ಪುತ್ತೂರು: ಗುರುಪೂರ್ಣಿಮೆ ಅಂಗವಾಗಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಇದರ ವಿದ್ಯಾರ್ಥಿಗಳು ನೃತ್ಯಗುರುವಿಗೆ ಗುರು ವಂದನೆ ಕಾರ್ಯಕ್ರಮವನ್ನು ನೃತ್ಯಾರ್ಚನೆ
ಮೂಲಕ ಇಲ್ಲಿನ ಬರೆಕರೆ ವೆಂಕಟರಮಣ ಸಭಾಭವನದ ನೃತ್ಯ ಕೇಂದ್ರದಲ್ಲಿ ಗುರುವಾರ ವೈಶಿಷ್ಟ್ಯಪೂರ್ಣವಾಗಿ ನಡೆಸಿದರು.




ಗುರುವಿನ ಮಹತ್ವವನ್ನು ಸಾರುವ ಶಾಸ್ತ್ರೀಯ ಹಾಡಿಗೆ ವಿದ್ಯಾರ್ಥಿಗಳೇ ನೃತ್ಯ ಸಂಯೋಜನೆ ಮಾಡುವ ಮೂಲಕ ನೃತ್ಯವನ್ನು ಗುರುವಿಗೆ ಸಮರ್ಪಿಸಿದರು. ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಗೆ ಗುರು ನಮನ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭ ಮಾತನಾಡಿದ ಶಾಲಿನಿ ಆತ್ಮಭೂಷಣ್, ನನ್ನ ಶಿಷ್ಯರು ಅರ್ಪಿಸಿದ ಗುರು ನಮನ ನನಗೆ ಮಾತ್ರ ಸೇರಿದ್ದಲ್ಲ, ನನ್ನ ಗುರುಗಳಿಗೂ ಇದನ್ನು ಸಮರ್ಪಿಸುತ್ತೇನೆ. ಗುರು ಇಲ್ಲದೆ ಯಾವುದೇ ವಿದ್ಯೆ ಇಲ್ಲ. ನನ್ನ ಈವರೆಗಿನ ಎಲ್ಲ ಸಾಧನೆಯ ಹಿಂದೆ ಗುರುಗಳ ಪರಿಶ್ರಮ ಇದೆ. ಗುರುವೇ ಸರ್ವಸ್ವ, ಎಲ್ಲವೂ ಗುರುಗಳ ಚರಣಕ್ಕೆ ಸಮರ್ಪಿತ ಎಂದರು.
ಗುರುವಿಗೆ ನೃತ್ಯಾರ್ಪಣ ಕಾರ್ಯಕ್ರಮದಲ್ಲಿ ಕಲಾ ಅಕಾಡೆಮಿ ವಿದ್ಯಾರ್ಥಿಗಳಾದ ಅಕ್ಷಯ ಎಸ್.ಬಿ., ತೇಜಸ್ವಿರಾಜ್, ವಿದ್ಯಾಲಕ್ಷ್ಮಿ, ಶ್ರೀಮಾ ಬಿ., ಧನ್ಯಶ್ರೀ ಕೆ., ತನುವಿ, ಸಿಂಚನಾ ಎಸ್.ಭಟ್, ಫಲ್ಗುಣಿ ವಿಟ್ಲ, ಪೃಥ್ವಿಶ್ರೀ, ಭಾರತಿ ಎಂ., ಶ್ರದ್ಧಾ ಹಾಗೂ ಶ್ರಾವ್ಯ ಉಪ್ಪಿನಂಗಡಿ ಮತ್ತಿತರರಿದ್ದರು.