ ನ್ಯಾಯಯುತವಾಗಿ ಅಧಿಕಾರವನ್ನು ಚಲಾಯಿಸಲು ಆಡಳಿತ ಕಚೇರಿಗಳನ್ನು ಪುತ್ತೂರು ರಾಜಧಾನಿಯನ್ನಾಗಿ ಮಾಡಿಕೊಂಡ ಸಂದರ್ಭದಲ್ಲಿ ಕಿಲ್ಲೆ ಮೈದಾನದ ಸಮೀಪವೇ ಅವರ ಆರಾಧ್ಯ ದೇವಿಯಾದ ಹತ್ತೂರಿಗೆ ಸಂಬಂಧಪಟ್ಟ ಪದ್ಮಾವತಿ ಎಂಬ ಪ್ರನ್ನಗ ಕನ್ನಿಕಾದೇವಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡಿಕೊಂಡು ಬಂದಿದ್ದರು. ಕಾಲಕ್ರಮೇಣ ಆಡಳಿತ ಅವನತಿಯ ನಂತರ ಆ ಸ್ಥಳವೆಲ್ಲವೂ ಆಡಳಿತ ಕಚೇರಿಗಳು, ಅರಮನೆಗಳು ಅವನತಿಯನ್ನು ಹೊಂದಿದ್ದು, ದೇವಿಯ ಆರಾಧನೆ ಸ್ಥಗಿತಗೊಂಡಾಗ ರಾಧಾಬಾಯಿ ಮತ್ತು ಅವರ ಮಕ್ಕಳು ಆರಾಧನೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದೀಗ ಸಾನಿಧ್ಯ ಜೀರ್ಣೋದ್ದಾರಗೊಂಡಿದ್ದು, ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಮೇ 10ರಂದು ಬೆಳಿಗ್ಗೆ ನಿಧಿಕುಂಭ ಮೆರವಣಿಗೆ ನಡೆಯಲಿದೆ. ನಿಧಿಕುಂಭ ಮೆರವಣಿಗೆಯು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾದ ಬಳಿಯಿಂದಾಗಿ ಕಿಲ್ಲೆ ಮೈದಾನ ರಸ್ತೆ ಪ್ರವೇಶಿಸಿ ಪುತ್ತೂರು ಸೆಂಟರ್ ಹಿಂಭಾಗ ದೇವಿಯ ಸಾನಿಧ್ಯ ತಲುಪಲಿದೆ. ನಿಧಿಕುಂಭ ಮೆರವಣಿಗೆಯಲ್ಲಿ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ, ನಾಣ್ಯ, ಮುಷ್ಠಿ ಕಾಣಿಕೆ, ನವರತ್ನ, ತಾಮ್ರದ ನಾಣ್ಯ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಕಾಮತ್, ಖಜಾಂಚಿ ನಿತಿನ್ ಕುಮಾರ್ ಮಂಗಳ, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು ಉಪಸ್ಥಿತರಿದ್ದರು.