ವಿವಿಧ ಬೇಡಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘಟನೆಯಿಂದ ಪ್ರತಿಭಟನೆ

0

ಕೆಂಬಾವುಟ ಹಿಡಿದು ಮಾಡಿದ ಹೋರಾಟಗಳು ಎಲ್ಲೂ ಸೋಲಿಲ್ಲ- ಈಶ್ವರಿ

ಪುತ್ತುರು: ದುಡಿಯುವ ವರ್ಗದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಕ್ಷರ ದಾಸೋಹ ನೌಕರರ ಸಂಘದಿಂದ ಜು.9ರಂದು ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಬಳಿ ಪ್ರತಿಭಟನೆ ನಡೆಯಿತು.


ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ಅಕ್ಷರ ದಾಸೋಹ, ಆಶಾ ಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ಕನಿಷ್ಠ ವೇತನ ಜಾರಿಗೊಳಿಸಬೇಕು. ಕಾರ್ಮಿಕ ಕಾನೂನುಗಳಲ್ಲಿ ಕೆಲಸದ ಅವಧಿ ಹೆಚ್ಚಳ ಸೇರಿದಂತೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಮತ್ತು ಜೀವನ ಯೋಗ್ಯ ಕನಿಷ್ಠ ವೇತನ ರೂ. 36ಸಾವಿರ ನಿಗದಿಗಾಗಿ ಗುತ್ತಿಗೆ ಮುಂತಾದ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ, ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಪಿಂಚಣಿ ಸೇರಿದಂತೆ ಕಲ್ಯಾಣ ಸೌಲಭ್ಯಗಳ ಜಾರಿಗಾಗಿ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಮದ್ಯಾಹ್ನದ ಊಟದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಿತು.


ಕೆಂಬಾವುಟ ಹಿಡಿದು ಮಾಡಿದ ಹೋರಾಟಗಳು ಎಲ್ಲೂ ಸೋಲಿಲ್ಲ:
ಕಾರ್ಮಿಕ ಮುಖಂಡೆ ಈಶ್ವರಿ ಅವರು ಮಾತನಾಡಿ ರಾಜ್ಯ ಸರಕಾರ ಇರಬಹುದು ಕೇಂದ್ರ ಸರಕಾರ ಇರಬಹುದು ದುಡಿಯುವ ವರ್ಗಗಳಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ. ಇವತ್ತು ಕಾನೂನು ಕಾಯ್ದೆಗಳು ಜಾರಿ ಆದರೆ ನಮಗೆ ಸಿಗುವ ವೇತನ, ಬೋನಸ್, ಸಮಾನ ವೇತನದ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ. ಮುಂದೆ ಸರಕಾರ ಎನು ಮಾಡಿದರೂ ಒಪ್ಪಿಕೊಳ್ಳಬೇಕು. ಆ ಮೂಲಕ ಸರಕಾರ ನಿಮ್ಮ ಶೋಷಣೆ ಮಾಡುವವರು ನಾವು ಎಂದು ಬಹಿರಂಗವಾಗಿ ಹೇಳುವಂತಾಗಿದೆ. ನಮ್ಮನ್ನು ಆಳುವ ಸರಕಾಕ್ಕೆ ನಮ್ಮ ಕಾಳಜಿ ಇಲ್ಲ. ನಿಮ್ಮನ್ನು ಸ್ಕೀಮ್ ನೌಕರರನ್ನಾಗಿ ಮಾಡಿದ್ದಾರೆ. ಅಲ್ಲಿ ನೀವು ಶಕ್ತಿ ಇರುವ ತನಕ ದುಡಿಯಿರಿ, ಶಕ್ತಿ ಇಲ್ಲದಾಗ ಎಲ್ಲಿಗಾದರೂ ಹೋಗಿ ಸಾಯಿರಿ ಎಂದರ್ಥ. ಇಲ್ಲಿ ಕಾಂಗ್ರೆಸ್ ಕೂಡಾ ಒಂದೆ ನಾಣ್ಯದ ಎರಡು ಮುಖಗಳು. ಒಂದು ಕಡೆ ನಮ್ಮನ್ನು ಸಮಧಾನಿಸುತ್ತಾ ಒಂದೆ ಟೇಬಲ್‌ನಲ್ಲಿ ಎರಡು ಪಕ್ಷದ ಮುಖಂಡರು ತಿಂದುಕೊಂಡಿರುತ್ತಾರೆ. ಒಟ್ಟಿನಲ್ಲಿ ಅವರು ನಮ್ಮನ್ನು ದಾರಿ ತಪ್ಪಿಸಿ, ನಮ್ಮ ಬದುಕಿಗೆ ಬೆಂಕಿಯಿಟ್ಟು ಅವರ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ. ಇವತ್ತು ಸಮಾಜ ಉಳಿಯಲು ದುಡಿಯುವ ವರ್ಗದ ನಂಟುಗಳನ್ನು ಬೇಕೆಂದು ಅವರು ಅರಿಯಬೇಕು. ನಮ್ಮ ಹಕ್ಕುಗಳಿಗೆ ಕೈ ಹಾಕಿದರೆ, ಕಾಯ್ದೆ ತಿದ್ದುಪಡಿ ಮಾಡಿದರೆ. ಸರಕಾರದ ಆ ಕುರ್ಚಿಯನ್ನು ಎಳೆದು ರಸ್ತೆಗೆ ಬಿಸಾಡುವ ತಾಕತ್ತು ನಮಗಿದೆ. ಮುಂದಿನ ದಿನ ನಮ್ಮ ಹೋರಾಟ ತೀವ್ರ ಗೊಳಿಸಬೇಕು. ಕೆಂಬಾವುಟ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಕೆಂಬಾವುಟ ಹಿಡಿದು ಮಾಡಿದ ಹೋರಾಟಗಳು ಎಲ್ಲೂ ಸೋಲಿಲ್ಲ ಯಶಸ್ವಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಮುಖಂಡ ಶ್ಯಾಮರಾಜ್ ಪಟ್ರಮೆ ಅವರು ಮಾತನಾಡಿ ದುಡಿಯುವ ವರ್ಗದ ಪರವಾಗಿ ಸರಕಾರ ಇರಬೇಕು. ಆದರೆ ವಾಸ್ತವವಾಗಿ ಸರಕಾರ ನಮ್ಮ ಮೇಲೆ ಅಧಿಕಾರ ಚಲಾಯಿಸುತ್ತಿದೆ. ನಾವು ಮೌನವಾಗಿರದೆ ಹೋರಾಟದಲ್ಲಿ ಭಾಗಿಯಾಗಬೇಕೆಂದು ಹೇಳಿದರು. ಅಕ್ಷರ ದಾಸೋಹ ನೌಕರರ ಸಂಘದ ಪುತ್ತೂರು ಅಧ್ಯಕ್ಷೆ ರಂಜಿತಾ, ಪ್ರಧಾನ ಕಾರ್ಯದರ್ಶಿ ಲತಾ, ಸುಳ್ಯ ಸಂಘದ ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನಾ, ಕಡಬ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ಭವ್ಯ, ಕಾರ್ಮಿಕ ಮುಖಂಡರಾದ ಜನಾರ್ದನ ಪುತ್ತೂರು, ದಾಮೋದರ ಸಹಿತ ಅಕ್ಷರದಾಸೋಹ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.


ಕೇಂದ್ರ ಸರಕಾರ ಹೇಳುವುದೊಂದು ಮಾಡುವುದೊಂದು
ಕೇರಳ ಸರಕಾರ ಬಿಸಿಯೂಟದ ನೌಕರರಿಗೆ ರೂ. 13 ಸಾವಿರ ನೀಡುತ್ತಿದೆ. ಆದರೆ ಇಲ್ಲಿ ರೂ3,500 ಸಾವಿರ ಮಾತ್ರ ನೀಡುತ್ತಿದೆ. ಇದರಲ್ಲಿ ರಾಜ್ಯ ಸರಕಾರದ ಪಾಲು ಹೆಚ್ಚಿದ್ದರೂ ಕೇಂದ್ರ ಸರಕಾರ ಈ ಹಿಂದಿನ 600 ರೂ ಮಾತ್ರ ಕೊಡುತ್ತಿದೆ. ಕೇಂದ್ರ ಸರಕಾರಕ್ಕೆ ಇನ್ನು ಸಂಬಳ ಜಾಸ್ತಿ ಮಾಡಲು ಮನಸಿಲ್ಲ. ಒಂದು ವೇಳೆ ಕೇಂದ್ರ ಸರಕಾರವೂ ರಾಜ್ಯ ಸರಕಾರದ ರೀತಿಯಲ್ಲಿ ಪಾಲು ಕೊಡುತ್ತಿದ್ದರೆ ಕನಿಷ್ಟ 8 ಸಾವಿರ ರೂಪಾಯಿ ಸಂಬಳ ಪಡೆಯಬಹುದಿತ್ತು. ಆದರೆ ಕೇಂದ್ರ ಸರಕಾರ ಹೇಳುವುದೊಂದು ಮಾಡುವುದೊಂದು.
ಈಶ್ವರಿ ಕಾರ್ಮಿಕ ಮುಖಂಡೆ


ಅಕ್ಷರದಾಸೋಹ ನೌಕರರ ವಿವಿಧ ಬೇಡಿಕೆಗಳು
ಅಕ್ಷರ ದಾಸೋಹ ನೌಕರರಿಗೆ ಕನಿಷ್ಟ 26ಸಾವಿರ ಮತ್ತು ಮಾಸಿಕ 10 ಸಾವಿರ ವೇತನ ನೀಡಬೇಕು. ಅಡುಗೆ ಕೇಂದ್ರದ ಸುರಕ್ಷತೆ ಕಾಯ್ದುಕೊಳ್ಳಬೇಕು. ವರ್ಷದ 12 ತಿಂಗಳ ಕೆಲಸ ಮತ್ತು ಕನಿಷ್ಠ ಕೂಲಿ ನೀಡಬೇಕು. ಅಕ್ಷರದಾಸೋ ನೌಕರರಿಗೆ ಇತರ ಕೆಲಸ ಕೊಡಿಸಬಾರದು. ನೌಕರರು ಮರಣ ಹೊಂದಿದರೆ ರೂ. 25ಲಕ್ಷ ಪರಿಹಾರ ಕೊಡಿಸಬೇಕು ಸಹಿತ ಹಲವು ಬೇಡಿಕೆಗಳ ಮನವಿಯನ್ನು ಸಹಾಯಕ ಕಮೀಷನರ್ ಅವರ ಮೂಲಕ ಸರಕಾರಕ್ಕೆ ನೀಡಲಾಯಿತು.

LEAVE A REPLY

Please enter your comment!
Please enter your name here