ಅಗಲಿದ ಗುಲಾಬಿ ಎನ್ ಶೆಟ್ಟಿಯವರ ಶಾಶ್ವತ ಕೊಡುಗೆ ‘ಮುಂಡೂರು ಶಾಲೆಯ ಕಲಿಕಾ ಕುಟೀರ’
ಪುತ್ತೂರು: ಹುಟ್ಟುವಾಗ ಉಸಿರಿರುತ್ತೆ ಆದರೆ ಹೆಸರಿರುವುದಿಲ್ಲ, ಸತ್ತಾಗ ಉಸಿರಿರುವುದಿಲ್ಲ ಆದರೆ ಹೆಸರಿರಬೇಕು ಎನ್ನುವುದಕ್ಕೆ ಮೇ.14ರಂದು ನಿಧನ ಹೊಂದಿದ ಕಂಪ ಗುಲಾಬಿ ಎನ್ ಶೆಟ್ಟಿ ಅತ್ಯುತ್ತಮ ಉದಾಹರಣೆ.
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಯಾಗಿ ಮತ್ತು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆಯಾಗಿದ್ದ ಗುಲಾಬಿ ಎನ್ ಶೆಟ್ಟಿ ಅವರು ತಮ್ಮದೇ ರೀತಿಯ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದವರು.
2023ರಲ್ಲಿ ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಪತಿ ದಿ.ನಾರಾಯಣ ಶೆಟ್ಟಿ ಕಂಪ ಸ್ಮರಣಾರ್ಥ ರೂ.4 ಲಕ್ಷ ವೆಚ್ಚದಲ್ಲಿ ‘ನಾರಾಯಣಿ’ ಎನ್ನುವ ಹೆಸರಿನ ಕಲಿಕಾ ಕುಟೀರವೊಂದನ್ನು ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದರು. ನಾವು ಸಮಾಜಕ್ಕೆ ನೀಡುವ ಕೊಡುಗೆಯೇ ಶಾಶ್ವತ ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಕಲಿಕಾ ಕುಟೀರ ನಿರ್ಮಿಸಿಕೊಟ್ಟಿರುವ ಗುಲಾಬಿ ಎನ್ ಶೆಟ್ಟಿಯವರು ಸಮಾಜಕ್ಕೆ ಒಳ್ಳೆಯ ಸಂದೇಶವೊಂದನ್ನು ನೀಡಿದ್ದು ಇತರರಿಗೆ ಪ್ರೇರಣಾದಾಯಕ ಸಂದೇಶವನ್ನೊಂದು ರವಾನಿಸಿದ್ದರು. ತಾನು ಮರೆಯಾದರೂ ತನ್ನ ಹೆಸರನ್ನು ಮಾತ್ರ ಶಾಶ್ವತವಾಗಿ ಉಳಿಯುವಂತೆ ಮಾಡಿರುವ ಅವರ ಬಗ್ಗೆ ಊರವರು, ಶಿಕ್ಷಣ ಪ್ರೇಮಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ʼಗುಲಾಬಿ ಎನ್ ಶೆಟ್ಟಿ ಅವರು ನಮ್ಮ ಶಾಲೆಗೆ ಕಲಿಕಾ ಕುಟೀರವನ್ನು ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ, ಅವರ ಈ ಕೊಡುಗೆ ಇತರರಿಗೂ ಪ್ರೇರಣೆಯಾಗಲಿದೆ ಎಂದು ಮುಂಡೂರು ಸ.ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ತಿಳಿಸಿದ್ದಾರೆʼ. ಒಟ್ಟಿನಲ್ಲಿ ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇಬೇಕು, ಹುಟ್ಟು-ಸಾವಿನ ಮಧ್ಯೆ ನಾವು ಮಾಡುವ ಸತ್ಕಾರ್ಯಗಳು ಮಾತ್ರ ಇಲ್ಲಿ ಇಲ್ಲಿ ಶಾಶ್ವತ. ಹಾಗಾಗಿ ಗುಲಾಬಿ ಎನ್ ಶೆಟ್ಟಿ ಅವರ ಕೊಡುಗೆ ಎಂದಿಗೂ ಶಾಶ್ವತ.