ಕಡಬ: ರಿಕ್ಷಾ ಪಲ್ಟಿಯಾಗಿ ಅದರ ಹಿಂಬದಿ ಕುಳಿತಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜು.3ರಂದು ಬೆಳಿಗ್ಗೆ ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ನಡೆದಿದೆ.
ಕುಲ್ಕುಂದ ನಿವಾಸಿ ಸುಮಿತ್ರಾ ಗಾಯಗೊಂಡವರಾಗಿದ್ದಾರೆ. ಇವರು ರಾಜೇಶ್ ಎಂಬವರ ರಿಕ್ಷಾದಲ್ಲಿ ಕುಲ್ಕುಂದದಿಂದ ಮರ್ದಾಳಕ್ಕೆಂದು ಪ್ರಯಾಣಿಸುತ್ತಿದ್ದ ವೇಳೆ ರಿಕ್ಷಾ ಕೈಕಂಬ ನರ್ಸರಿಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಚಾಲಕನ ಹತೋಟಿ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಸಮಿತ್ರಾ ಅವರ ತಲೆಯ ಬಲ ಭಾಗಕ್ಕೆ ಗಾಯವಾಗಿದ್ದು, ಚಾಲಕ ರಾಜೇಶ್‌ರವರ ಸೊಂಟಕ್ಕೆ ಗುದ್ದಿದ ಗಾಯವಾಗಿದೆ. ಗಂಭೀರ ಗಾಯಗೊಂಡಿದ್ದ ಸುಮಿತ್ರಾ ಅವರನ್ನು 108 ಆಂಬುಲೆನ್ಸ್‌ನಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ, ನಂತರ ಅಲ್ಲಿಂದ ಮಂಗಳೂರು ಜ್ಯೋತಿ ಕೆ.ಎಂ.ಸಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.