ಕುಂಬ್ರ: ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್.ಮಾಧವ ರೈ ನಿಧನ- ಕುಂಬ್ರದಲ್ಲಿ ಸಾರ್ವಜನಿಕರಿಂದ ಅಂತಿಮ ದರ್ಶನ, ಶ್ರದ್ಧಾಂಜಲಿ ಅರ್ಪಣೆ

0

ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷರೂ, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದ ಕುಂಬ್ರ ನಿವಾಸಿ ಎಸ್.ಮಾಧವ ರೈ (61ವ)ರವರು ಹೃದಯಾಘಾತದಿಂದ ಮೇ.22 ರಂದು ರಾತ್ರಿ ನಿಧನ ಹೊಂದಿದ್ದು ಅವರ ಮೃತದೇಹದ ಸಾರ್ವಜನಿಕ ಅಂತಿಮ ದರ್ಶನವು ಮೇ.23 ರಂದು ಕುಂಬ್ರದಲ್ಲಿ ನಡೆಯಿತು.

ಕುಂಬ್ರ ಕಟ್ಟೆಯ ಬಳಿ ಅವರ ಮೃತದೇಹದ ಸಾರ್ವಜನಿಕ ದರ್ಶನ ನಡೆದು ಅಲ್ಲಿಂದ ಕುಂಬ್ರದಲ್ಲಿರುವ ಅವರ ಮನೆಗೆ ಮೃತದೇಹವನ್ನು ತರಲಾಯಿತು. ಮನೆಯಲ್ಲಿ ಅಂತ್ಯ ಸಂಸ್ಕಾರದ ಮೊದಲಿನ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ವೇಳೆ ನೂರಾರು ಮಂದಿ ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಪುತ್ತೂರು ಸ್ಮಶಾನದಲ್ಲಿ ಕುಟುಂಬಸ್ಥರ, ಗಣ್ಯರ, ಹಿತೈಷಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.


ಮೃತದೇಹದ ಅಂತಿಮ ದರ್ಶನ ಹಾಗೂ ಶ್ರದ್ಧಾಂಜಲಿ ಅರ್ಪಣೆಯ ಸಂದರ್ಭದಲ್ಲಿ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರ ಸೇರಿದಂತೆ ಸಮಾಜದ ಜಾತಿ,ಮತ ಬೇಧ ಮರೆತು ನೂರಾರು ಮಂದಿ ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಶ್ರದ್ಧಾಂಜಲಿ ಅರ್ಪಣೆಗೆ ಸೇರಿದ ಜನಸ್ತೋಮವೇ ಅವರ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸುತ್ತಿತ್ತು. ಮುಖ್ಯವಾಗಿ ನಳಿನ್ ಕುಮಾರ್ ಕಟೀಲ್, ದಯಾನಂದ ಶೆಟ್ಟಿ ಉಜಿರ್‌ಮಾರ್, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಕೃಷ್ಣಪ್ರಸಾದ್ ಆಳ್ವ, ಹರಿಪ್ರಸಾದ್ ಯಾದವ್, ಪುರುಷೋತ್ತಮ ಮುಂಗ್ಲಿಮನೆ, ಪದ್ಮನಾಭ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಬಾಬು ನಾಯ್ಕ್, ಯೋಜನಾಧಿಕಾರಿ ಶಶಿಧರ್, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪ್ರಕಾಶ್ಚಂದ್ರ ರೈ ಕೈಕಾರ, ಸಂತೋಷ್ ಮಣಿಯಾಣಿ, ಭವಾನಿ ಬಿ.ಆರ್, ರಾಜೇಶ್ ರೈ ಪರ್ಪುಂಜ, ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲ್, ಶಿವಕುಮಾರ್, ವಿದ್ಯಾಗೌರಿ, ಉಷಾ ನಾರಾಯಣ್, ಅನಿಲ್ ತೆಂಕಿಲ, ಆರ್.ಸಿ.ನಾರಾಯಣ್, ದುರ್ಗಾಪ್ರಸಾದ್ ರೈ ಕುಂಬ್ರ, ಬೂಡಿಯಾರ್ ರಾಧಾಕೃಷ್ಣ ರೈ, ನಿತೀಶ್ ಕುಮಾರ್ ಶಾಂತಿವನ, ಅಶ್ರಫ್ ಉಜಿರೋಡಿ, ಎ.ಕೆ ಜಯರಾಮ ರೈ, ಎಸ್.ಬಿ.ಜಯರಾಮ ರೈ ಬಳಜ್ಜ, ಹರೀಶ್ ಬಿಜತ್ರೆ, ಪಿ.ಕೆ ಮಹಮ್ಮದ್ ಕೂಡುರಸ್ತೆ, ಶ್ಯಾಮ್‌ಸುಂದರ ರೈ ಕೊಪ್ಪಳ, ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಮಂಜುನಾಥ ರೈ ನಂಜೆ, ಪುರಂದರ ರೈ ಮಿತ್ರಂಪಾಡಿ, ಕಡಮಜಲು ಸುಭಾಷ್ ರೈ, ಪ್ರವೀಣ್ ಪಲ್ಲತ್ತಾರು, ಲಕ್ಷ್ಮಣ ಬೆಳ್ಳಿಪ್ಪಾಡಿ, ಮೋಹನ್ ಪಕ್ಕಳ, ಅಶೋಕ್ ಪೂಜಾರಿ ಬೊಳ್ಳಾಡಿ, ಬಶೀರ್ ಕೌಡಿಚ್ಚಾರ್, ಪ್ರಸನ್ನ ಮಾರ್ತ, ಲೋಕೇಶ್ ಹೆಗ್ಡೆ, ರಾಜೀವಿ ರೈ ಕುಂಬ್ರ, ಮೀನಾಕ್ಷಿ ಮಂಜುನಾಥ್, ಶಶಿಧರ್ ರೈ ಕುತ್ಯಾಳ, ಸಂಶುದ್ದೀನ್ ಎ.ಆರ್, ಭವ್ಯ ರೈ, ರಮೇಶ್ ಆಳ್ವ ಕಲ್ಲಡ್ಕ, ನಾರಾಯಣ ಕುಕ್ಕುಪುಣಿ, ಮಹೇಶ್ ರೈ ಕೇರಿ, ಲತೀಫ್ ಕುಂಬ್ರ, ಶೀನಪ್ಪ ನಾಯ್ಕ, ಸುಂದರಿ ಪರ್ಪುಂಜ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳು, ಸೇವಾ ನಿರತರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರುಗಳು,ಸಿಬ್ಬಂದಿಗಳು, ಶಾಲಾ ಕಾಲೇಜು ಪ್ರಾಂಶುಪಾಲರು, ಶಿಕ್ಷಕ ವೃಂದದವರು, ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ, ಸಹಕಾರಿ ಸಂಘ, ಬ್ಯಾಂಕ್ ಇತ್ಯಾದಿಗಳ ನೌಕಕರು ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ಆಗಮಿಸಿ ಮೃತದೇಹದ ಅಂತಿಮ ದರ್ಶನದೊಂದಿಗೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.


ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದರು
ಎಸ್.ಮಾಧವ ರೈ ಕುಂಬ್ರರವರು ಓರ್ವ ಸಂಘ ಜೀವಿಯಾಗಿದ್ದರು. ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದುಕೊಂಡು ಸಂಘಕ್ಕಾಗಿ ದುಡಿದಿದ್ದರು. ಇದಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾಭಿವೃದ್ದಿ ಸಮಿತಿ ಸದಸ್ಯರಾಗಿ, ಅಂಗನವಾಡಿಯ ಬಾಲವಿಕಾಸ ಸಮಿತಿ ಸದಸ್ಯರಾಗಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದುಕೊಂಡು ಸೇವೆ ಸಲ್ಲಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಿಸಿಕೊಂಡಿದ್ದ ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿ ಕುರಿಯ ಮಾಡಾವು ಏಳ್ನಾಡುಗುತ್ತು ಇದರ ಪ್ರಧಾನ ಕಾರ್ಯದರ್ಶಿಯಾಗಿ, ಕುರಿಯ ಮಾಡಾವು ಏಳ್ನಾಡುಗುತ್ತು ತರವಾಡು ದೈವಸ್ಥಾನ, ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ಸಾನ್ನಿಧ್ಯದ ಸಮಿತಿಯಲ್ಲೂ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು. ರಾಜಕೀಯವಾಗಿಯೂ ಸಕ್ರೀಯರಾಗಿದ್ದ ಇವರು ಓರ್ವ ಹಿರಿಯ ಆರ್.ಎಸ್.ಎಸ್ ಕಾರ್ಯಕರ್ತರಾಗಿ, ಬಜರಂಗದಳದ ಕುಂಬ್ರ ವಲಯದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಬೂತ್ ಅಧ್ಯಕ್ಷರಾಗಿ ಪ್ರಸ್ತುತ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಧವ ರೈಯವರ ನಿಧನದ ಹಿನ್ನೆಲೆಯಲ್ಲಿ ಕುಂಬ್ರ ವರ್ತಕರ ಸಂಘದಿಂದ ಕೆಲ ಹೊತ್ತು ಪೇಟೆಯ ಎಲ್ಲಾ ಅಂಗಡಿಮುಂಗಟ್ಟು ಬಂದ್ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.

ನಗುಮೊಗದ ಮಾತುಗಾರ
ಪ್ರತಿಯೊಬ್ಬರು ಹೇಳುವಂತೆ ಎಸ್.ಮಾಧವ ರೈಯವರು ಓರ್ವ ನಗುಮೊಗದ ಮಾತುಗಾರರಾಗಿದ್ದರು. ಜಾತಿ,ಮತ ಬೇಧವಿಲ್ಲದೆ ಗ್ರಾಮದ ಸರ್ವರಲ್ಲೂ ಸೌಹಾರ್ದಯುತವಾಗಿ ಬೆರೆಯುತ್ತಿದ್ದು ಇವರು ಗ್ರಾಮದ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನವರಾಗಿದ್ದರು. ಯಾರಲ್ಲೂ ಕೋಪಗೊಳ್ಳದೆ, ಯಾರಿಗೂ ಬೈಯದೆ ಸದಾ ನಗುವಿನಿಂದಲೇ ಎಲ್ಲರ ಹೃದಯ ಗೆದ್ದ ಇವರು ಓರ್ವ ಸಜ್ಜನ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಅವರ ಕೊನೆಯ ದಿನದ ಅಂತಿಮ ದರ್ಶನಕ್ಕೆ ಸೇರಿದ ಜನರ ಕಣ್ಣಂಚಿನಲ್ಲಿ ತುಂಬಿಕೊಂಡಿದ್ದ ನೀರೇ ಸಾಕ್ಷಿ ಹೇಳುತ್ತಿತ್ತು.

ಮನೆಗೆ ಆಧಾರವಾಗಿದ್ದರು
ಮಾಧವ ರೈಯವರು ತಾಯಿ ಸುಂದರಿ, ಪತ್ನಿ ಆಶಾಲತಾ ರೈ, ಸಹೋದರಿಯರಾದ ರೇವತಿ ಮತ್ತು ಸುಶೀಲಾ ಹಾಗೂ ತಮ್ಮನ ಮಗ ವಿಕಾಸ್‌ರವರೊಂದಿಗೆ ವಾಸವಾಗಿದ್ದರು. ಇಡೀ ಮನೆಗೆ ಮಾಧವ ರೈಯವರೇ ಆಧಾರವಾಗಿದ್ದರು. ಇದೀಗ ಮಾಧವ ರೈಯವರ ಅಗಲಿಕೆ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಮನೆಗೆ ಆಧಾರವಾಗಿದ್ದ ಜೀವವೇ ಹೊರಟು ಹೋಗಿದ್ದರಿಂದ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ.

ವಿಧಿ ಬರೆದ ಆಯುಷ್ಯವನ್ನು ದಾಟುವಂತಿಲ್ಲ….!
ಮಾಧವ ರೈಯವರು ಯಾವುದೇ ದುರಾಭ್ಯಾಸ ಇಲ್ಲದ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು. ತನ್ನ ಆರೋಗ್ಯದ ಬಗ್ಗೆ ಸದಾ ಕಾಳಜಿ ಹೊಂದಿದ್ದ ಇವರು ಪ್ರತಿ ದಿನ ಯೋಗ ತರಗತಿಗೆ ಹೋಗುತ್ತಿದ್ದರು. ಇದಲ್ಲದೆ ಕಳೆದ ಹಲವು ವರ್ಷಗಳಿಂದ ಮುಂಜಾವಿನ ವೇಳೆ ಮೂರ‍್ನಾಲ್ಕು ಕಿ.ಮೀ ಸೈಕಲ್ ತುಳಿದುಕೊಂಡು ಹೋಗುವ ಮೂಲಕ ದೇಹಕ್ಕೆ ವ್ಯಾಯಾಮ ನೀಡುತ್ತಿದ್ದರು. ಯಾರೊಂದಿಗೆಯೇ ದ್ವೇಷ ಇಟ್ಟುಕೊಳ್ಳದೆ ಸದಾ ಪ್ರೀತಿಯಿಂದಲೇ ಮಾತನಾಡುತ್ತಿದ್ದ ಇವರು ಹೃದಯಾಘಾತಕ್ಕೆ ಬಲಿಯಾಗಿದ್ದು ದುರಂತವೇ ಸರಿ. ದೇವರು ಬರೆದ ಆಯುಷ್ಯ ಮುಗಿದ ಮೇಲೆ ಪ್ರತಿಯೊಬ್ಬರು ಹೊರಟು ಹೋಗಲೇ ಬೇಕು ಎಂದು ಹೇಳುವುದು ಇದಕ್ಕೆ ಅನ್ನಿಸುತ್ತೆ. ಮಾಧವ ರೈಯವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿತ್ತು.

LEAVE A REPLY

Please enter your comment!
Please enter your name here