ಪುತ್ತೂರು: 2025ನೇ ಸಾಲಿನ ಚಿದಾನಂದ ಪ್ರಶಸ್ತಿಯ ಗೌರವಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಂಶೋಧಕ ಡಾ|ಬಿ.ಎ. ವಿವೇಕ್ ರೈ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯು ವಿದ್ವಾಂಸ ಡಾ.ಎಂ.ಚಿದಾನಂದ ಮೂರ್ತಿ ಅವರ ಹೆಸರಿನಲ್ಲಿ 32 ವರ್ಷಗಳಿಂದ ಪ್ರತೀವರ್ಷ ಸಂಶೋಧಕರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದ್ದು ಮಂಗಳೂರಿನಲ್ಲಿ ಪ್ರಶಸಿ ಪ್ರದಾನ ನಡೆಯಲಿದೆ.
ಕಳೆದ ಆರು ದಶಕಗಳಿಂದ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇವರು ಕನ್ನಡ ಹಾಗೂ ತುಳು ಭಾಷೆಯ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ವಿಭಾಗದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ 34 ವರ್ಷ ಅಧ್ಯಾಪನ ಹಾಗೂ ಸಂಶೋಧನಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದ ವಿವೇಕ್ ರೈಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ, ಜರ್ಮನಿಯ ವ್ಯೂಕ್ ಬುರ್ಗ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಸೇರಿದಂತೆ ೨೦ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮಡಿಲನ್ನು ಸೇರಿದೆ. ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನ, ಕರ್ನಾಟಕ ಜಾನಪದ ಸಮ್ಮೇಳನ, ಕರ್ನಾಟಕ ಸಂಸ್ಕೃತಿ ಸಮ್ಮೇಳನ, ಕರ್ನಾಟಕ ದೇಸಿ ಸಮ್ಮೇಳನ ಹಾಗೂ ಕುವೈಟ್ ತುಳು ಸಮ್ಮೇಳನ ಸೇರಿದಂತೆ ಅನೇಕ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ.ಪುಣಚ ಗ್ರಾಮದ ಅಗ್ರಾಳ ನಿವಾಸಿಯಾಗಿರುವ ವಿವೇಕ್ ರೈಯವರು ಪ್ರಸ್ತುತ ಮಂಗಳೂರು ನಿವಾಸಿಯಾಗಿದ್ದಾರೆ.