ಪುತ್ತೂರು:ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕೋಮು ದ್ವೇಷ ಉಂಟಾಗುವ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತನ್ನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಆ ನಂತರದ ಕಾನೂನು ಪ್ರಕ್ರಿಯೆಗಳನ್ನು ರದ್ದು ಮಾಡುವಂತೆ ಕೋರಿ ಶಾಸಕ ಹರೀಶ್ ಪೂಂಜ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠ ಮೇ.22ರಂದು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಮೇ.3ರಂದು ರಾತ್ರಿ 9.30ರ ವೇಳೆಗೆ ಶಾಸಕ ಹರೀಶ್ ಪೂಂಜ ಅವರು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಕೋಮುದ್ವೇಷದ ಭಾಷಣ ಮಾಡಿ, ಸಮುದಾಯಗಳ ನಡುವೆ ದ್ವೇಷ ಹರಡಿದ್ದಾರೆ.ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಲಾಗಿದೆ ಎಂದು ತೆಕ್ಕಾರಿನ ಎಸ್.ಬಿ.ಇಬ್ರಾಹಿಂ ಅವರು ನೀಡಿದ್ದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೇ.4ರಂದು ಹರೀಶ್ ಪೂಂಜ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು) ಮತ್ತು 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ದೋಷಾರೋಪಣಾ ಪಟ್ಟಿಯನ್ನೂ ಸಲ್ಲಿಸಿದ್ದಾರೆ.ಈ ಮಧ್ಯೆ, ತನ್ನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಆ ಬಳಿಕದ ಎಲ್ಲ ಪ್ರಕ್ರಿಯೆಗಳನ್ನು ರದ್ದುಮಾಡುವಂತೆ ಶಾಸಕ ಪೂಂಜ ಅವರು ಹೈಕೋರ್ಟ್ ಮೊರೆ ಹೋಗಿದ್ದರು.