@ ಸಿಶೇ ಕಜೆಮಾರ್
ಪುತ್ತೂರು: ಪೆನ್ಸಿಲ್ ಬಾಕ್ಸ್ ಖ್ಯಾತಿಯ ರಝಾಕ್ ಪುತ್ತೂರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ‘ ಸ್ಕೂಲ್ ಲೀಡರ್…’ ಯಶಸ್ವಿ 25 ನೇ ದಿನಕ್ಕೆ ಕಾಲಿಟ್ಟಿದೆ. ಪುತ್ತೂರು ಜಿಎಲ್ 1 ಮಾಲ್‌ನಲ್ಲಿರುವ ‘ಭಾರತ್ ಸಿನೆಮಾಸ್’ನಲ್ಲಿ ಪ್ರದರ್ಶನ ಕಾಣುತ್ತಿರುವ ಸ್ಕೂಲ್ ಲೀಡರ್ ಸಿನಿ ರಸಿಕರ ಮನಗೆಲ್ಲುವಲ್ಲಿ ಯಶಸ್ವಿ ಕಂಡಿದೆ. ಸಿನಿಮಾ ಬಿಡುಗಡೆಗೊಂಡ ಮಂಗಳೂರು, ಉಡುಪಿಯಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಖುಷಿ ಕೊಟ್ಟಿರುವುದು ವಿಶೇಷವಾಗಿದೆ. ತುಳು ಚಿತ್ರರಂಗದ ದಿಗ್ಗಜರಾದ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಜೊತೆಯಲ್ಲಿ ದೀಪಕ್ ರೈ ಪಾಣಾಜೆ ಹಾಗೇ ಪುತ್ತೂರಿನ ಯುವ ಪ್ರತಿಭೆಗಳಾದ ಸುದರ್ಶನ್ ಶಂಕರ್ ಮುಕ್ರಂಪಾಡಿ ಹಾಗೂ ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ಡಿ.ರೈ ಅಭಿನಯ ಜನರಿಗೆ ಖುಷಿ ಕೊಟ್ಟಿದೆ. ಸಿನಿಮಾದ ಉದ್ದಕ್ಕೂ ಮುದ್ದು ಮುದ್ದಾದ ಮಕ್ಕಳ ನಟನೆ , ತುಂಟಾದ ಮನಸ್ಸಿಗೆ ಮುದ ನೀಡುತ್ತದೆ. ಚಿತ್ರದಲ್ಲಿ ಬರುವ ಅಚ್ಚ ಕನ್ನಡದ ಸಂಭಾಷಣೆ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಸರಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಕರ ಕೊರತೆ, ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ಈ ಎಲ್ಲವನ್ನು ಬಹಳ ಸೊಗಸಾಗಿ ಹೇಳ ಹೊರಟಿರುವ ಸ್ಕೂಲ್ ಲೀಡರ್ ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿಯೊಂದನ್ನು ಕೂಡ ನೀಡಿದೆ. ಪ್ರತಿಯೊಬ್ಬ ಶಿಕ್ಷಕರು, ಪೋಷಕರು,ಮಕ್ಕಳು ನೋಡಲೇಬೇಕಾದ ಒಂದು ಸುಂದರ ಸಿನಿಮಾ ಇದಾಗಿದೆ.
ಭರವಸೆ ಮೂಡಿಸಿದ ಪುತ್ತೂರಿನ ಪ್ರತಿಭೆಗಳು
ಸುದರ್ಶನ್ ಶಂಕರ್ ಮತ್ತು ದೀಕ್ಷಾ ಡಿ ರೈ
ಸಿನಿಮಾದಲ್ಲಿ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ ಸುದರ್ಶನ್ ಶಂಕರ್ ಮೂಲತಃ ಪುತ್ತೂರಿನವರು ಆಗಿದ್ದಾರೆ. ಇಲ್ಲಿನ ಮುಕ್ರಂಪಾಡಿ ನಿವಾಸಿಯಾಗಿರುವ ಇವರು ಚಲನ ಚಿತ್ರದಲ್ಲಿ ಅಭಿನಯಿಸಬೇಕೆಂಬ ಬಹು ಕಾಲದ ಕನಸು ಹೊಂದಿದ್ದರು. ಮೊದಲ ಬಾರಿ ‘ಕನಸು’ ಎಂಬ ಆಲ್ಬಮ್ ಗೀತೆಯಲ್ಲಿ ನಟನೆ, ನಂತರ ರಝಾಕ್ ಪುತ್ತೂರು ನಿರ್ದೇಶನದ ‘ಕಲ್ಪನೆ’ ಎಂಬ ಕಿರುಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಯುವ ಉದ್ಯಮಿಯಾಗಿರುವ ಸುದರ್ಶನ್ ಶಂಕರ್‌ರವರಿಗೆ ಮುಂದಿನ ದಿನಗಳಲ್ಲಿ ಅಭಿನಯದ ಜೊತೆಗೆ ಚಿತ್ರ ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ.

ರಿಯಾಲಿಟಿ ಶೋಗಳ ಮೂಲಕ ಪ್ರಸಿದ್ದಿ ಪಡೆದುಕೊಂಡಿರುವ ದೀಕ್ಷಾ ಡಿ.ರೈಯವರು ‘ಪೆನ್ಸಿಲ್ ಬಾಕ್ಸ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಕಾಮಿಡಿ ಮತ್ತು ಸುವರ್ಣ ವಾಹಿನಿಯ ಡಾನ್ಸ್ ಡಾನ್ಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಹೊಂದಿರುವ ಇವರು ‘ಧರ್ಮ ದೈವ’ ಚಿತ್ರದಲ್ಲಿ ಅಭಿನಯ ಕೂಡ ನೀಡಿದ್ದಾರೆ. ಒಬ್ಬಳು ನಾಯಕಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ದೀಕ್ಷಾ ಡಿ.ರೈಯವರು‘ ಸ್ಕೂಲ್ ಲೀಡರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನ ಯುವ ನಾಯಕಿಯಾಗಿ ಕಾಣಿಸಿಕೊಳ್ಳಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ.
ಪ್ರತಿಭಾವಂತ ನಿರ್ದೇಶಕ ರಝಾಕ್ ಪುತ್ತೂರು
ಒಬ್ಬ ನಿರ್ದೇಶಕನಿಗೆ ಇರಬೇಕಾದ ಎಲ್ಲಾ ಅರ್ಹತೆಗಳನ್ನು ನಾವು ರಝಾಕ್ ಪುತ್ತೂರುರವರಲ್ಲಿ ಕಾಣಬಹುದಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದೊಂದಿಗೆ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಇವರನ್ನು ಕಂಡಾಗ ಸ್ಯಾಂಡಲ್‌ವುಡ್ ನಿರ್ದೇಶಕ ವಿ.ರವಿಚಂದ್ರನ್ ನೆನಪಾಗುತ್ತಾರೆ. ಅವರು ಕೂಡ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನ ಎಲ್ಲವನ್ನು ಮಾಡಿದವರು. ರಝಾಕ್ ಪುತ್ತೂರವರು ಸಾಹಿತ್ಯ ರಚನೆಗೆ ರಾಜ್ಯ ಫಿಲಂ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಒಂದಿಷ್ಟು ಹಮ್ಮುಬಿಮ್ಮು ದರ್ಪ ಇಲ್ಲದ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವ ಅತ್ಯಂತ ಸರಳತೆಯ ಮನುಷ್ಯ ಈ ರಝಾಕ್ ಪುತ್ತೂರು. ಇವರ ‘ಸ್ಕೂಲ್ ಲೀಡರ್’ ಶತ ದಿನೋತ್ಸವ ಕಾಣಲಿ ಎಂಬುದೇ ನಮ್ಮೆಲ್ಲರ ಆಶಯ.