ಉಪ್ಪಿನಂಗಡಿ: ಕೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ಶುಭಾರಂಭ

0

10 ಸಾವಿರ ಚದರ ವಿಸ್ತೀರ್ಣದ ಹವಾನಿಯಂತ್ರಿತ ಜವಳಿ ಮಳಿಗೆ

ಉಪ್ಪಿನಂಗಡಿ: ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯ ಹಸನ್ ಟವರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ಜವುಳಿ ಉದ್ಯಮವು ನೂತನ ಆಡಳಿತದೊಂದಿಗೆ ‘ಕೆ ಶ್ರೀ ದುರ್ಗಾ’ ಹೆಸರಿನಲ್ಲಿ ಮೇ.21ರ ಬುಧವಾರದಂದು ಪುನರಾರಂಭಗೊಂಡಿತು.


ಸಂಸ್ಥೆಯನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಜಸ್ಥಾನದಿಂದ ಬಂದು ದ.ಕ ಜಿಲ್ಲೆಯಲ್ಲಿ ಜವಳಿ ಉದ್ಯಮದಲ್ಲಿ ಹೆಸರು ಪಡೆದಿರುವುದು ಮತ್ತು ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗಿರುವುದು ಗಮನಾರ್ಹ ಸಾಧನೆ ಎಂದರು.


ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಉತ್ಕೃಷ ಗುಣಮಟ್ಟದ ವಸ್ತ್ರ ಭಂಡಾರವನ್ನು ಹೊಂದಿರುವ ಈ ಸಂಸ್ಥೆ ಜನತೆಯ ಅಭೀಷ್ಠೆಯನ್ನು ಪೂರೈಸುವ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದರು. ಶ್ರೀರಾಮ ಶಾಲಾ ಸಂಚಾಲಕ ಯು.ಜಿ. ರಾಧಾ ಮಾತನಾಡಿ, ಈಗಾಗಲೇ ಜವಳಿ ಉದ್ಯಮವೂ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಡಿ. ಪುಕರಾಮ್ ರವರ ವ್ಯವಹಾರ ಧರ್ಮ ಪಾಲನೆಯ ನಡೆಯಿಂದಾಗಿ ವ್ಯವಹಾರಿಕ ಯಶಸ್ಸು ಅವರನ್ನು ಅಪ್ಪಿಕೊಂಡಿದೆ. ಉಪ್ಪಿನಂಗಡಿಯಂತಹ ಪ್ರದೇಶದಲ್ಲಿ 10,000 ಚದರ ಅಡಿ ವಿಸ್ತೀರ್ಣದ ವಿಶಾಲ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಈ ವಸ್ತ್ರ ಉದ್ಯಮವು ಜನಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಟ್ಲ ಫೌಂಡೇಶನ್ ಇದರ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿ , ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ವರ್ತಕ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ ಸಂಸ್ಥೆಗೆ ಶುಭ ಹಾರೈಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಈ ಹಿಂದಿನ ಶ್ರೀ ದುರ್ಗಾ ಸಂಸ್ಥೆಯ ಮಾಲಕ ಮೋಹನ್ ಚೌಧರಿ , ಹಲವಾರು ಕನಸುಗಳನ್ನು ಕಟ್ಟಿಕೊಂಡು ಶ್ರೀ ದುರ್ಗಾ ಸಂಸ್ಥೆಯನ್ನು ಹುಟ್ಟು ಹಾಕಲಾಗಿತ್ತು. ಆದರೆ ಪ್ರಾರಂಭದ ಬೆನ್ನಿಗೆಯೇ ಕಾಡಿದ ಕೊರೋನಾ ಲಾಕ್ ಡೌನ್, ಕುಟುಂಬದಲ್ಲಿ ಸಂಭವಿಸಿದ ವಿಯೋಗಗಳು ಈ ಸಂಸ್ಥೆಯ ಬಗ್ಗೆ ವಿಶೇಷ ನಿಗಾವಿರಿಸಲು ಅಸಾಧ್ಯವಾಗಿ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ವಿಫಲರಾದೆವು. ವ್ಯವಹಾರದಲ್ಲಿ ಲಾಭವಾಗುತ್ತಿದ್ದರೂ, ಗ್ರಾಹಕರಿಗೆ ಉತ್ತಮ ಸೇವೆ ಲಭಿಸುವಂತಾಗಬೇಕೆಂಬ ಉದ್ದೇಶದಿಂದ ಸಂಸ್ಥೆಯ ಆಡಳಿತವನ್ನು ಡಿ. ಪುಕಾರಾಮ್ ರವರಿಗೆ ಇದೀಗ ಹಸ್ತಾಂತರಿಸಲಾಗುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಹಸನ್ ಟವರ್ ಮಾಲಕ ಕೆ. ಮಹಮ್ಮದ್ ಇಕ್ಬಾಲ್, ಹಿರಿಯ ಸಾಮಾಜಿಕ ಕಾರ್ಯಕರ್ತ ಎನ್. ಉಮೇಶ್ ಶೆಣೈ ಪಂಚಾಯತ್ ಸದಸ್ಯ ಯು.ಟಿ. ತೌಷಿಫ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥ ಡಿ. ಪುಕಾರಾಮ್ ಮಾತನಾಡಿ ಎರಡು ಮಹಡಿಗಳಲ್ಲಿ ಹರಡಿಕೊಂಡಿರುವ ಈ ಮಳಿಗೆಯು ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ನವಜಾತ ಶಿಶುಗಳಿಂದ ಮೊದಲುಗೊಂಡು ಪುರುಷರು, ಮಹಿಳೆಯರ ವಯೋಮಾನಕ್ಕನುಗುಣವಾದ ಎಲ್ಲರಿಗೂ ಎಲ್ಲಾ ಸ್ವರೂಪದ ವಸ್ತ್ರಗಳು ಸುಲಲಿತವಾಗಿ ಆಯ್ಕೆಗೆ ದೊರೆಯುವಂತಾಗಲು ಪ್ರತ್ಯೇಕ ಸೆಕ್ಷನ್ ಗಳನ್ನು ರಚಿಸಿ ಬಟ್ಟೆಬರೆಗಳನ್ನು ಜೋಡಿಸಿಡಲಾಗಿದೆ. ಈಗಾಗಲೇ ರಾಷ್ಟ್ರದ ಹೆಸರಾಂತ ವಸ್ತ್ರ ಉದ್ಯಮದ ಬಟ್ಟೆ ಬರೆಗಳನ್ನು ದಾಸ್ತಾನು ಹೊಂದಿದ್ದು, ಗ್ರಾಹಕರ ಮನೋಭಿಲಾಶೆಗೆ ಸ್ಪಂದಿಸುವಂತಿದೆ. ರಾಮ್‌ರಾಜ್ ಕಾಟನ್, ರೆಮಂಡ್ಸ್, ಸಿಯಾರಾಮ್, ಜಾಕಿ, ಮೈಕ್ರೊಮನ್, ಪೋಪೀಸ್, ಸಿಲ್ಕ್ ಮಾರ್ಕ್, ಡಾಲರ್, ಸ್ಪಾರ್ಕಿ ಜೆಮ್ಸ್, ಝೀಲ್ರೈನ್ ವೇರ್ ಮೊದಲಾದ ಹಲವಾರು ಬ್ರಾಂಡ್ ಗಳ ನವ ನವೀನ ಮಾದರಿಯ ಬಟ್ಟೆ ಬರೆಗಳನ್ನು ದಾಸ್ತಾನು ಹೊಂದಲಾಗಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಒಂದೇ ಸೂರಿನಡಿ ಎಲ್ಲಾ ಬಗೆಯ ವಸ್ತ್ರಗಳು ಲಭಿಸುವಂತಿದೆ. ನೂತನ ಆಡಳಿತ ಮಂಡಳಿಯೊಂದಿಗೆ ನಡೆಯುವ ಶುಭಾರಂಭದ ಸವಿ ನೆನಪಿಗೆ ಪ್ರತಿ ಖರೀದಿಗೆ ಶೇ.20 ರ ರಿಯಾಯಿತಿಯನ್ನು ಘೋಷಿಸಲಾಗಿದ್ದು, ಈ ಕೊಡುಗೆಯು ಮೇ 21 ರಿಂದ ಮೇ 31 ರ ವರೆಗೆ ಜಾರಿಯಲ್ಲಿರುವುದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಖ್ಯಾತ ದಂತ ವೈದ್ಯ ಡಾ. ರಾಜಾರಾಮ ಕೆ.ಬಿ., ಉದ್ಯಮಿಗಳಾದ ಯತೀಶ್ ಶೆಟ್ಟಿ, ಶಶಿಧರ್ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್ , ಅಚಲ್ ಉಬರಡ್ಕ, ಚಂದ್ರಶೇಖರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಪುಷ್ಪಲತಾ ತಿಲಕ್ ರವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮೋಹನ್ ಚೌಧರಿ ಸ್ವಾಗತಿಸಿದರು. ನವ್ಯ ವಂದಿಸಿದರು. ದಿನೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here