ನೆಲ್ಯಾಡಿ: ಸಹೋದರರೊಳಗೆ ಜಗಳ ನಡೆದು ಅಣ್ಣ ಕತ್ತಿಯಿಂದ ಕಡಿದ ಪರಿಣಾಮ ಗಂಭೀರ ಗಾಯಗೊಂಡ ತಮ್ಮ ರಾಜಶೇಖರ (37ವ.)ಎಂಬವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜು.15ರಂದು ರಾತ್ರಿ ನೆಲ್ಯಾಡಿ ಸಮೀಪ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ನಡೆದಿದೆ.

ರಾಜಶೇಖರ ಅವರು ಜು.15ರಂದು ರಾತ್ರಿ 11 ಗಂಟೆ ವೇಳೆಗೆ ಆಲಂಪಾಡಿಯ ತನ್ನ ಮನೆಯಲ್ಲಿದ್ದ ವೇಳೆ ತಮ್ಮ ಮನೋಜ್‌ಕುಮಾರ್ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವೇಳೆ ರಾಜಶೇಖರ ಹಾಗೂ ಮನೋಜ್ ಕುಮಾರ್ ನಡುವೆ ಉರುಡಾಟ ನಡೆದಿದೆ. ಅದೇ ಸಮಯಕ್ಕೆ ಅಣ್ಣ ಜಯರಾಜ್ ಕತ್ತಿ ಹಿಡಿದುಕೊಂಡು ಬಂದು ರಾಜಶೇಖರ ಅವರ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ರಾಜಶೇಖರ ಅವರ ತಲೆಯ ಹಿಂಭಾಗ, ಹಣೆಗೆ, ಎರಡು ಬದಿಯ ಕೆನ್ನೆಗೆ, ಬಲಕೈಯ ತೋರುಬೆರಳಿಗೆ, ಎಡಕೈಯ ಉಂಗುರು ಬೆರಳಿಗೆ, ಎಡಬದಿಯ ಕಾಲರ್ ಬಾನ್‌ಗೆ ಗಾಯವಾಗಿದೆ. ಗಾಯಗೊಂಡಿದ್ದ ರಾಜಶೇಖರ ಅವರನ್ನು ಚಿಕಿತ್ಸೆಗೆ ಅವರ ಇನ್ನೋರ್ವ ಅಣ್ಣ ಬಾಲಕೃಷ್ಣ ರವರು ಮಂಗಳೂರು ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದಾರೆ. ಗಾಯಾಳು ರಾಜಶೇಖರ ನೀಡಿರುವ ದೂರಿನಂತೆ ಅವರ ಅಣ್ಣ ಜಯರಾಜ್ ಹಾಗೂ ತಮ್ಮ ಮನೋಜ್ ಕುಮಾರ್ ವಿರುದ್ದ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.