ಗ್ರಾಮ ಸಹಾಯಕ ಹುದ್ದೆಗೆ ಗ್ರಾಮದವರನ್ನೇ ಆಯ್ಕೆ ಮಾಡುವಂತೆ ಸಹಾಯಕ ಆಯುಕ್ತರಿಗೆ ಬರೆಯಲು ನಿರ್ಣಯ
ಪೆರಾಬೆ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಹಾಗೂ ಪೆರಾಬೆ ಗ್ರಾಮ ಆಡಳಿತ ಅಧಿಕಾರಿಗಳು ಕಛೇರಿಯಲ್ಲಿ ಲಭ್ಯವಿರದ ಬಗ್ಗೆ ಮತ್ತು ಕುಂತೂರು ಗ್ರಾಮದ ಗ್ರಾಮ ಸಹಾಯಕ ಹುದ್ದೆಗೆ ಕುಂತೂರು ಗ್ರಾಮದ ಅಭ್ಯರ್ಥಿಯನ್ನೇ ಆಯ್ಕೆ ಮಾಡುವಂತೆ ತಹಶೀಲ್ದಾರರಿಗೆ ಬರೆದುಕೊಂಡರು ಯಾವುದೇ ಸ್ಪಂದನೆ ನೀಡದಿರುವ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ದ.ಕ.ಜಿಲ್ಲಾಧಿಕಾರಿಯವರಿಗೆ ಬರೆಯುವುದೆಂದು ನಿರ್ಣಯಿಸಲಾಯಿತು.
ಅಪಾಯಕಾರಿ ಮರ, ವಿದ್ಯುತ್ ಕಂಬ ತೆರವಿಗೆ ಮನವಿ:
ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯಧಿಕಾರಿಯವರಿಗೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬ ಮತ್ತು ಹಳೆ ವಯರ್ಗಳನ್ನು ತೆರವುಗೊಳಿಸುವ ಬಗ್ಗೆ ಮೆಸ್ಕಾಂ ಇಲಾಖೆಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು.
ಅಪಾಯಕಾರಿ ಸ್ಥಿತಿಯಲ್ಲಿರುವ ಮನೆ:
ಪೆರಾಬೆ ಗ್ರಾಮದ ಪೂಂಜ ಎಂಬಲ್ಲಿ ತೋಡಿನ ಬದಿಯಲ್ಲಿರುವ ಮನೆ ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದು ಈ ಬಗ್ಗೆ ಕಡಬ ತಹಶೀಲ್ದಾರ್ ಅವರಿಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. 15 ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯ ಕಾಮಗಾರಿಗಳು ಮುಕ್ತಾಯಗೊಂಡಿದ್ದು ಬಿಲ್ಲು ಮಾಡುವಂತೆ ಇಂಜಿನಿಯರ್ಗೆ ಬರೆದುಕೊಳ್ಳುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಇತರೇ ಹಲವು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಬಿ.ಕೆ.ಕುಮಾರ, ಸದಾನಂದ ಕುಂಟ್ಯಾನ, ಪಿ.ಜಿ.ರಾಜು, ಸುಶೀಲ, ಫಯಾಝ್ ಸಿ.ಎಂ., ಮೋಹಿನಿ, ಮಮತ, ಕಾವೇರಿ, ಲೀಲಾವತಿ, ಮೇನ್ಸಿ, ಚಂದ್ರಶೇಖರ ರೈ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ.ಸ್ವಾಗತಿಸಿ, ಸಾರ್ವಜನಿಕ ಅರ್ಜಿ, ಸರಕಾರದ ಸುತ್ತೋಲೆಯನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.