ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ – ಸನ್ಮಾನ – ಯಕ್ಷಗಾನ

0

ಸಂಸ್ಕೃತಿ, ಪ್ರಕೃತಿ, ಸ್ವಚ್ಛ ಮನಸ್ಸು ನಮ್ಮದಾಗಿರಬೇಕು – ಕಡಮಜಲು ಸುಭಾಸ್‌ ರೈ

ಚಿತ್ರ: ಶ್ರೀಹರಿ ರೆಂಜ

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಹಾಗೂ ಯಕ್ಷಗಾನ ಬಯಲಾಟ ಮೇ.24 ರಂದು ಪತ್ತನಾಜೆ ಜಾತ್ರೆಯ ಶುಭದಿನದಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ ಜರಗಿತು.


ವಾರ್ಷಿಕೋತ್ಸವ-ಸನ್ಮಾನ ಸಮಾರಂಭ ಸಭಾ ಕಾರ್ಯಕ್ರಮವನ್ನು ಪೇರಲ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದಿಂದ ಪುರಾಣ, ಇತಿಹಾಸದ ತಿಳುವಳಿಕೆ ಮೂಡುವುದಲ್ಲದೇ ಸಂಸ್ಕೃತಿ ಸಂಸ್ಕಾರದ ಅನುಷ್ಠಾನವಾಗುವಲ್ಲಿ ಯಕ್ಷಗಾನ ಮಹತ್ತರ ಕಲೆಯಾಗಿದೆ. ಅಂತಹ ಕಲೆಯಿಂದಾಗಿ ಸಮಾಜದಲ್ಲಿ ಸಾಮರಸ್ಯದ ಬಾಳ್ವೆಯೂ ಕೂಡಾ ನಡೆಸಲ್ಪಡುತ್ತದೆ. ಸಂಘಟನೆಯಿಂದಾಗಿ ಸಮಾಜದಲ್ಲಿ ಶಕ್ತಿಯುತ ಯುವ ಸಮಾಜವನ್ನೂ ಕಟ್ಟಲೂ ಯಕ್ಷಗಾನ ಸಂಘಗಳು ವಿಶೇಷ ಪಾತ್ರ ವಹಿಸುತ್ತದೆʼ ಎಂದರು.


 ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್‌ ರೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ʻಸಂಸ್ಕೃತಿ, ಪ್ರಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಸ್ವಚ್ಛ ಮನಸ್ಸನ್ನು ನಾವೆಲ್ಲಾ ಹೊಂದಿರಬೇಕು. ಪ್ರತಿಯೊಂದು ಕಾರ್ಯದಲ್ಲೂ ಪರಿಜ್ಞಾನ, ಪರಿಶ್ರಮ ಮತ್ತು ಪರಿಪೂರ್ಣ ನಿರ್ವಹಣೆ ಇರಬೇಕು. ಇದೇ ಪರಿಸರದಲ್ಲಿ ನಾನು ಹೈಸ್ಕೂಲ್‌ ವಿದ್ಯಾಭ್ಯಾಸವನ್ನು ಮಾಡಿರುವುದು ಇಂದಿಗೂ ಮನಸ್ಸಿಗೆ ಸಂತೋಷವಿದೆʼ ಎಂದ ಅವರು ತನ್ನ ಗುರುವಿಕೆ ಕಾಣಿಕೆ ನಾನು ನೀಡಬೇಕಾಗಿತ್ತು. ಆದರೆ ಗುರು ಶಿಷ್ಯನಾದ ನನಗೆ ಸನ್ಮಾನ ಮಾಡಿರುವುದಕ್ಕೆ ಮನಸ್ಸು ಉಲ್ಲಾಸಗೊಂಡಿದೆ. ಸಂಘವು ಇನ್ನಷ್ಟು ಯಶಸ್ವಿ ಹಾದಿಯಲ್ಲಿ ಸಾಗಲಿʼ ಎಂದು ಶುಭ ಹಾರೈಸಿದರು. ಇದೇ ವೇಳೆ ತನ್ನ ಮಾವ ದೇಶಭಕ್ತ ಎನ್‌.ಎಸ್‌. ಕಿಲ್ಲೆಯವರ ಯಕ್ಷಗಾನದ ಸೇವೆ, ಸಾಹಿತ್ಯವನ್ನು ಪರಿಚಯಿಸಿದರು. ಅವರು ಬರೆದಿರುವ ಕೃತಿಗಳನ್ನು ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್‌ ರವರಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ವಿಘ್ನೇಶ್ವರ ಅರ್ಥ್‌ಮೂವರ್ಸ್‌ ಮಾಲಕ ಸುರೇಶ್‌ ಕುಮಾರ್‌, ಮಂಗಳೂರಿನ ಯುವ ಉದ್ಯಮಿ ಯತೀಶ್‌ ನಾಕಪ್ಪಾಡಿಯವರು ಶುಭ ಹಾರೈಸಿದರು.


ಸನ್ಮಾನ
ಇದೇ ವೇಳೆ ಮೂವರು ಯಕ್ಷ ಕಲಾವಿದರಿಗೆ ಸನ್ಮಾನ ಸಮಾರಂಭ ಜರಗಿತು. ವಿಜಯಾ ಬ್ಯಾಂಕ್‌ ನಿವೃತ್ತ ಮುಖ್ಯ ಪ್ರಬಂಧಕ, ಹವ್ಯಾಸಿ ಯಕ್ಷಗಾನ ಕಲಾವಿದರ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಯಕ್ಷಗಾನ ಕಲಾವಿದ ನರಸಿಂಹ ಸಿ.ಕೆ., ಯಕ್ಷಗಾನ ಭಾಗವತರಾದ ಹರಿದಾಸ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆಯವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಮೂವರೂ ತಮ್ಮ ಕಲಾಸೇವೆಯ ಅನುಭವ ಹಂಚಿಕೊಂಡು, ಸನ್ಮಾನಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಜಗನ್ನಾಥ ರೈ ಕಡಮಾಜೆ, ಹರಿಪ್ರಸಾದ್‌ ಮಿತ್ತಡ್ಕ, ಗೋಪಾಲಕೃಷ್ಣ ನಾಯರಡ್ಕ ಹಾಗೂ ಬಾಲಕೃಷ್ಣ ಕೊಂದಲ್ಕಾನ ಸನ್ಮಾನ ಪತ್ರ ವಾಚಿಸಿದರು.


ನುಡಿನಮನ
ಇತ್ತೀಚೆಗೆ ಆಕಸ್ಮಿಕವಾಗಿ ಅಗಲಿರುವ ಸ‍ಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರದೀಪ್‌ ರೈ ಕೇಕನಾಜೆ ಹಾಗೂ ಚೆಂಡೆವಾದಕ ರಾಮಯ್ಯ ರೈಯವರ ಸಂಸ್ಮರಣೆ ಮಾಡಲಾಯಿತು. ಹಿರಿಯ ಅರ್ಥಧಾರಿ ಭಾಸ್ಕರ ಶೆಟ್ಟಿ ಅಜ್ಜಿಕಲ್ಲು ಸಂಸ್ಮರಣಾ ನುಡಿಗಳನ್ನಾಡಿ, ಸಂಘವನ್ನೇ ನೆಚ್ಚಿಕೊಂಡು ಸಕ್ರೀಯವಾಗಿ ಕಾರ್ಯನಿರ್ವಹಿಸಿ ಸಂಘದ ಏಳ್ಗೆಗೆ ಕಾರಣೀಭೂತರಾದ ಪ್ರದೀಪ್‌ ರೈಯವರ ಪ್ರಾಮಾಣಿಕತೆ ಮತ್ತು ಎಲ್ಲರೊಂದಿಗೆ ಇದ್ದ ಸ್ನೇಹಮಯೀ ಒಡನಾಟವನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ. ಅವರ ಮರಣದ ಮರುದಿನವೇ ರಾಮಯ್ಯ ರೈಯವರೂ ನಮ್ಮನ್ನಗಲಿ ಈರ್ವರೂ ಜೊತೆಜೊತೆಯಾಗಿ ಮತ್ತೆಂದೂ ಬಾರದ ಊರಿಗೆ ಹೋಗಿರುವ ಆ ಆಘಾತ ನಮ್ಮಿಂದ ಇನ್ನೂ ಮಾಸಿಲ್ಲʼ ಎಂದರು.


ಗುರುವಿನಿಂದ ಶಿಷ್ಯನಿಗೆ ಸನ್ಮಾನ
ಇದೇ ವೇಳೆ ಸಂಘದ ಗೌರವಾಧ್ಯಕ್ಷ ಎನ್‌. ಸಂಜೀವ ರೈಯವರು ತನ್ನ ಶಿಷ್ಯ ಕಡಮಜಲು ಸುಭಾಸ್‌ ರೈಯವರನ್ನು ಸನ್ಮಾನಿಸಿ ಗೌರವಿಸಿದರು. ತನ್ನ ಶಿಷ್ಯನ ಸದ್ಗುಣಗಳ ಬಗ್ಗೆ ಗುರು ಸಂಜೀವ ರೈ ಎನ್.‌ ರವರು ಮಾತನಾಡಿ ಶ್ಲಾಘನೆ ವ್ಯಕ್ತಪಡಿಸಿದರು.


ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌ ಉಪಸ್ಥಿತರಿದ್ದರು. ಮೊಕ್ತೇಸರ ವಿನೋದ್‌ ರೈ ಗುತ್ತು ಶುಭ ಹಾರೈಸಿದರು. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ, ದಿ. ಪ್ರದೀಪ್‌ ರೈಯವರ ಪುತ್ರ ಚಿಂತನ್‌ ರೈ ಕೆ. ಯವರನ್ನು ಇದೇ ವೇಳೆ ಅಭಿನಂದಿಸಲಾಯಿತು.


ಸಂಘದ ಕೋಶಾಧಿಕಾರಿ ಶ್ಯಾಂಪ್ರಸಾದ್‌ ಮತ್ತು ಬಳಗ ಪ್ರಾರ್ಥಿಸಿದರು. ಕಾರ್ಯದರ್ಶಿ ದಾಮೋದರ ಮಾಲಡ್ಕ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್‌ ಬೆಟ್ಟಂಪಾಡಿ ಸ್ವಾಗತಿಸಿ, ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್‌ ವಂದಿಸಿದರು. ಶೇಖರ ಗೌಡ ಮಿತ್ತಡ್ಕ ಸಹಕರಿಸಿದರು. ಕಳೆದ ಸಾಲಿನ ವಾರ್ಷಿಕೋತ್ಸವದ ಮಹಾಪೋಷರಿಗೆ ಇದೇ ವೇಳೆ ಗೌರವಾರ್ಪಣೆ ಮಾಡಲಾಯಿತು.


ಯಕ್ಷಗಾನ ಬಯಲಾಟ
ಮಧ್ಯಾಹ್ನ 1 ಗಂಟೆಯ ಬಳಿಕ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ʻಅತಿಕಾಯ-ಇಂದ್ರಜಿತು-ವೀರಮಣಿ ಕಾಳಗʼ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here