ಹಳೆನೇರೆಂಕಿ: ಕೋಳಿ ಅಂಕಕ್ಕೆ ಕಡಬ ಪೊಲೀಸರ ದಾಳಿ : ಮೂವರು ವಶಕ್ಕೆ, 8 ಮಂದಿ ಪರಾರಿ; ವಾಹನ, ಕೋಳಿ, ನಗದು ವಶ

0

ರಾಮಕುಂಜ: ಕಡಬ ಠಾಣಾ ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದ ನೇರೆಂಕಿ ಎಂಬಲ್ಲಿ ಜೂ.10ರಂದು ತೋಟವೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಕಡಬ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು 8 ಮಂದಿ ಪರಾರಿಯಾಗಿದ್ದಾರೆ. ಸ್ಥಳದಿಂದ ವಾಹನ, ಕೋಳಿ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.


ಹಳೆನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿನ ತೋಟವೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಕಡಬ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಅಭಿನಂದನ್‌ರವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಕೃತ್ಯದಲ್ಲಿ ತೊಡಗಿದ್ದ 8 ಜನರು ಪರಾರಿಯಾಗಿದ್ದು, 3 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿದ್ದ 6 ಬೈಕ್, 2 ಕಾರು, 4 ಕೋಳಿ, ಕೋಳಿ ಅಂಕಕ್ಕೆ ಬಳಸಲಾಗುವ ಕತ್ತಿ ಹಾಗೂ 3,560 ರೂ. ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ :44/2025 ಕಲಂ: 87, 93 KP Act ಹಾಗೂ 3,11 THE PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಪೊಲೀಸ್ ವಶವಾದವರು: ವೆಂಕಟೇಶ (30ವ,)ಆಲಂಕಾರು, ಮೋಹನ್‌ದಾಸ್ ರೈ(48ವ.) ನೆರೆಂಕಿ ಮನೆ ಹಳೆನೇರೆಂಕಿ, ರಾಧಾಕೃಷ್ಣ (51ವ)ಬೇಲ್ಪಾಡಿ ಪೆರಾಬೆ ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here