ಕೊಯಿಲ: ವಾರದ ಹಿಂದೆ ನಡೆದ ಟಿಟಿ, ಕಾರು ಡಿಕ್ಕಿ ಪ್ರಕರಣ – ಗಾಯಾಳು ಪದ್ಮನಾಭ ಮೃತ್ಯು

0

ರಾಮಕುಂಜ: ವಾರದ ಹಿಂದೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೊಯಿಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಟೆಂಪೋ ಟ್ರಾವೆಲರ್ ಮತ್ತು ಮಾರುತಿ-800 ಕಾರು ನಡುವೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಳೆನೇರೆಂಕಿ ಗ್ರಾಮದ ಮಡೆಂಜಿಮಾರು ನಿವಾಸಿ ಪದ್ಮನಾಭ(48ವ.) ಅವರು ಮೇ 19ರಂದು ರಾತ್ರಿ ನಿಧನರಾಗಿದ್ದಾರೆ.


ಮೇ.11ರಂದು ಸಂಜೆ ಪದ್ಮನಾಭ, ಅವರ ಸಹೋದರ ಸುದರ್ಶನ್, ಚೇತನ್ ಹಾಗೂ ಸತೀಶ್ ಅವರು ಪದ್ಮನಾಭ ಅವರ ಮಾರುತಿ-800 ಕಾರಿನಲ್ಲಿ(ಕೆಎ 32, ಪಿ 3456) ಉಪ್ಪಿನಂಗಡಿ ಕಡೆಗೆ ಕಾರ್ಯಕ್ರಮವೊಂದಕ್ಕೆ ಹೋದವರು ಮತ್ತೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಮೂಲಕ ಮನೆಗೆ ಹಿಂತಿರುಗಿ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯದಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲ್ಲರ್ (ಕೆಎ 41, ಎ 6451)ನಡುವೆ ರಾತ್ರಿ 11.30ರ ವೇಳೆಗೆ ಕೊಯಿಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.

ಘಟನೆಯಲ್ಲಿ ಕಾರಿನಲ್ಲಿದ್ದ ಪದ್ಮನಾಭ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಇವರಿಗೆ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದ ಪದ್ಮನಾಭ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ.19ರಂದು ರಾತ್ರಿ ನಿಧನರಾಗಿದ್ದಾರೆ.

ಕಾರಿನಲ್ಲಿದ್ದ ಸುದರ್ಶನ್, ಚೇತನ್, ಸತೀಶ್ ಅವರಿಗೂ ಗಾಯವಾಗಿದ್ದು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿದ್ದವರು ಶಿವಮೊಗ್ಗ ಮೂಲದವರಾಗಿದ್ದು ಧರ್ಮಸ್ಥಳ-ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶಿಸಿ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿದ್ದವರಿಗೆ ಯಾವುದೇ ಗಾಯವಾಗಿರಲಿಲ್ಲ. ಘಟನೆ ಕುರಿತಂತೆ ಟೆಂಪೋ ಟ್ರಾವೆಲರ್ ಚಾಲಕ ಸುಜಯ್ ಎಂ.ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೃತ ಪದ್ಮನಾಭ ಅವರು ತಂದೆ ಅಣ್ಣುಗೌಡ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here