ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ರೋಟರಿ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಆಗಿ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿರವರು ಜು.1ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.


ಪ್ರತಿಷ್ಠಿತ ಮುಗ್ಗಗುತ್ತು ಮನೆತನದಿಂದ ಬಂದ ಇವರು ಕೃಷಿಕ ಕುಟುಂಬದವರಾಗಿದ್ದು, ಬಂಟ್ವಾಳ ತಾಲೂಕು ಕಕ್ಯಪದವಿನ ದಿ.ಬಾಬು ಪೂಜಾರಿ ಮತ್ತು ಶ್ರೀಮತಿ ಗಿರಿಜಾ ದಂಪತಿಗಳ ಸುಪುತ್ರರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳ ತಾಲೂಕಿನ ನಡುಮೊಗರು ಮತ್ತು ಕಕ್ಯಪದವು, ಪ್ರೌಢ ಶಿಕ್ಷಣವನ್ನು ಮಡಂತ್ಯಾರು ಮತ್ತು ಪುಂಜಾಲಕಟ್ಟೆಯಲ್ಲಿ, ಪಿಯುಸಿ ಶಿಕ್ಷಣವನ್ನು ಎಸ್‌ಡಿಎಂ ಉಜಿರೆಯ ಪೂರೈಸಿದರು. ದಂತ ವೈದ್ಯಕೀಯ ಶಿಕ್ಷಣವನ್ನು ಧಾರವಾಡ ಎಸ್‌ಡಿಎಂ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಪಡೆದು 1995ರಲ್ಲಿ ಉಪ್ಪಿನಂಗಡಿಯಲ್ಲಿ ತನ್ನ ಮಾತೃಶ್ರೀಯವರ ನಾಮಾಂಕಿತದ ಗಿರಿಜಾ ದಂತ ಚಿಕಿತ್ಸಾಲಯವನ್ನು ತೆರೆದು ಸುದೀರ್ಘ 30 ವರ್ಷಗಳ ವೃತ್ತಿ ಜೀವನದ ಅನುಭವವನ್ನು ಹೊಂದಿದ್ದಾರೆ. ತನ್ನ ಚಿಕಿತ್ಸಾಲಯದಲ್ಲಿ ಹಲವಾರು ಕಿರಿಯ ವೈದ್ಯರುಗಳಿಗೆ ಉದ್ಯೋಗಾವಕಾಶ ಕಲ್ಪಿಸಿ ಅವರಿಗೆ ತರಬೇತಿ ನೀಡಿರುತ್ತಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ಮತ್ತೊಂದು ದಂತ ಚಿಕಿತ್ಸಾಲಯವನ್ನು ತೆರೆದು ತನ್ನ ವೃತ್ತಿ ಕ್ಷೇತ್ರವನ್ನು ವಿಸ್ತರಿಸುವುದರೊಂದಿಗೆ ಗ್ರಾಮೀಣ ವೈದ್ಯಕೀಯ ಸೇವೆಗೆ ಮತ್ತಷ್ಟು ಒತ್ತು ಕೊಟ್ಟಿದ್ದಾರೆ.


ಸಾಮಾಜಿಕವಾಗಿಯೂ ಹಲವಾರು ಸಂಘಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಡಾ.ರಾಜಾರಾಮ್‌ರವರು ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಇದರ ಅಧ್ಯಕ್ಷರಾಗಿ ದುಡಿದು ಅರ್ಹವಾಗಿಯೇ ದಂತ ವೈದ್ಯರ ರಾಜ್ಯ ಸಮ್ಮೇಳನದಲ್ಲಿ ಅತ್ಯುತ್ತಮ ಶಾಖಾ ಅಧ್ಯಕ್ಷ ಪ್ರಶಸ್ತಿ ಪಡೆದಿರುತ್ತಾರೆ. ಜೆಸಿಐ ಉಪ್ಪಿನಂಗಡಿ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷರಾಗಿ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿಯ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾಗಿ ದುಡಿದು ಕೊರೋನದಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಕೂಡಾ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ. ಇವರ ಅವಧಿಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ಬಹು ಬೇಡಿಕೆಯ ಡಯಾಲಿಸಿಸ್ ಮೆಶಿನ್ ಕೊಟ್ಟು ಯುವವಾಹಿನಿಗೆ ಕೀರ್ತಿ ತಂದಿದ್ದಾರೆ. ಉಪ್ಪಿನಂಗಡಿ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಉಬಾರ್ ಕೂಡ್ ಕಟ್ ತುಳು ಸಂಘಟನೆಯನ್ನು ಹುಟ್ಟು ಹಾಕಿ ತುಳು ಭಾಷೆ, ತುಳು ಸಂಸ್ಕೃತಿಯ ಉನ್ನತಿಗಾಗಿ ಶ್ರಮಿಸಿದ್ದಾರೆ. ರಾಜಕೀಯ ಕ್ಷೇತ್ರವನ್ನು ಸೇವಾ ಕ್ಷೇತ್ರವನ್ನಾಗಿಸಿಕೊಂಡು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು ಓರ್ವ ಶಾಸಕನನ್ನು ಈ ಕ್ಷೇತ್ರಕ್ಕೆ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.


ಹೀಗೆ ಶೈಕ್ಷಣಿಕ, ಸಾಮಾಜಿಕ, ತುಳು ಭಾಷೆ ಮತ್ತು ಸಂಸ್ಕೃತಿ, ರಾಜಕೀಯ ಹಾಗೂ ತನ್ನ ಉದ್ಯೋಗ ದಂತ ವೈದ್ಯಕೀಯ ಕ್ಷೇತ್ರದಲ್ಲೂ ಅನನ್ಯ ಸಾಧನೆ ಮಾಡಿದ ಇವರಿಗೆ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ಲಭಿಸಿರುವುದು ಇವರ ಸಾಧನೆಯ ಮುಕುಟಕ್ಕೆ ಇನ್ನೊಂದು ಗರಿ ಸೇರಿದಂತಾಗಿದೆ. ಪತ್ನಿ ಡಾ.ರಮ್ಯಾ ರಾಜಾರಾಮ್, ಪುತ್ರರಾದ ಅಂತಿಮ ವರ್ಷದ ಬಿಡಿಎಸ್ ಮಾಡುತ್ತಿರುವ ರಿಷಿಕೇಶ್, ಮೂರನೇ ವರ್ಷದ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುತ್ತಿರುವ ರಿತೇಶ್, ದ್ವಿತೀಯ ಪಿಯುಸಿ ಓದುತ್ತಿರುವ ಪುತ್ರಿ ರಿತೀಶಾರವರೊಂದಿಗೆ ಉಪ್ಪಿನಂಗಡಿಯ ರಾಮನಗರದ ರಾಮನಿವಾಸದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here