




@ ಸಿಶೇ ಕಜೆಮಾರ್
ಧೋ…ಎಂದು ಸುರಿಯುವ ಮಳೆಯ ನಡುವೆಯೇ ತುಳುವರ ‘ಆಟಿ’ ತಿಂಗಳು ಆರಂಭವಾಗುತ್ತಿದೆ. ಹೌದು ತುಳುವರ ಕಷ್ಟದ ಮತ್ತು ಇಷ್ಟದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ಆಟಿ ತಿಂಗಳು ಜು.೧೭ ರಿಂದ ಆರಂಭವಾಗುತ್ತಿದೆ. ನಮ್ಮ ಹಿರಿಯರ ಕಾಲದ ಆಟಿ ತಿಂಗಳಿಗೂ ಇಂದಿನ ಆಧುನಿಕತೆಯ ಕಾಲಘಟ್ಟದ ಆಟಿ ತಿಂಗಳಿಗೂ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಅಂದಿನ ಕಾಲದಲ್ಲಿ ಎಡೆಬಿಡದೆ ಧೋ ಎಂದು ಸುರಿಯುವ ಮಳೆ ಒಂದು ಕಡೆಯಾದರೆ ಆಗೊಮ್ಮೆ ಈಗೊಮ್ಮೆ ಬೀಳುವ ರಣ ಬಿಸಿಲು. ಮಾಡಲು ಕೆಲಸವಿಲ್ಲದೆ ತಿನ್ನಲು ಆಹಾರಕ್ಕೂ ಕಷ್ಟ ಪಡುತ್ತಿದ್ದ ಅಂದಿನ ಆಟಿ ತಿಂಗಳನ್ನು ಇಂದು ಕಾಣಲು ಸಾಧ್ಯವಿಲ್ಲ. ಏಕೆಂದರೆ ಬದಲಾವಣೆ ಜಗದ ನಿಯಮ ಎಂಬಂತೆ ಕಾಲ ಬದಲಾದಂತೆ ಜನರ ಜೀವನ ಕ್ರಮಗಳು ಕೂಡ ಬದಲಾಗತೊಡಗಿತು. ಕಷ್ಟದ ದಿನಗಳು ಕಳೆದು ಹೋಗಿವೆ. ಅದೇನೇ ಆದರೂ ‘ಆಟಿ’ ತಿಂಗಳಿಗಿರುವ ಮಹತ್ವ ಮಾತ್ರ ಬದಲಾಗಿಲ್ಲ. ಇಂದಿಗೂ ತುಳುವರು ಆಟಿ ತಿಂಗಳನ್ನು ಬಹಳ ವಿಶೇಷ ತಿಂಗಳು ಎಂದೇ ನಂಬುತ್ತಾರೆ. ಅಂದಿನ ಕಷ್ಟ ಇಲ್ಲದಿದ್ದರೂ ಆಟಿ ಮಾತ್ರ ಇಂದಿಗೂ ಎಲ್ಲರ ಇಷ್ಟದ ತಿಂಗಳಾಗಿ ಉಳಿದುಕೊಂಡಿದೆ.



ಆಟಿ ತಿಂಗಳ ತಿನಿಸುಗಳು
ಜನರು ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಆಹಾರಕ್ಕಾಗಿ ಪ್ರಕೃತಿಯ ಮೊರೆ ಹೋಗುತ್ತಿದ್ದರು. ಪ್ರಕೃತಿಯಲ್ಲಿ ಸಿಗುವ ಗಡ್ಡೆ ಗೆಣಸು, ಫಲ ವಸ್ತುಗಳನ್ನು ಬಳಸಿಕೊಂಡು ಸಿಹಿಯಾದ ಮತ್ತು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಿದ್ದರು. ಆಟಿ ತಿಂಗಳಿನಲ್ಲಿ ಪ್ರತಿ ಮನೆಯಲ್ಲೂ ಪ್ರಕೃತಿಯಲ್ಲಿ ದೊರೆಯುವ ಸಸ್ಯ ಸಂಬಂಧಿ ಗೆಡ್ಡೆ ಗೆಣಸುಗಳ ತಿನಿಸುಗಳು ಇದ್ದೇ ಇರುತ್ತದೆ.





ತುಳುವರು ನಂಬಿಕಸ್ಥರು ಮತ್ತು ಎಲ್ಲದರ ಮೇಲೆ ನಂಬಿಕೆ ಇಡುವವರು ಅದೇ ಕಾರಣಕ್ಕೆ ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ದೊರೆಯುವ ಫಲವಸ್ತುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವ ನಂಬಿಕೆ ತುಳುವರದ್ದಾಗಿದೆ. ಆಟಿ ತಿಂಗಳಿಗಾಗಿಯೇ ತಯಾರಿಸಿದ ಹಪ್ಪಳ, ಸಾಂತಣಿ, ಹಲಸಿನ ಬೀಜ, ಉಪ್ಪು ನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ, ಉಪ್ಪಡಚ್ಚಿಲ್,ನೀರು ಕುಕ್ಕು ಇತ್ಯಾದಿಗಳ ತಿನಿಸುಗಳನ್ನು ತಯಾರಿಸಲಾಗುತ್ತದೆ. ಅರಿಶಿನ ಎಲೆಯ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ,ಎಳೆ ಬಿದಿರಿನ ಪಲ್ಯ, ಉಪ್ಪಿನಕಾಯಿ, ತಜಂಕ ಪಲ್ಯ, ಮೋಡೆ, ಹಲಸಿನ ಎಲೆಯ ಕಡುಬು, ಹಲಸಿನ ಕಡುಬು, ಪತ್ರೊಡೆ, ಕೆಸುವಿನ ಚಟ್ನಿ, ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಸೌತೆ ಪದೆಂಗಿ ಗಸಿ, ತಜಂಕ್ ವಡೆ, ತೇವು ಪದ್ಪೆ ಗಸಿ ಇತ್ಯಾದಿ ತಿನಿಸಿಗಳನ್ನು ಆಟಿ ತಿಂಗಳಲ್ಲಿ ಮಾತ್ರ ನೋಡಬಹುದು ಹಾಗೂ ತಿನ್ನಬಹುದಾಗಿದೆ.
ಆಟಿ ತಿಂಗಳಲ್ಲೇ ಹಬ್ಬಗಳ ಆರಂಭ
ಆಟಿ ಆಷಾಢವಾದರೂ ಹಬ್ಬಗಳು ಮಾತ್ರ ಆಟಿ ತಿಂಗಳಲ್ಲೇ ಆರಂಭವಾಗಿ ಬಿಡುತ್ತವೆ. ಆಟಿ ಅಮಾವಾಸ್ಯೆಯಿಂದ ತುಳುವರ ಹಬ್ಬ ಹರಿದಿನಗಳು ಆರಂಭವಾಗುತ್ತವೆ. ಆ ಬಳಿಕ ನಾಗರ ಪಂಚಮಿ ಬರುತ್ತದೆ. ಹೀಗೆ ಮುಂದಕ್ಕೆ ಸಾಲು ಸಾಲು ಹಬ್ಬಗಳು ಎದುರುಗೊಳ್ಳುತ್ತವೆ. ಆಟಿ ತಿಂಗಳಲ್ಲಿ ಬರುವ ಆಟಿ ಕಳೆಂಜ ಎಂಬ ಮಾಂತ್ರಿಕ ಶಕ್ತಿಯ ಆರಾಧನೆ ಬಹಳ ವಿಶೇಷವಾಗಿದೆ.ತುಳುನಾಡಿಗೆ ಬರುವ ರೋಗ ರುಜಿನಗಳನ್ನು ಆಟಿ ಕಳೆಂಜ ಬಂದು ದೂರ ಮಾಡುತ್ತಾನೆ ಎನ್ನುವ ನಂಬಿಕೆ ಅದೇ ರೀತಿ ತುಳುವರಿಗೆ ಬರುವ ಸರ್ವ ರೋಗಗಳನ್ನು ವಾಸಿ ಮಾಡುವ ಸಲುವಾಗಿ ಆಟಿ ಅಮಾವಾಸ್ಯೆಯ ದಿನ ಕುಡಿಯುವ ಹಾಲೆ ಮರ(ಪಾಲೆದ ಮರ)ದ ಕಷಾಯ(ಆಟಿದ ಮರ್ದ್) ಕೂಡ ತುಳುನಾಡಲ್ಲಿ ಬಹಳ ವಿಶೇಷತೆಯನ್ನು ಪಡೆದುಕೊಂಡಿದೆ.
ದೈವಗಳಿಗೆ ತಂಬಿಲ, ಪ್ರೇತಗಳಿಗೆ ಸಮ್ಮನ
ತುಳುವರು ಅನಾದಿ ಕಾಲದಿಂದಲೂ ದೈವರಾಧಕರು ಆಗಿದ್ದಾರೆ. ಗುಡ್ಡದಲ್ಲಿ ಕಲ್ಲು ಹಾಕಿ ಅದರ ಮೇಲೆ ಹೂ ಇಟ್ಟು ‘ಸ್ವಾಮಿ ದೈವೊನೆ’ ಎಂದು ಭಕ್ತಿಯಿಂದ ನಂಬುವವರು. ಭೂಮಿಗೆ ಕೈ ಮುಟ್ಟಿ ನಮಸ್ಕಾರ ಮಾಡುವ ಮೂಲಕ ಭೂಮಿಯೇ ದೇವರೆಂದು ನಂಬಿದವರು. ತುಳುನಾಡಿನಲ್ಲಿ ಇರುವಷ್ಟು ದೈವ ದೇವರುಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಆದ್ದರಿಂದಲೇ ಆಟಿ ತಿಂಗಳಲ್ಲಿ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆಸುತ್ತಾರೆ. ತುಳುವರು ಪ್ರೇತಗಳನ್ನು ಕೂಡ ನಂಬುತ್ತಾರೆ. ಮನೆಯ ಸದಸ್ಯ ಸತ್ತ ಮೇಲೆ ಆತನ ಆತ್ಮ ಪ್ರೇತವಾಗಿ(ಕುಲೆ) ನಮ್ಮ ಮನೆಯಲ್ಲೇ ಇರುತ್ತದೆ ಎಂದು ಅದಕ್ಕಾಗಿಯೇ ಆಟಿ ತಿಂಗಳಲ್ಲಿ ಪ್ರೇತಗಳಿಗೆ ವಿಶೇಷವಾದ ಸಮ್ಮನ(ಅಗೇಲು) ಬಡಿಸುವ ಕ್ರಮ ಮಾಡುತ್ತಾರೆ.
ಆಟಿ ಎಂದರೆ ಆಷಾಢ
ತುಳುವರಿಗೆ ಪಗ್ಗು ತಿಂಗಳಲ್ಲಿ ವರ್ಷ ಆರಂಭವಾದರೆ, ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು. ತುಳುನಾಡಿನ ಮೊದಲ ಹಬ್ಬ ಶುರುವಾಗುವುದೇ ಆಟಿ ಅಮಾವಾಸ್ಯೆಯ ದಿನ. ತುಳುವರಿಗೆ ಆಟಿ ಎಂದರೆ ಆಷಾಢ. ಈ ತಿಂಗಳಲ್ಲಿ ಮದುವೆ, ಗೃಹಪ್ರವೇಶ,ಹೊಸ ಮನೆ ಖರೀದಿ, ಹೊಸ ಜಾಗ ಖರೀದಿ ಇತ್ಯಾದಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಶುಭ ಕಾರ್ಯಗಳನ್ನು ಮಾಡಬೇಕಾದರೆ ಆಟಿ ತಿಂಗಳು ಕಳೆಯಬೇಕು. ವರ್ಷದ ಆರಂಭದಲ್ಲಿ ಮದುವೆಯಾದ ನವ ವಧು ತನ್ನ ತಾಯಿ ಮನೆಗೆ ಹೋಗುವ ‘ ಆಟಿ ಕುಳ್ಳುನ’ ಕಾರ್ಯಕ್ರಮ ಸೇರಿದಂತೆ ಆಟಿ ತಿಂಗಳಲ್ಲಿ ತುಳುವರು ಆಚರಿಸುವ ಪದ್ಧತಿಗಳು ಮಾತ್ರ ಅತ್ಯಂತ ವಿಶಿಷ್ಟ.






