ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಭಕ್ತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ದೇವರ ದರ್ಶನಕ್ಕೆ ಬರುವ ಸ್ತ್ರೀ ಅಥವಾ ಪುರುಷರು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು, ಧರಿಸಬಾರದು ಎಂಬುದರ ಬಗ್ಗೆ ನಾನು ಏಕಾಂಗಿಯಾಗಿ ತೀರ್ಮಾನ ಮಾಡುವಂತಿಲ್ಲ. ಇಲ್ಲಿಗೆ ಬರುವ ಪ್ರತೀಯೊಬ್ಬರು ಮಹಾಲಿಂಗೇಶ್ವರನ ಭಕ್ತರೇ ಆಗಿದ್ದಾರೆ, ದೇವರ ದರ್ಶನಕ್ಕೆ ಬರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರು ಸಭ್ಯ ವಸ್ತ್ರದಲ್ಲಿ ಬರುತ್ತಾರೆ ಎಂಬುದು ಎಲ್ಲರ ನಂಬಿಕೆ. ದರ್ಶನಕ್ಕೆ ಬರುವಾಗ ಇಂತದ್ದೇ ಬಟ್ಟೆ ಧರಿಸಬೇಕು ಎಂಬುದರ ಬಗ್ಗೆ ಚರ್ಚೆ ಅಗತ್ಯವಾಗಿದೆ. ವಸ್ತ್ರ ಸಂಹಿತೆಯ ಕಾರಣಕ್ಕೆ ಕೆಲವು ಕಡೆಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಆದ ಬಗ್ಗೆಯೂ ಕೇಳಿದ್ದೇನೆ. ಏನೇ ಮಾಡುವುದಿದ್ದರೂ ಅದು ಭಕ್ತರ ತೀರ್ಮಾನ ಮತ್ತು ದೇವರ ಇಚ್ಚೆಯಂತೆ ನಡೆಯಲಿದೆ ಎಂದು ಶಾಸಕರು ತಿಳಿಸಿದರು.