ಸವಣೂರು: ನವೆಂಬರ್ ತಿಂಗಳ ಒಳಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರಿಗೆ ಕುರ್ಚಿ ಬಿಟ್ಟು ಕೊಡುತ್ತಾರೆ ಇಲ್ಲಾಂದ್ರೆ ಡಿ.ಕೆ.ಶಿ.ಯವರು ಬಲವಂತವಾಗಿ ಕುರ್ಚಿ ಪಡೆಯುತ್ತಾರೆ ಎಂದು ಮಾಜಿ ಸಚಿವ ಗಂಗಾವತಿ ಶಾಸಕ ಗಣಿದನಿ ಗಾಲಿ ಜನಾರ್ಧನ ರೆಡ್ಡಿ ಭವಿಷ್ಯ ನುಡಿದರು.
ಅವರು ಬುಧವಾರ ಕಡಬ ತಾಲೂಕಿನ ಸವಣೂರು ಗ್ರಾಮದ ಆರೆಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಭಾಭವನದ ಶಿಲನ್ಯಾಸ ನೆರವೇರಿಸಿದ ಬಳಿಕ ಮಾಜಿ ಸಂಸದ ನಳಿಕುಮಾರ್ ಕಟೀಲ್ ಅವರ ಪಾಲ್ತಾಡಿಯ ಕುಂಜಾಡಿ ಮನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ನನಗೆ ತಿಳಿದಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿ ಮದ್ಯೆ ಫಿಫ್ಟಿ ಫಿಫ್ಟಿ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ತಿಳಿದು ಡಿ.ಕೆ.ಶಿ ತಮ್ಮ ಹಕ್ಕು ಪ್ರತಿಪಾದನೆ ಶುರು ಇಟ್ಟುಕೊಂಡಿದ್ದಾರೆ. ಅವರಲ್ಲಿ ಈಗ ಗೊಂದಲ ಉಂಟಾಗಿದೆ. ಡಿ.ದೇವರಾಜ ಅರಸು ಈ ರಾಜ್ಯದ ಮುಖ್ಯಮಂತ್ರಿಯಾಗಿ ಹೆಚ್ಚು ಕಾಲ ಆಡಳಿತ ನಡೆಸಿದ್ದಾರೆ, ನಾನು ಅದಕ್ಕಿಂತ ಒಂದು ದಿನವಾದರೂ ಹೆಚ್ಚು ಅಧಿಕಾರ ನಡೆಸಿ ಅವರ ದಾಖಲೆ ಮುರಿಯಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಮುಖ್ಯಮಂತ್ರಿಯವರು ದಾಖಲೆ ಮುರಿದ ಬಳಿಕ ಕುರ್ಚಿ ಬಿಟ್ಟುಕೊಡಲಿದ್ದಾರೆ. ಒಪ್ಪಂದ ಪ್ರಕಾರ ಡಿ.ಕೆ.ಶಿವಕುಮಾರ್ ವರಿಗೆ ಅಧಿಕಾರ ಹಂಚಿಕೆ ಮಾಡಿಕೊಡಲಿದ್ದಾರೆ. ನವೆಂಬರ್ ತಿಂಗಳ ಒಳಗೆ ಈ ವಿದ್ಯಮಾನ ನಡೆಯಲಿದೆ. ಈ ವಿಚಾರವನ್ನು ಸಂಡೂರು ಉಪ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ ಈಗ ಅದು ನಿಜವಾಗಲಿದೆ. ಸಿದ್ದರಾಮಯ್ಯ ಬಿಟ್ಟುಕೊಡದಿದ್ದರೆ ಅಧಿಕಾರ ಪಡೆಯಲೇ ಬೇಕು ಎನ್ನುವ ಆತುರಕ್ಕೆ ಬಿದ್ದಿರುವ ಡಿ.ಕೆ.ಶಿ.ಯವರು ಬಲವಂತಾವಾಗಿ ಕುರ್ಚಿ ತಗೊಂಡು ಅದರಲ್ಲಿ ಕೂಡುವುದರಲ್ಲಿ ಸಂಶಯವಿಲ್ಲ ಎಂದರು. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತವಾಗಿದೆ, ನಾವು ಕಲ್ಯಾಣಕರ್ನಾಟ ಭಾಗದವರು ಅಲ್ಲಿಗೆ ವಿಶೇಷ ಅನುದಾನದ ನೆಲೆಯಲ್ಲಿ ನಮ್ಮ ಶಾಸಕರಿಗೆ ಒಂದಷ್ಟು ಅನುದಾನ ದೊರೆಯುತ್ತದೆ. ಆದರೆ ರಾಜ್ಯದ ಉಳಿದ ಭಾಗದ ಶಾಸಕರಿಗೆ ಯಾವುದೇ ಅನುದಾನವಿಲ್ಲ.
ಇವತ್ತು ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯ ಜನರಿಗೆ ಬೆಲೆ ಏರಿಕೆಯ ಶಿಕ್ಷೆಯನ್ನು ನೀಡಲಾಗುತ್ತಿದೆ. ಗ್ಯಾರಂಟಿಯನ್ನೂ ಸರಿಯಾಗಿ ಕೊಡುತ್ತಿಲ್ಲ. ಗೃಹಲಕ್ಷ್ಮೀ ದುಡ್ಡು ಕೊಡದೆ ನಾಲ್ಕು ತಿಂಗಳು ಆಗಿದೆ. ಯಾವುದಾದರೂ ಒಂದು ಚುನಾವಣೆ ಬಂದರೆ ಒಂದು ಕಂತು ಹಾಕುತ್ತಾರೆ. ಇದರಿಂದಾಗಿ ರಾಜ್ಯ ಕಾಂಗ್ರೇಸ್ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಆರೋಪಿಸಿದರು.
ಮುಂದೆ ನಮ್ಮದೇ ಸರಕಾರ
ಕಾಂಗ್ರೇಸ್ ಸರಕಾರದ ದುರಾಡಳಿತವನ್ನು ನೋಡಿರುವ ರಾಜ್ಯದ ಜನ ಬಿಜೆಪಿಗೆ ಮತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಒಳ್ಳೆಯ ಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಜನಾರ್ಧನ ರೆಡ್ಡಿ ಪಕ್ಷದ ನಿರ್ದೆಶನದಂತೆ ನಾವೆಲ್ಲಾ ಒಟ್ಟಾಗಿ ಪಕ್ಷವನ್ನು ಕಟ್ಟಿ . ಇಡಿ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬಹುಮತ ಪಡೆಯುತ್ತೇವೆ.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು. ಪಕ್ಷದೊಳಗಿನ ಅಸಮಾದಾನಗಳನ್ನು ಪಕ್ಷದ ವರಿಷ್ಠರು ಪರಿಹರಿಸುತ್ತಾರೆ. ಎಲ್ಲಾ ಪಕ್ಷದಲ್ಲೂ ಗೊಂದಲವಿದೆ ಆದರೆ ಬಿಜೆಪಿ ಇನ್ನೂ ಶಿಸ್ತಿನ ಪಕ್ಷವಾಗಿ ಉಳಿದಿದೆ, ಶಿಸ್ತನ್ನು ಮೀರಿದವರ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ವರಷ್ಠರು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ಸಂಘಟನೆ ವಿಚಾರದಲ್ಲಿ ರಾಷ್ಟಿಯ ನಾಯಕರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ತಕ್ಕಂತೆ ನಾವೆಲ್ಲಾ ಕೆಲಸ ಮಾಡುತ್ತೇವೆ. ರಾಜ್ಯಾಧ್ಯಕ್ಷ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದ ರೆಡ್ಡಿಯವರು ವರಿಷ್ಠರು ತೆಗೆದುಕೊಳ್ಳುವ ನಿರ್ಧಾಕ್ಕೆ ನಾವೆಲ್ಲಾ ಬದ್ದರಾಗಿರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮತ್ತಿತರರು ಇದ್ದರು.