ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರು : ಪ್ರಿಯಾಶ್ರೀ ಕೆ.ಎಸ್.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾಲಯದಲ್ಲಿ ಬುಧವಾರ ಗುರುಪಾದುಕೆಯನ್ನು ಪೂಜಿಸುವ ಮೂಲಕ ಗುರುಪೂರ್ಣಮಿ ದಿನವನ್ನು ಆಚರಿಸಲಾಯಿತು.
ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್ ಮಾತನಾಡಿ ಗುರು ಎಂದರೆ ಅಜ್ಞಾನದ ಅಂಧಕಾರವನ್ನು ದೂರಮಾಡುವವನು. ಮನುಷ್ಯ ಜಗತ್ತಿಗೆ ಅರಿವನ್ನು ತೋರಿದಾತ ಗುರು. ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರುವೇ ಆಗಿದ್ದಾನೆ. ಹರಿ ಪಥವನ್ನರಿವೊಡೆ ಗುರು ಪಥವೇ ಮೊದಲು, ಹರಿ ಮುನಿದರೆ ಗುರು ಕಾಯುವ ಎಂಬ ಮಾತು ಸಹ ಇದೆ, ಆದ್ದರಿಂದ ನಮ್ಮ ಪರಂಪರೆ ದೇವರಿಗೂ ಮಿಗಿಲಾದ ಸ್ಥಾನವನ್ನು ಗುರುವಿಗೆ ನೀಡಿತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಪಾದ ಪೂಜೆಯು ಶರಣಾಗತಿ, ಶ್ರದ್ಧೆ, ಭಕ್ತಿ ಮತ್ತು ಜ್ಞಾನ ಅನ್ವೇ?ಣೆಯ ಸಂಕೇತವಾಗಿದೆ. ಇದು ಕೇವಲ ಆಚರಣೆ ಮಾತ್ರವಲ್ಲ ಆತ್ಮ ಅನ್ವೇಷಣೆಯ ಒಂದು ಬಾಗಿಲಾಗಿದೆ ಎಂದು ಗುರು ಮತ್ತು ಗುರುಪಾದಪೂಜೆಯ ಮಹತ್ವದ ಕುರಿತು ಮಾಹಿತಿಯನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಅವನಿ ಗುರು ಪೂರ್ಣಿಮಾದ ಕುರಿತು ವಿಷಯವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ವಿದ್ಯಾ ಪೈ ಗುರು ಶಿಷ್ಯ ಸಂಬಂಧದ ಕುರಿತು ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಶಾಲಾ ಉಪ ಪ್ರಾಂಶುಪಾಲರಾದ ಸುಜನಿ ಬೋರ್ಕರ್, ಶಿಕ್ಷಕಿಯರಾದ ನಿರ್ಮಲಾ, ಕುಸುಮಾ, ಸುಚಿತ್ರಾ ಇವರು ಪಾದುಕಾ ಪೂಜೆಯನ್ನು ನೆರವೇರಿಸಿದರು. ಇದಾದ ಬಳಿಕ ಶಾಲೆಗೆ ನೂತನವಾಗಿ ದಾಖಲಾತಿ ಕೊಂಡ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ವಿದ್ಯಾರ್ಥಿಗಳಾದ ಸಾನ್ವಿಕ ಸ್ವಾಗತಿಸಿ, ಕರ್ಣಾಶೃತ್ ವಂದಿಸಿದರು. ಭುವಿ, ಸಮನ್ವಿತ ನಿರೂಪಿಸಿದರು.