ಉಪ್ಪಿನಂಗಡಿ: ಇಲ್ಲಿನ ಮಠ ಎಂಬಲ್ಲಿಂದ ಕೊಪ್ಪಳ ಸಂಪರ್ಕದ ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗಿನ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ರಸ್ತೆ ತೋಡು ಆಗಿ ಪರಿವರ್ತನೆಗೊಂಡಿದ್ದು, ನಡೆದಾಡುವುದಕ್ಕೂ ಸಾಧ್ಯವಿಲ್ಲದ ರೀತಿಯಲ್ಲಿ ಮಳೆ ನೀರು ನಿಂತುಕೊಂಡಿದೆ. ರಸ್ತೆಯ ಬದಿಯ ನಿವಾಸಿಗಳು ಮನೆಯಿಂದ ಹೊರಗೆ ಇಳಿಯಲಾಗದೆ ಕಂಗಾಲಾಗಿದ್ದಾರೆ.
ಮಠದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕವಲೊಡೆದು ಕೊಪ್ಪಳಕ್ಕೆ ಹೋಗುವ ರಸ್ತೆಯಲ್ಲಿ 3 ಕಡೆಯಲ್ಲಿ ಈ ರೀತಿಯಾಗಿ ನೀರು ನಿಲುಗಡೆಗೊಳ್ಳುತ್ತಿದೆ. ಇಲ್ಲಿ ಚರಂಡಿ ನಿರ್ಮಾಣ ಮಾಡದ ಕಾರಣ ಮಳೆ ನೀರು ಸಮೀಪದಲ್ಲೇ ಇರುವ ತೋಡಿಗೆ ಸೇರದೆ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆಯೇ ಹಲವು ಬಾರಿ ಇಲ್ಲಿ ಈ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ದೇವೆ. ಆದರೆ ಯಾರೂ ಈ ಬಗ್ಗೆ ಸ್ಪಂದಿಸಲಿಲ್ಲ ಎಂದು ಸ್ಥಳೀಯ ನಿವಾಸಿ ನೌಫಲ್ ಎಂಬವರು ಆರೋಪಿಸಿದ್ದಾರೆ.
ಈ ರಸ್ತೆಗೆ ತಾಗಿಕೊಂಡಿರುವ ಖಾಸಗಿ ಜಾಗದ ವ್ಯಕ್ತಿಯೋರ್ವರು ಕಂಪೌಂಡ್ ನಿರ್ಮಿಸಿದ್ದು, ಆ ಸಂದರ್ಭದಲ್ಲಿ ಚರಂಡಿ ನಿರ್ಮಾಣಕ್ಕೆ ಜಾಗ ಬಿಡುವಂತೆ ಪಂಚಾಯತ್‌ನಿಂದ ನೋಟೀಸು ನೀಡಲಾಗಿತ್ತು. ಆದರೆ ಆ ವ್ಯಕ್ತಿ ಇದು ನಮ್ಮ ವರ್ಗ ಜಾಗ ಎಂದು ಚರಂಡಿ ನಿರ್ಮಿಸುವಾಗ ಅಡ್ಡಿಪಡಿಸಿದರು. ಈ ರಸ್ತೆಯ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ. ಅನುದಾನ ಮಂಜೂರು ಆಗಿದ್ದು, ಈ ಕಾಮಗಾರಿ ಪ್ರಾರಂಭಿಸುವಾಗ ಇನ್ನೊಬ್ಬರು ರಸ್ತೆ ಹಾದು ಹೋಗುವಲ್ಲಿ ನಮ್ಮ ಜಾಗ ಇದೆ ಎಂದು ಆಕ್ಷೇಪ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.