ನೆಲ್ಯಾಡಿ: ಟೆಂಪೋ ಟ್ರಾವೆಲ್ಲರ್ ಪಲ್ಟಿಯಾಗಿ 9 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಮೇ 25ರಂದು ರಾತ್ರಿ ನಡೆದಿದೆ.
ಸಿಂಗಸಂದ್ರ ನಿವಾಸಿ ಕಿರಣ್ ಬಿ.ಜಿ.ಎಂಬವರ ಟೆಂಪೋ ಟ್ರಾವೆಲ್ಲರ್(ಕೆಎ13, ಸಿ0416)ನಲ್ಲಿ ಮದನ್ ಗೋಪಾಲ ಬಿ.ವೈ ಎಂಬವರು ಚಾಲಕನಾಗಿ ಮೇ 25ರಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಬಾಡಿಗೆ ನೆಲೆಯಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಟು ಬಂದಿದ್ದು ರಾತ್ರಿ 12 ಗಂಟೆಗೆ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಟೆಂಪೋ ಟ್ರಾವೆಲ್ಲರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಘಟನೆಯಲ್ಲಿ ಪ್ರಯಾಣಿಕರಾದ ಮಂಜುನಾಥ, ಮುರಳಿ, ಮಂಜುನಾಥ ವಿ., ಅಂಬರೀಶ, ಕಲ್ಲೇಶ್, ಸಾಗರ್, ಮಂಜುನಾಥ, ಗಗನ್ ಮತ್ತು ಮೋಹನ್ ಎಂಬವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕಿರಣ್ ಬಿ.ಜಿ.ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.