ದಿನಪತ್ರಿಕೆ ಓದುವುದನ್ನು ತಪ್ಪದೇ ರೂಢಿಸಿಕೊಳ್ಳಿ : ಬಿ.ವಿ.ಸೂರ್ಯನಾರಾಯಣ
- ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಉದ್ಯೋಗಕ್ಕೆ ಪೂರಕವಾಗಿ ಸುತ್ತಮುತ್ತಲಿನ ಆಗು ಹೋಗುಗಳನ್ನು ಸದಾ ಗಮನಿಸುತ್ತಿರಬೇಕು. ಆ ಗಮನ ಹರಿಸುವಿಕೆಯ ಚಟುವಟಿಕೆಯಲ್ಲಿ ದಿನಪತ್ರಿಕೆ ಓದುವುದು ಮುಖ್ಯವಾದದು ಎಂದು ವಿಶ್ರಾಂತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಹೇಳಿದರು. ಅವರು ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮೇ 24 ರಂದು ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಣದ ನಂತರದ ಸವಾಲುಗಳು ಮತ್ತು ಅವಕಾಶಗಳು ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಉದ್ಯೋಗ ಸಂಬಂಧಿತ ಅವಕಾಶಗಳ ಬಗ್ಗೆ ದಿನಪತ್ರಿಕೆಗಳು ನಿತ್ಯವೂ ಮಾಹಿತಿ ಪ್ರಕಟಿಸುತ್ತವೆ. ಹಾಗಾಗಿ ದಿನವೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒಂದು ದಿನ ಓದದೇ ಇದ್ದರೆ ಆ ದಿನದ ಉದ್ಯೋಗ ಅವಕಾಶ ಮಾಹಿತಿ ನಿಮಗೆ ಸಿಗದೇ ಹೋಗಬಹುದು ಎಂದು ಅವರು ನುಡಿದರು.
ಗ್ರಾಮೀಣ ಪ್ರದೇಶದ ಅರ್ಹ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೇ ಇರಲು ಕಾರಣ ಅಂಕಗಳು ಇಲ್ಲ ಅನ್ನುವುದಲ್ಲ, ಬದಲಿಗೆ ಮಾಹಿತಿಯ ಕೊರತೆ. ಹಾಗಾಗಿ ಹಿರಿಯ ವಿದ್ಯಾರ್ಥಿ ಸಂಘವೂ ಸಾಮಾಜಿಕ ಜಾಲ ತಾಣದ ಮೂಲಕವೂ ಉದ್ಯೋಗ ಸಂಬಂಧಿತ ಮಾಹಿತಿಗಳನ್ನು ಹಂಚಿಕೊಳ್ಳುವ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಸೂರ್ಯನಾರಾಯಣ ಅವರು ಸಲಹೆ ನೀಡಿದರು.
ಹಿಂದೆ ಉದ್ಯೋಗ ಪುರುಷ ಲಕ್ಷಣಂ ಎಂಬ ಮಾತಿತ್ತು. ಈಗ ಅದು ಬದಲಾಗಿದೆ. ಪುರುಷ, ಮಹಿಳೆ ಇಬ್ಬರೂ ಸಮಾನರು. ಈಗ ಉದ್ಯೋಗ ಮನುಷ್ಯ ಲಕ್ಷಣಂ ಎಂದಾಗಿದೆ. ಬದುಕು ಕಟ್ಟಲು ಪ್ರತಿಯೊಬ್ಬರಿಗೂ ಉದ್ಯೋಗ ಬೇಕು. ಉದ್ಯೋಗ ಸಿಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಗಮನ ಇರಿಸಿ ಅಧ್ಯಯನ ಮಾಡುವುದು ಮುಖ್ಯ ಎಂದ ಅವರು, ಜ್ಞಾನ, ಕೌಶಲ, ನಡವಳಿಕೆ ಉದ್ಯೋಗ ಪಡೆಯುವಲ್ಲಿ ಬಹುಮುಖ್ಯ ಭಾಗ ಎಂದರು.
ಹಿರಿಯ ವಿದ್ಯಾರ್ಥಿಗಳು ರಾಯಭಾರಿಗಳು
ಹಿರಿಯ ವಿದ್ಯಾರ್ಥಿ ಸಂಘವೂ ವಿದ್ಯಾಸಂಸ್ಥೆಯ ಜತೆ ಕರುಳ ಬಳ್ಳಿ ಸಂಬಂಧ ಇಟ್ಟುಕೊಂಡಿರಬೇಕು. ಹಿರಿಯ ವಿದ್ಯಾರ್ಥಿಗಳು ರಾಯಭಾರಿಗಳ ತರಹ ಕಾರ್ಯ ನಿರ್ವಹಿಸಬೇಕು. ಸಂಸ್ಥೆಯ ಏಳಿಗೆಗೋಸ್ಕರ ಸಹಕಾರ ನೀಡಬೇಕು. ಬೆಳ್ಳಾರೆ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಆ ದಿಶೆಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿಂದ ಶಿಕ್ಷಣ ಮುಗಿಸಿ ತೆರಳುವ ವಿದ್ಯಾರ್ಥಿಗಳು ಈ ಸಂಘಕ್ಕೆ ನೈತಿಕ ಬಲ ತುಂಬಬೇಕು ಎಂದು ಬಿ.ವಿ.ಸೂರ್ಯನಾರಾಯಣ ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಕುಮಾರ್ ಪೆರುವಾಜೆ ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳಿಗೆ, ಸಂಸ್ಥೆಯ ಬೆಳವಣಿಗೆ ಪೂರಕವಾಗಿ ಚಟುವಟಿಕೆ ನಡೆಸುತ್ತಿದೆ. ಇನ್ನಷ್ಟು ಹಿರಿಯ ವಿದ್ಯಾರ್ಥಿಗಳು ಸಂಘದ ಸದಸ್ಯರಾಗುವ ಮೂಲಕ ಕಾಲೇಜಿನ ಜತೆ ಅವಿನಾಭಾವ ಸಂಬಂಧ ಇರಿಸಿಕೊಳ್ಳಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಸುಬ್ರಹ್ಮಣ್ಯ ಪಿ.ಎಸ್ ಮಾತನಾಡಿ ಉದ್ಯೋಗಕ್ಕೆ ಪೂರಕವಾಗಿ ನೀಡಲಾದ ಮಾಹಿತಿ ಹಲವು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ. ಹಿರಿಯ ವಿದ್ಯಾರ್ಥಿ ಸಂಘದ ಯೋಚನೆ, ಯೋಜನೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದರು.
ಪ್ರತೀಕ್ಷಾ ಮತ್ತು ತಂಡ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಗಿರೀಶ್ ಸಿ.ಆರ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಅನುರಾಜ್ ಸ್ವಾಗತಿಸಿದರು. ಸದಸ್ಯ ದೀಕ್ಷಿತ್ ಆಚಾರ್ಯ ವಂದಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ನಿರೂಪಿಸಿದರು.