ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರೆಯಲಾದ ಕಾರಣ ನದಿಯಲ್ಲಿ ಸಂಗ್ರಹವಾಗಿದ್ದ ಹಿನ್ನೀರು ಖಾಲಿಯಾಗಿ ನದಿ ಸಹಜ ಹರಿಯುವಿಕೆಗೆ ಒಳಗಾಗಿದೆ.
ಕಳೆದ ಡಿಸೆಂಬರ್ ತಿಂಗಳಾಂತ್ಯಕ್ಕೆ ಅಣೆಕಟ್ಟಿನ ಗೇಟು ಅಳವಡಿಸಿದ್ದರಿಂದ 5 ತಿಂಗಳಾವಧಿಯಲ್ಲಿ ನೇತ್ರಾವತಿಯ ನೀರನ್ನು ತಡೆದು ನಿಲ್ಲಿಸಲಾಗಿತ್ತು. ನಾಲ್ಕು ಮೀಟರ್ ಎತ್ತರದ ಗೇಟು ಅಳವಡಿಸಿದ್ದರಿಂದ 0.2 ಟಿ.ಎಂ.ಸಿ. ನೀರು ಸಂಗ್ರಹಗೊಳ್ಳುತ್ತಿದ್ದು, ಈ ಬಾರಿ ನಿರೀಕ್ಷೆಗಿಂತ ಮೊದಲೇ ಮಳೆಗಾಲ ಆರಂಭವಾಗಿದ್ದು ಹಾಗೂ ಬಿರು ಬೇಸಗೆಯಲ್ಲೂ ಪದೇ ಪದೇ ಮಳೆ ಸುರಿಯುತ್ತಿದ್ದ ಕಾರಣಕ್ಕೆ ನೀರಿನ ಕೊರತೆ ಉಂಟಾಗಿರಲಿಲ್ಲ. ಈ ಕಾರಣಕ್ಕೆ ಹೆಚ್ಚುವರಿ ಜಲಾಶಯದ ಅಣೆಕಟ್ಟಾಗಿದ್ದ ಬಿಳಿಯೂರು ಅಣೆಕಟ್ಟಿನಿಂದ ನೀರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಮೇ ತಿಂಗಳಾಂತ್ಯದ ವರೆಗೆ ನೀರು ಸಂಗ್ರಹಿಸುವ ಕಾರ್ಯ ಯೋಜನೆ ಇದ್ದರೂ, ಮುಂಗಾರು ಪ್ರಾರಂಭ ಹಾಗೂ ನದಿಯ ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿರುವುದರಿಂದ ಹತ್ತು ದಿನಗಳ ಮೊದಲೇ ಅಣೆಕಟ್ಟಿನ ಗೇಟು ತೆರೆದು ನೀರನ್ನು ಹರಿಯಬಿಡಲಾಯಿತು.
ನದಿಯಲ್ಲಿ ಹೆಚ್ಚಿದ ಮೀನುಗಳು:
ನದಿಯಲ್ಲಿ ಹಿನ್ನೀರು ಸಂಗ್ರಹಣೆಗೊಂಡ ಕಾರಣದಿಂದ ನದಿಯಲ್ಲಿ ಮೀನುಗಳ ಸಂತಾನೋತ್ಪತ್ತಿ ವೃದ್ದಿಗೊಂಡು ಮೀನುಗಳು ಹೆಚ್ಚಾಗುವಂತಾಗಿತ್ತು. ಜೊತೆಗೆ ಕಳೆದ ವರ್ಷ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಮತ್ಸ್ಯವೃದ್ಧಿ ಯೋಜನೆಯಡಿ ನೇತ್ರಾವತಿ ನದಿಗೆ 2 ಲಕ್ಷಕ್ಕೂ ಮಿಕ್ಕಿದ ಮೀನಿನ ಮರಿಗಳನ್ನು ಬಿಟ್ಟಿದ್ದು, ಇದೂ ಕೂಡಾ ಮೀನುಗಳ ಸಂಖ್ಯಾವೃದ್ಧಿಗೆ ಕಾರಣವಾಗಿದೆ. ಸಂಗ್ರಹಗೊಂಡ ಹಿನ್ನೀರಿಗೆ ಪೇಟೆ ಪಟ್ಟಣಗಳ ತ್ಯಾಜ್ಯಗಳು ಹರಿದು ಬರುತ್ತಿದ್ದರಿಂದ, ನದಿಯಲ್ಲಿನ ಮೀನುಗಳು ನೀರಿನ ಶುದ್ಧತೆಗೆ ಕಾರಣವಾಗುತ್ತಿದ್ದವು. ಈ ಕಾರಣಕ್ಕೆ ಈ ಬಾರಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಆಡಳಿತವು ನದಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಿತ್ತು. ಈ ಎಲ್ಲಾ ಕಾರಣಗಳಿಂದ ನದಿಯಲ್ಲಿ ಈ ಬಾರಿ ಹಿಂಡು ಹಿಂಡು ಮೀನುಗಳನ್ನು ಕಾಣುವಂತಾಗಿತ್ತು.
ನದಿಯ ಸಹಜತೆಯನ್ನು ಕಾಣುವ ಭಾಗ್ಯ:
ನದಿಯಲ್ಲಿ ಹಿನ್ನೀರಾಗಿ ನೀರೆಷ್ಟು ತುಂಬಿ ಕೊಂಡಿದ್ದರೂ, ನದಿಯ ಸಹಜ ಸೌಂದರ್ಯ ಅದರ ಹರಿಯುವಿಕೆಯಲ್ಲಿ ಅಡಗಿದೆ. ಅಂತೆಯೇ ಅಣೆಕಟ್ಟಿನ ಹಿನ್ನೀರಿನಿಂದಾಗಿ ಜಲರಾಶಿ ನದಿಯುದ್ದಕ್ಕೂ ಕಾಣಿಸುತ್ತಿದ್ದರೂ, ನದಿಗಿಳಿದು ನದಿ ನೀರನ್ನು ಸ್ಪರ್ಶಿಸುವ ಆಸಕ್ತಿ ಯಾರಲ್ಲೂ ಇರಲಿಲ್ಲ. ಕಾರಣ ಪೇಟೆಯುದ್ದಕ್ಕೂ ತ್ಯಾಜ್ಯ ನೀರು ಹರಿದು ಸೇರುತ್ತಿದ್ದ ತಾಣವೇ ನದಿಯಾಗಿತ್ತು. ಈ ದೃಶ್ಯವನ್ನು ಕಂಡ ಮಂದಿ ಹಿನ್ನೀರು ತುಂಬಿದ ನದಿಯನ್ನು ದೂರದಲ್ಲೇ ಕಂಡು ಸಂತಸ ಪಡುತ್ತಿದ್ದರೇ ವಿನಃ ನದಿಗಿಯುತ್ತಿರಲಿಲ್ಲ. ಇದೀಗ ಅಣೆಕಟ್ಟಿನ ಗೇಟು ತೆರವುಗೊಂಡು ನದಿಯು ಸಹಜ ಹರಿಯುವಿಕೆಗೆ ಒಳಗಾದ ಕಾರಣ ನದಿಯ ಆಕರ್ಷಣೆ ಹೆಚ್ಚಿದೆ. ಸ್ನಾನ , ಈಜುವಿಕೆಯಂತಹ ಕಾರ್ಯಗಳಿಗೆ ಮನಸ್ಸು ಮೂಡಿಸಿದೆ.