ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಗದ್ದೆಯಲ್ಲಿ ಪರಿವಾರ ಬಂಟರ ಸಂಘದಿಂದ ’ಕೆಸರ್ಡ್ ಒಂಜಿ ದಿನ’

0

ಪುತ್ತೂರು: ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಮಂಗಳೂರು ಮತ್ತು ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಶಶಿಧರ್ ನಾೖಕ್ ರವರ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಜು.6 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪರಿವಾರ ಬಂಟರ ಸಂಘ ಮುದ್ರಿತ ಜರ್ಸಿಯನ್ನು ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.


ಕರ್ನಾಟಕ ಬ್ಯಾಂಕ್ ಮಂಗಳೂರಿನ ಸೀನಿಯರ್ ಮ್ಯಾನೇಜರ್ ಜಯರಾಮ ನಾೖಕ್  ದೀಪ ಬೆಳಗಿಸಿ,ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ನಾೖಕ್ ಕೊಳಕ್ಕಿಮಾರ್ ತೆಂಗಿನಕಾಯಿ ಒಡೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟನೆ:
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಬ್ಯಾಂಕ್ ಮಂಗಳೂರಿನ ಸೀನಿಯರ್ ಮ್ಯಾನೇಜರ್ ಜಯರಾಮ ನಾೖಕ್  ಮಾತನಾಡಿ, ತುಳುನಾಡಿನ ಪಾರಂಪರಿಕ ಕೃಷಿ ಪದ್ದತಿ ನಶಿಸುತ್ತಿರುವ ಈ ಸಮಯದಲ್ಲಿ ನಮ್ಮ ಹಿರಿಯರು ಬದುಕಿದ ರೀತಿ, ಮಳೆ ಚಳಿ ಬಿಸಿಲೆನ್ನದೆ ದುಡಿಯುತಿದ್ದ ಪರಿ ಹೇಗಿತ್ತು ಇದನ್ನೆಲ್ಲ ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕಾರ್ಯಕ್ರಮದ ಆಯೋಜನೆ ಅತ್ಯಗತ್ಯ ಇದರಿಂದ ಯುವ ಜನತೆ ಒಗ್ಗೂಡಲು ಸಹಾಯವಾಗುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮನೋಹರ್ ನಾೖಕ್  ಕೊಳಕ್ಕಿಮಾರ್ ಮಾತನಾಡಿ, ಊರು ಬಿಟ್ಟು ಪೇಟೆ ಸೇರಿ ಅಲ್ಲಿನ ಅಧುನಿಕತೆಗೆ ಒಗ್ಗಿಕೊಂಡ ಇಂದಿನ ಮಕ್ಕಳಿಗೆ ನಮ್ಮ ಹಿರಿಯರ ಸಂಸ್ಕ್ರತಿ, ಸಂಪ್ರದಾಯ, ಜಾನಪದ ಕ್ರೀಡೆಗಳು,ಆಚಾರ ವಿಚಾರಗಳನ್ನು ಮರೆಯುತ್ತಿರುವ ಸಂಧರ್ಭದಲ್ಲಿ ಅದನ್ನು ನೆನಪಿಡುವಂತೆ ಮಾಡಲು,ಅವರನ್ನೇಲ್ಲ ಒಟ್ಟು ಸೇರುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರವಹಿಸುತ್ತದೆ ಎಂದರು.


ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಗೌರವಾಧ್ಯಕ್ಷ ಸುಧಾಕರ್ ಕೆ.ಪಿ. ಮಾತನಾಡಿ, ಸಮಾಜ ಬಾಂಧವರ ಪೂರ್ಣ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿಯಾಗಲಿ.ಕೃಷಿ ಕಾಯಕವನ್ನೇ ಮರೆಯುತ್ತಿರುವ ಕಾಲ ಘಟ್ಟದಲ್ಲಿ ನಾವಿದ್ದೇವೆ ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದು ಎಂದರು.


ಮುಖ್ಯ ಅಭ್ಯಾಗತರಾಗಿದ್ದ ನೆಹರೂನಗರ ಸಮೃದ್ದಿ ಕನ್‌ಸ್ಟ್ರಕ್ಷನ್‌ನ ಸುಧೀರ್ ಪ್ರಸಾದ್ ಎ., ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿರ್ದೇಶಕ ಹರೀಶ್ ನಾೖಕ್  ಅಜೇಯನಗರ, ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಅಧ್ಯಕ್ಷ ಸರ್ವೇಶ್ ಪಾದೆ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಪ್ರಭಾ ನಾೖಕ್ , ಗದ್ದೆಯ ಯಜಮಾನ ಶಶಿಧರ್ ನಾೖಕ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರವೀಣ್ ನಾೖಕ್  ಕೊಟ್ಟಿಬೆಟ್ಟು,ಗಗನ್,ಲಿಖಿತ್, ರಶ್ಮೀ ಉಮಾಶಂಕರ್,ನಿತೇಶ್, ವೀಕ್ಷಿತ್ ಕಲ್ಲಿಮಾರ್,ರೇಷ್ಮಾ ಸುಧಾಕರ್, ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಸ್ಟರ್ ಗೌರವ್ ಪ್ರಾರ್ಥಿಸಿದರು,ಯುವ ಪರಿವಾರ ಬಂಟರ ವೇದಿಕೆಯ ಅಧ್ಯಕ್ಷ ನಿರೋಷ್ ನಾೖಕ್  ಸ್ವಾಗತಿಸಿದರು.ಅನಿತಾ ವಸಂತ್ ನಾೖಕ್  ಮತ್ತು ಸ್ಮಿತಾ ಸುಜಿತ್ ನಾೖಕ್  ಕಾರ್ಯಕ್ರಮ ನಿರೂಪಿಸಿದರು. ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಕಾರ್ಯದರ್ಶಿ ಕವನ್ ನಾೖಕ್  ವಂದಿಸಿದರು.ಸಂಘದ ಪದಾಧಿಕಾರಿಗಳು,ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

ಇಂದಿನ ಕಂಪ್ಯೂಟರ್ ಯುಗದಲ್ಲಿ ಜಗತ್ತೇ ಯಾಂತ್ರಿಕರಣದ ಹಿಂದೆ ಹೋಗುತ್ತಿರುವ ಈ ಸಮಯದಲ್ಲಿ ಗದ್ದೆ ಎಂದರೇನು ಹೇಗಿತ್ತು ಎಂದು ಮುಂದೊಂದು ದಿನ ಓದಿ ತಿಳಿದು ಕೊಳ್ಳಬೇಕಾಗಬಹುದು.ಬಿಡುವಿಲ್ಲದ ಯಾಂತ್ರಿಕ ಜೀವನದ ನಡುವೆ ಹಿರಿಯರು, ಕಿರಿಯರು, ಮಕ್ಕಳೆನ್ನದೆ ಎಲ್ಲರು ಒಟ್ಟು ಸೇರಿ ಒಂದು ದಿನ ಬಿಡುವು ಮಾಡಿ ಕೆಸರಿನಲ್ಲಿ ಆಟವಾಡಿ ಸಂಭ್ರಮಿಸಿದ ಪರಿ ನೋಡುಗರು ಕೂಡ ತಾವೂ ಕೂಡ ಕೆಸರಿಗೆ ಇಳಿಯಬೇಕೆನ್ನುವಂತೆ ಮಾಡಿತ್ತು. ಪಾರಂಪರಿಕವಾಗಿ ಬೆಳೆದು ಬಂದ ತುಳುನಾಡಿನ ಕ್ರೀಡಾಕೂಟ, ಸಂಪ್ರದಾಯ ಗಳನ್ನೆಲ್ಲ ಜೀವಂತವಾಗಿಡಲು ಅದರ ಬಗ್ಗೆ ಹೆಚ್ಚು ತಿಳಿದಿಲ್ಲದ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಪರಿವಾರ ಬಂಟ ಸಮುದಾಯದವರು ಆಯೋಜಿಸಿದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಹಗ್ಗ ಜಗ್ಗಾಟ, ತ್ರೋಬಾಲ್,ರಿಲೇ,ಓಟ,ಅಡಿಕೆ ಹಾಳೆಯಲ್ಲಿ ಕೂತು ಎಳೆಯುವ ಸ್ಫರ್ಧೆ,ಹಿಮ್ಮುಖ ಓಟ, ಆಟದ ಬರದಲ್ಲಿ ಆಯತಪ್ಪಿ ಕೆಸರಿಗೆ ಬೀಳುತಿದ್ದ ದೃಶ್ಯ, ಕೆಸರಿನಲ್ಲಿ ಮಿಂದವರು ಪಕ್ಕದಲ್ಲೇ ಹರಿಯುವ ತೋಡಿನಲ್ಲಿ ಮುಳುಗೇಳುತಿದ್ದ ದೃಶ್ಯ ನೋಡುಗರಿಗೆ ಮುದ ನೀಡುತಿತ್ತು.ತುಳು ನಾಡಿನ ಧ್ವಜ ಗದ್ದೆಯಲ್ಲಿ ಹಾರಾಡುತಿತ್ತು, ಜೈತುಳುನಾಡು ಘೋಷ ವಾಕ್ಯ ಎಲ್ಲರನ್ನು ಹುರಿದುಂಬಿಸುತಿತ್ತು.

LEAVE A REPLY

Please enter your comment!
Please enter your name here