ಪುತ್ತೂರು: ಟಾರ್ಪಲ್ ಹೊದಿಸಿದ ಬಡ ಗುಡಿಸಲಿನಲ್ಲಿ ವಾಸವಾಗಿದ್ದ ಬಡ ಕುಟುಂಬಕ್ಕೆ ಸೂರು ಒದಗಿಸುವ ಮೂಲಕ ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಆ ಮನೆಗೆ ಬೆಳಕಾಗಿದೆ. ಹೌದು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ತೆಗ್ಗು ಎಂಬಲ್ಲಿ ವಾಸವಾಗಿದ್ದ ತಿಮ್ಮಪ್ಪರವರ ಕುಟುಂಬವು ಕಳೆದ ಹಲವು ವರ್ಷಗಳಿಂದ ಟಾರ್ಪಲ್ ಹೊದಿಸಿದ ಬಡ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಇದನ್ನು ಗಮನಿಸಿ ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯವರು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 100ನೇ ಹುಟ್ಟುಹಬ್ಬದ ಅಂಗವಾಗಿ ಸುಮಾರು 4 ಲಕ್ಷ 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮನೆ ‘ಪ್ರಶಾಂತಿ’ ಇದರ ಹಸ್ತಾಂತರ ಕಾರ್ಯಕ್ರಮವು ಜು.10ರಂದು ನಡೆಯಿತು. ಬೆಳಿಗ್ಗೆ ನಾಮ ಸಂಕೀರ್ತನೆ ನಡೆದು ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ನಡೆದು ಬಳಿಕ ಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಿತು.

ಹಿರಿಯರಾದ ಪದ್ಮನಾಭ ನಾಯಕ್‌ರವರು ತಿಮಪ್ಪ ಹಾಗೂ ಅವರ ಪತ್ನಿ ರಾಧಿಕ ಕುಟುಂಬಕ್ಕೆ ಕೀ ಹಸ್ತಾಂತರಿಸಿ ಶುಭ ಹಾರೈಸಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್‌ರವರು ಮನೆಯ ನಾಮಫಲಕ ಅನಾವರಣ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್, ಜಿಲ್ಲಾ ಯುವ ಸಂಯೋಜಕ ಉಮೇಶ್ ಊಳಿ, ಶ್ರೀ ಸತ್ಯಸಾಯಿ ಸೇವಾ ಸಮಿತಿ ಸದಸ್ಯ ಶ್ರೀಧರ ಪೂಜಾರಿ ಕೋಡಂಬು, ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈ, ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಸದಸ್ಯ ಚಂದ್ರಶೇಖರ ರೈ ಇಳಂತಾಜೆ, ಒಡಿಯೂರು ಸೇವಾ ಬಳಗದ ವಿಶ್ವನಾಥ ರೈ ಸಾಗು, ಶಶಿಧರ ಪಾಟಾಳಿ ಮೇರ್ಲ ಹಾಗೇ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ತೆಗ್ಗು ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು. ಶ್ರೀ ಸತ್ಯಸಾಯಿ ಸಮಿತಿಯ ತಾಲೂಕು ಸಂಚಾಲಕ ದಯಾನಂದ ಕೆ.ಎಸ್. ಸ್ವಾಗತಿಸಿದರು. ಶ್ರೀ ಸತ್ಯಸಾಯಿ ಬಾಬಾರವರ 100ನೇ ವರ್ಷಾಚರಣೆಯ ಕಾರ್ಯಾಧ್ಯಕ್ಷ ರಘುನಾಥ ರೈ ವಂದಿಸಿದರು.
ರೂ.4.50 ಲಕ್ಷ ರೂ. ವೆಚ್ಚದ ಮನೆ
ತಿಮ್ಮಪ್ಪ ಹಾಗೂ ರಾಧಿಕಾ ಕುಟುಂಬಕ್ಕೆ ಜಾಗವಿದ್ದರೂ ಸರಿಯಾದ ದಾಖಲೆಗಳು ಇಲ್ಲದೆ ಮನೆ ನಿರ್ಮಾಣಕ್ಕೆ ಕಷ್ಟವಾಗಿತ್ತು. ಇದನ್ನು ಮನಗಂಡ ಶ್ರೀ ಸತ್ಯಸಾಯಿ ಸೇವಾ ಸಮಿತಿಯು ತನ್ನ ವತಿಯಿಂದ ಸುಮಾರು ರೂ.4 ಲಕ್ಷ 50 ಸಾವಿರ ವೆಚ್ಚದಲ್ಲಿ ಎಲ್ಲಾ ವ್ಯವಸ್ಥೆಗಳಿರುವ ಅಂದವಾದ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಿದ್ದಾರೆ. ಶೌಚಾಲಯ ನಿರ್ಮಾಣಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್‌ನಿಂದ ಸಹಾಯಧನ ನೀಡಿದ್ದರು ಹಾಗೇ ಪುತ್ತೂರು ಪ್ರಶಾಂತ್ ಎಂಟರ್‌ಪ್ರೈಸಸ್‌ನ ಮಾಲಕ ಪ್ರಶಾಂತ್ ಶೆಣೈಯವರ ಮನೆಗೆ ಪೈಂಟ್‌ನ ದೇಣಿಗೆ ನೀಡಿದ್ದಾರೆ.