ಉಪ್ಪಿನಂಗಡಿ: ಮುಸ್ಲಿಮ್ ಸಮುದಾಯದವರ ವಿರುದ್ಧ ಅವಹೇಳನಕಾರಿಯಾಗಿ ಮತ್ತು ಕೋಮು ಪ್ರಚೋದನಾಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್‌ಐಆರ್ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಮೇ.3ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜಾ ಮುಸ್ಲಿಂ ಸಮುದಾಯದವರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿದೆ.ಅವರು ಮಾಡಿದ ಪ್ರಚೋದನಾಕಾರಿ ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ, ಈ ಪ್ರಕರಣದ ಪ್ರತ್ಯಕ್ಷದರ್ಶಿಯೆಂದು ತೆಕ್ಕಾರು ನಿವಾಸಿ ಇಬ್ರಾಹೀಂ ಎಸ್.ಬಿ. ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ದೂರನ್ನು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ಶಾಸಕ ಹರೀಶ್ ಪೂಂಜಾರ ಮೇಲೆ ಅ.ಕ್ರ. 36/2025 ಕಲಂ 196,353 (2) ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ತನಿಖೆಯನ್ನು ನಡೆಸಲು ಪುತ್ತೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಅವರಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆದೇಶಿಸಿದ್ದರು. ಇದರ ತನಿಖೆ ನಡೆಸಿದ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಹಾಗೂ ಅವರ ತಂಡ ಶಾಸಕ ಹರೀಶ್ ಪೂಂಜಾರ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.