ಪುತ್ತೂರು: ಬೀರಮಲೆ ಬೆಟ್ಟದಲ್ಲಿ ಅಪ್ರಾಪ್ತ ಜೋಡಿಯನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನಲಾದ ಪ್ರಕರಣದ ಆರೋಪಿಗಳಾದ ರಾಮಚಂದ್ರ ಹಾಗೂ ಪುರುಷೋತ್ತಮ ಎಂಬವರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜು.5ರಂದು ಬೀರಮಲೆ ಬೆಟ್ಟದಲ್ಲಿ ಸುತ್ತಾಡುತ್ತಿದ್ದ ಜೋಡಿಯನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಜು.6ರಂದು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ರಾಮಚಂದ್ರ ಹಾಗೂ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಪುರುಷೋತ್ತಮ ಎಂಬವರನ್ನು ನಗರ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಆರೋಪಿಗಳಿಗೆ ಬಂಧನ ನೋಟಿಸ್ ಅನ್ನು ಜಾರಿಗೊಳಿಸದೆ ಬಂಧಿಸಿರುವುದನ್ನು ಮನಗಂಡ ನ್ಯಾಯಾಲಯವು ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು. ಸದ್ರಿ ಪ್ರಕರಣದಲ್ಲಿ ಪೊಲೀಸರು ಆನಂತರ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನು ಮನಗಂಡು ಆರೋಪಿಗಳು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ಜಿಲ್ಲಾ ನ್ಯಾಯಾಧೀಶರು ವಾದ ವಿವಾದಗಳನ್ನು ಆಲಿಸಿ, ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ವಕೀಲರಾದ ಅನಿಕೇತನ ಲಾ ಛೇಂಬರ್ಸ್ ನ ಕೃಷ್ಣ ಪ್ರಸಾದ್ ನಡ್ಸಾರ್ ಹಾಗೂ ಎಚ್ ಆಂಡ್ ಡಿ ಲೀಗಲ್ನ ದೀಪಕ್ ಬೊಳ್ವಾರು ವಾದಿಸಿದ್ದರು.