ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧಿಕೃತ ನಂದಿನಿ ಡೀಲರ್ ಆಗಿರುವ ಕುಂಬ್ರ ಮೊಂತೆರೋ ಸ್ವೀಟ್ಸ್ ಮಾಲಕರಾದ ಮೆಲ್ವಿನ್ ಮೊಂತೆರೋರವರಿಗೆ 2024-25 ನೇ ಸಾಲಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಪುತ್ತೂರು ತಾಲೂಕು ಮಟ್ಟದ ಗ್ರಾಮೀಣ ಪ್ರದೇಶದ ಅತ್ಯುತ್ತಮ ಡೀಲರ್ ಪ್ರಥಮ ಸ್ಥಾನವನ್ನು ನೀಡಿ ಗೌರವಿಸಲಾಯಿತು . ಪುತ್ತೂರು ತೆಂಕಿಲದಲ್ಲಿರುವ ದರ್ಶನ್ ಹಾಲ್ ನಲ್ಲಿ ನಡೆದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಒಕ್ಕೂಟದ ನಿರ್ದೇಶಕರುಗಳಾದ ಎಸ್.ಬಿ.ಜಯರಾಮ ರೈ, ಚಂದ್ರಶೇಖರ ರಾವ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರವಿರಾಜ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಮೆಲ್ವಿನ್ ಮೊಂತೆರೋರವರು ಕಳೆದ 15 ವರ್ಷಗಳಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರರಾಗಿದ್ದು ಕಳೆದ 5 ವರ್ಷಗಳಿಂದ ಅತ್ಯುತ್ತಮ ಡೀಲರ್ ಪ್ರಶಸ್ತಿ ಪಡೆದುಕೊಂಡು ಬಂದಿದ್ದಾರೆ.
5 ನೇ ಬಾರಿಗೆ ಪ್ರಶಸ್ತಿ
ಮೆಲ್ವಿನ್ ಮೊಂತೆರೋರವರು ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದು ಪ್ರಸ್ತುತ ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಇವರು ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್ ನಲ್ಲಿ ಕಳೆದ 23 ವರ್ಷಗಳಿಂದ ಮೊಂತೆರೋ ಸ್ವೀಟ್ಸ್ ಮತ್ತು ಬೇಕರಿ ನಡೆಸುತ್ತಿದ್ದಾರೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸತತ 5 ನೇ ಬಾರಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.